ಗೋವಾಕ್ಕೆ ಮತ್ತೆ 24 ಟಿಎಂಸಿ ಅಡಿ ನೀರು

7
ಮಹದಾಯಿ: ನ್ಯಾಯಮಂಡಳಿ ತೀರ್ಪು ಪ್ರಕಟ

ಗೋವಾಕ್ಕೆ ಮತ್ತೆ 24 ಟಿಎಂಸಿ ಅಡಿ ನೀರು

Published:
Updated:

ನವದೆಹಲಿ: ‘ವಾರ್ಷಿಕವಾಗಿ ಲಭ್ಯವಿರುವ ಮಹದಾಯಿಯ ಒಟ್ಟು 188 ಟಿಎಂಸಿ ಅಡಿ ನೀರಿನಲ್ಲಿ ಕರ್ನಾಟಕಕ್ಕೆ ಯಾವುದೇ ಪಾಲನ್ನು ಕೊಡುವಂತಿಲ್ಲ’ ಎಂದು ವಾದಿಸಿದ್ದ ಗೋವಾಗೆ ಈಗಿರುವ 9.395 ಟಿಎಂಸಿ ಅಡಿ ನೀರಿನ ಜೊತೆಗೆ ಹೆಚ್ಚುವರಿಯಾಗಿ ಮತ್ತೆ 24 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ನ್ಯಾಯಮೂರ್ತಿಗಳಾದ ವಿನಯ್‌ ಮಿತ್ತಲ್‌ ಹಾಗೂ ಪಿ.ಎಸ್‌. ನಾರಾಯಣ ಅವರನ್ನು ಒಳಗೊಂಡ ನ್ಯಾಯಮಂಡಳಿ ಅನುಮತಿ ನೀಡಿದೆ.

ನೀರಿನ ಮೇಲೆ ತನ್ನ ಹಕ್ಕು ಪ್ರತಿಪಾದಿಸಿದ್ದ ಮಹಾರಾಷ್ಟ್ರಕ್ಕೂ 1.33 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಲಾಗಿದ್ದು, ಮೂರೂ ರಾಜ್ಯಗಳು ಯಾವುದೇ ರೀತಿಯ ಕಾಮಗಾರಿ ಕೈಗೆತ್ತಿಕೊಳ್ಳಲು ಹೊಸದಾಗಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಕುಡಿಯಲು ಹಾಗೂ ನೀರಾವರಿಗಾಗಿ ಮಹದಾಯಿ ಕಣಿವೆ ವ್ಯಾಪ್ತಿಯಲ್ಲಿಯೇ ರಾಜ್ಯಕ್ಕೆ ಪ್ರತ್ಯೇಕವಾಗಿ 1.50 ಟಿಎಂಸಿ ಅಡಿ ನೀರನ್ನು ಒದಗಿಸಲಾಗಿದ್ದು, ಜಲ ವಿದ್ಯುತ್‌ ಉತ್ಪಾದನೆಗಾಗಿ 8.02 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕುಡಿಯುವ ನೀರು ಹಾಗೂ ಜಲವಿದ್ಯುತ್‌ ಉತ್ಪಾದನೆ ಉದ್ದೇಶದಿಂದ ಕರ್ನಾಟಕವು ಒಟ್ಟು 36.55ಟಿಎಂಸಿ ಅಡಿ ನೀರಿಗೆ ಬೇಡಿಕೆ ಇರಿಸಿದ್ದರೆ, ಗೋವಾ 122.60 ಟಿಎಂಸಿಅಡಿ, ಮಹಾರಾಷ್ಟ್ರ 6.35 ಟಿಎಂಸಿ ಅಡಿ ನೀರಿನ ಹಂಚಿಕೆ ಕೋರಿ ವಾದ ಮಂಡಿಸಿದ್ದವು.

ಗೋವಾಗೆ ನಿರ್ಬಂಧವಿಲ್ಲ: ಮಹದಾಯಿ ಜಲವಿದ್ಯುತ್‌ ಯೋಜನೆಗಾಗಿ ಕರ್ನಾಟಕಕ್ಕೆ ದೊರೆತಿರುವ 8.02 ಟಿಎಂಸಿ ಅಡಿ ನೀರು, ವಿದ್ಯುತ್‌ ಉತ್ಪಾದನೆಯ ನಂತರ ಮತ್ತೆ ಗೋವಾ ಮೂಲಕವೇ ನದಿಗುಂಟ ಹರಿದುಹೋಗಲಿದೆ. ‘ಬಳಕೆಯಾಗದ’ ನೀರಿನ ಪಾಲಿನಲ್ಲಿ ಕಾಳಿ, ಕೋಟ್ನಿ ಜಲವಿದ್ಯುತ್‌ ಉತ್ಪಾದನೆ ಯೋಜನೆಗಾಗಿ ಕರ್ನಾಟಕ ಸಲ್ಲಿಸಿದ್ದ ಬೇಡಿಕೆಯನ್ನು ಈಡೇರಿಸದ ನ್ಯಾಯಮಂಡಳಿಯು ಗೋವಾಗೆ ಈ ಕುರಿತು ಯಾವುದೇ ನಿರ್ಬಂಧ ಹೇರಿಲ್ಲ.

ಇದಲ್ಲದೆ, ಮಹದಾಯಿಯಲ್ಲಿ ಲಭ್ಯವಿರುವ ಮಿಕ್ಕೆಲ್ಲ ನೀರನ್ನು ‘ಬಳಕೆ ಯಾಗದ’ ಉದ್ದೇಶದೊಂದಿಗೆ ಯೋಜನೆ ರೂಪಿಸಿ ಅನುಕೂಲ ಪಡೆಯಲು ಗೋವಾಗೆ ಹಸಿರು ನಿಶಾನೆ ದೊರೆತಿದೆ. ಮುಂದಿನ 50 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಒಟ್ಟು 59 ಯೋಜನೆಗಳನ್ನು ರೂಪಿಸಿರುವ ಗೋವಾ ಈ ಮೂಲಕ ಮಹದಾಯಿ ನೀರಿನಿಂದ ಲಾಭ ಪಡೆಯಲಿದೆ.

ತಿರುವು ಯೋಜನೆಗಾಗಿ ಕರ್ನಾಟಕ ನಿರ್ಮಿಸುತ್ತಿರುವ ಅಂತರ್‌ ಸಂಪರ್ಕ ಕಾಲುವೆಗಳ ಮೂಲಕ ತಾನಾಗಿಯೇ ಮಹದಾಯಿಯ ನೀರು ಮಲಪ್ರಭಾ ನದಿಗೆ ಹರಿಯದಂತೆ ತಡೆಗೋಡೆ ನಿರ್ಮಿಸಬೇಕು ಎಂದು 2014ರ ಏಪ್ರಿಲ್‌ನಲ್ಲಿ ಮಧ್ಯಂತರ ಆದೇಶ ನೀಡಿದ್ದ ನ್ಯಾಯಮಂಡಳಿ, ಅರಣ್ಯೇತರ ಪ್ರದೇಶದಲ್ಲಿ ಕರ್ನಾಟಕ ಆರಂಭಿಸಿರುವ ಕಾಮಗಾರಿಗಳಿಗೆ ತಡೆ ನೀಡಬೇಕೆಂಬ ಗೋವಾದ ಬೇಡಿಕೆಯನ್ನೂ ತಿರಸ್ಕರಿಸಿತ್ತು. ತಾನು ವಿಧಿಸಿರುವ ಷರತ್ತುಗಳನ್ನು ಪಾಲಿಸುವ ತನಕ ಮಧ್ಯಂತರ ಆದೇಶ ಜಾರಿ
ಯಲ್ಲಿರುತ್ತದೆ ಎಂದು ಐತೀರ್ಪಿನಲ್ಲಿ ಸಾರಲಾಗಿದೆ.

ನದಿ ನೀರಿನ ವ್ಯಾಜ್ಯದಲ್ಲಿ ಭಾಗವಹಿಸಿದ್ದ ಮೂರೂ ರಾಜ್ಯಗಳು -ಅಗತ್ಯ ಮಾಹಿತಿ ಮತ್ತು ಅಂಕಿ-–ಅಂಶಗಳನ್ನು ಒದಗಿಸಿಲ್ಲದ ಕಾರಣ ಈ ಹಂತದಲ್ಲಿ ಮಹದಾಯಿ ನೀರಿನ ಸಮಾನ ಹಂಚಿಕೆ ಸಾಧ್ಯವಿಲ್ಲ ಮತ್ತು ಅದರ ಅಗತ್ಯವೂ ಇಲ್ಲ. ಭವಿಷ್ಯದಲ್ಲಿ ಮಹದಾಯಿ ನೀರನ್ನು ಬಳಕೆ ಮಾಡಿಕೊಳ್ಳುವ ಕುರಿತು ಆಯಾ ಸರ್ಕಾರಗಳು ಮಂಡಿಸಿರುವ ಅಂದಾಜು ಪ್ರಮಾಣಗಳು ವೈಜ್ಞಾನಿಕವಾಗಿ ರುಜುವಾತಾಗಿಲ್ಲಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

 

ರಾಜ್ಯದ ಬೇಡಿಕೆಗಳು ತಿರಸ್ಕೃತ

 * ಕಾಳಿ ಜಲವಿದ್ಯುತ್ ಯೋಜನೆಗಾಗಿ ಸೂಪಾ ಜಲಾಶಯಕ್ಕೆ 5.527 ಟಿಎಂಸಿ ಅಡಿ ನೀರಿನ ಕೋರಿಕೆ.

 * ಜಲವಿದ್ಯುತ್ ಯೋಜನೆಗಾಗಿ ಉದ್ದೇಶಿತ ಕೊಟ್ನಿ ಜಲಾಶಯ ದಿಂದ 7 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ನದಿ ಕಣಿವೆಯಿಂದ ಹೊರಕ್ಕೆ ಒಯ್ಯಲು ಅನುಮತಿಯ
ಕೋರಿಕೆ.

 * ಕುಡಿಯುವ ಉದ್ದೇಶದಿಂದ 7.50 ಟಿಎಂಸಿ ಅಡಿ ನೀರು ಕೋರಿದ್ದ ರಾಜ್ಯದ ಅರ್ಜಿ ವಜಾ

***

‘ಸುಪ್ರೀಂ’ಗೆ ಮೇಲ್ಮನವಿ ಕುಡಿಯುವ ನೀರಿನ ಯೋಜನೆಗೆ ಅನುಮತಿ ದೊರೆತಿರುವುದರಿಂದ ಕರ್ನಾಟಕ ನಿರೀಕ್ಷಿಸಿದಂತೆಯೇ ಸಮಾಧಾನಕರವಾದ ತೀರ್ಪು ಹೊರಬಿದ್ದಿದೆ. ಮಹದಾಯಿ ನದಿಯಲ್ಲಿನ ಪೂರ್ಣ ಪಾಲನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮೂಲಕ ಕಾನೂನು ಹೋರಾಟ ಮುಂದುವರಿಸಲಾಗುವುದು.

ಮೋಹನ್‌ ಕಾತರಕಿ,
ರಾಜ್ಯದ ಪರ ವಾದ ಮಂಡಿಸಿದ್ದ ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !