ಕಣಕುಂಬಿಗೆ ಮತ್ತೆ ಬಂದ ಗೋವಾ ಅಧಿಕಾರಿಗಳು

7
ಪೂರ್ವಾನುಮತಿ ಇಲ್ಲದೇ ಭೇಟಿ; ಹಲವು ಅನುಮಾನಗಳಿಗೆ ಆಸ್ಪದ

ಕಣಕುಂಬಿಗೆ ಮತ್ತೆ ಬಂದ ಗೋವಾ ಅಧಿಕಾರಿಗಳು

Published:
Updated:

ಬೆಳಗಾವಿ: ಗೋವಾ ಜಲಸಂಪನ್ಮೂಲ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ದಿನೇಶ್ ಮಹಾಲೆ ಸೇರಿದಂತೆ 8 ಮಂದಿ ಅಧಿಕಾರಿಗಳ ತಂಡ, ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿರುವ ಕಳಸಾ ಯೋಜನಾ ಪ್ರದೇಶಕ್ಕೆ ಪೂರ್ವಾನುಮತಿ ಇಲ್ಲದೇ ಬುಧವಾರ ದಿಢೀರ್‌ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದೆ.‌

ಮಾಹಿತಿ ನೀಡದೆ ಬಂದಿದ್ದ ಅಧಿಕಾರಿಗಳು ಹಾಗೂ ಇಬ್ಬರು ಚಾಲಕರನ್ನು ಖಾನಾಪುರ ಪೊಲೀಸರು, ಪ್ರವಾಸಿ ಮಂದಿರಕ್ಕೆ ಕರೆದೊಯ್ದು ಮಾಹಿತಿ ಪಡೆದು ಬಿಡುಗಡೆ ಮಾಡಿದ್ದಾರೆ.

‘ಒಂದು ಸರ್ಕಾರಿ ಜೀಪು ಮತ್ತು ಎರ್ಟಿಗಾ ವಾಹನದಲ್ಲಿ ಬಂದಿದ್ದ ಅವರು, ಮೊದಲು ಕಳಸಾ ನಾಲೆಯ ತಡೆಗೋಡೆ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿದ್ದ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಸಿಬ್ಬಂದಿ ಆಕ್ಷೇಪ ಎತ್ತಿದ್ದಾರೆ. ಆಗ ಅವರೆಲ್ಲರೂ ಅಲ್ಲಿಂದ ಮಾವುಲಿ ದೇವಸ್ಥಾನದತ್ತ ಹೋಗಿದ್ದಾರೆ. ಅಷ್ಟರಲ್ಲಿ ಸಿಬ್ಬಂದಿಯೊಬ್ಬರು ಖಾನಾಪುರ ಪೋಲೀಸರಿಗೆ ವಿಷಯ ತಿಳಿಸಿದ್ದಾರೆ. ಮಾವುಲಿ ದೇವಸ್ಥಾನದ ಬಳಿ ಬಂದ ಪೊಲೀಸರು, ಗೋವಾ ಅಧಿಕಾರಿಗಳಿದ್ದ ವಾಹನಗಳನ್ನು ಅಡ್ಡಗಟ್ಟಿ ಪ್ರವಾಸಿ ಮಂದಿರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ’ ಎಂದು ತಿಳಿದುಬಂದಿದೆ.

‘ಅನುಮತಿಯಿಲ್ಲದೇ ಮತ್ತೆ ಈ ರೀತಿ ಯೋಜನಾ ಪ್ರದೇಶಕ್ಕೆ ಬರುವುದಿಲ್ಲವೆಂದು ಲಿಖಿತವಾಗಿ ಪತ್ರ ಬರೆಸಿಕೊಂಡು ಅವರನ್ನು ಬಿಡುಗಡೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆಯೂ ಗೋವಾದ ತಂಡವೊಂದು ಯೋಜನಾ ಸ್ಥಳಕ್ಕೆ ಭೇಟಿ ನೀಡಿತ್ತು’ ಎಂದು ಮೂಲಗಳು ತಿಳಿಸಿವೆ.

‘ಗೋವಾ ಜಲಸಂಪನ್ಮೂಲ ಇಲಾಖೆಯ ಒಬ್ಬ ಎಇ, ಎಇಇ, ಜೆಇ ಸೇರಿದಂತೆ 8 ಅಧಿಕಾರಿಗಳು ಕಣಕುಂಬಿಗೆ ಭೇಟಿ ನೀಡಿದ್ದರು. ಅವರು ಏಕೆ ಬಂದಿದ್ದರು ಎನ್ನುವ ಮಾಹಿತಿ ಇಲ್ಲ. ಅವರಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿಲ್ಲ. ಹೀಗೆ ಏಕಾಏಕಿ ಭೇಟಿ ನೀಡುವುದು ಸರಿಯಲ್ಲ ಎಂದು ಅವರಿಗೆ ತಿಳಿಸಲಾಗಿದೆ. ಮುಂದಿನ ಬಾರಿ ಬರುವಾಗ, ಪೂರ್ವ ಮಾಹಿತಿ ನೀಡುತ್ತೇವೆ ಎಂದು ತಿಳಿಸಿ ಹೋಗಿದ್ದಾರೆ. ನಮ್ಮ ಪೊಲೀಸರು, ಅವರೆಲ್ಲವರ ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಎಸ್ಪಿ ಸುಧೀರ್‌ಕುಮಾರ್‌ ರೆಡ್ಡಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಗೋವಾದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ತಂಡ ಕಣಕುಂಬಿಗೆ ಪದೇ ಪದೇ ಭೇಟಿ ನೀಡುತ್ತಿರುವುದು, ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಮಹದಾಯಿ ನ್ಯಾಯಮಂಡಳಿಯು ಕೆಲವೇ ದಿನಗಳಲ್ಲಿ ತನ್ನ ತೀರ್ಪು ನೀಡುವ ಸಾಧ್ಯತೆ ಇದ್ದು, ಗೋವಾ ಸರ್ಕಾರವು ಕರ್ನಾಟಕದ ವಿರುದ್ಧ ಸಾಕ್ಷಾಧಾರಗಳನ್ನು ಸಂಗ್ರಹಿಸುತ್ತಿದೆ. ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.

‘ಕಣಕುಂಬಿಗೆ ಭೇಟಿ ನೀಡಿದ್ದ ನಮ್ಮ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳನ್ನು ಕರ್ನಾಟಕ ಪೊಲೀಸರು ವಶಕ್ಕೆ‍ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ. ಮಹದಾಯಿ ನದಿ ನೀರನ್ನು ಕರ್ನಾಟಕ ತನ್ನ ಕಡೆಗೆ ತಿರುಗಿಸಿಕೊಂಡಿದೆ. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು’ ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್‌ ಟ್ವೀಟ್ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು’

ಪಣಜಿ: ‘ಕಣಕುಂಬಿಗೆ ಭೇಟಿ ನೀಡಿದ್ದ ನಮ್ಮ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳನ್ನು ಕರ್ನಾಟಕ ಪೊಲೀಸರು ವಶಕ್ಕೆ‍ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ. ಮಹದಾಯಿ ನದಿ ನೀರನ್ನು ಕರ್ನಾಟಕ ತನ್ನ ಕಡೆಗೆ ತಿರುಗಿಸಿಕೊಂಡಿದೆ. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು’ ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲ್ಯೇಕರ್‌ ಟ್ವೀಟ್ ಮಾಡಿದ್ದಾರೆ. ‘ಈ ಸಂಬಂಧ ಕರ್ನಾಟಕ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚಿಸುವಂತೆ ಮುಖ್ಯಮಂತ್ರಿ ಪರ್ರೀಕರ್‌ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೃಷ್ಣಮೂರ್ತಿ ಅವರಿಗೆ ಸೂಚಿಸಿದ್ದೇನೆ’ ಎಂದೂ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !