ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಶಾಚಿ ಪರಿಣಾಮದ ಅಧ್ಯಯನ ಆಗಲಿ: ಡಾ.ಎಚ್‌.ಆರ್‌.ನಾಗೇಂದ್ರ

ಮಾನವ ಪೂರ್ಣತೆಗೆ ಸಾಧನೆಗೆ ಯೋಗ ಮುಖ್ಯ ಸಾಧನ:
Last Updated 5 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾನವನ ಮೇಲೆ ದೇವ, ಪಿಶಾಚಮತ್ತು ಇತರ ಶಕ್ತಿಗಳ ಪರಿಣಾಮದ ಬಗ್ಗೆಯೂ ವಿಜ್ಞಾನ ಅಧ್ಯಯನ ನಡೆಸಬೇಕು’ ಎಂದು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ (ಎಸ್‌ವ್ಯಾಸ್) ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್‌.ಆರ್‌.ನಾಗೇಂದ್ರ ಹೇಳಿದರು.

107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ನಡೆದ ಯೋಗ ವಿಜ್ಞಾನ ಸಮ್ಮೇಳನದಲ್ಲಿ ಮಾತನಾಡಿದ ಅವರು,ಮನುಕುಲದ ಸುದೀರ್ಘ ಪಯಣದಲ್ಲಿ ವಿಜ್ಞಾನ ಇನ್ನೂ ಭ್ರೂಣಾವಸ್ಥೆಯಲ್ಲಿದೆ. ತಿಳಿದುಕೊಳ್ಳಬೇಕಾದ ವಿಚಾರಗಳು ಅಗಾಧ ಎಂದರು.

ಮಾನವನ ಮೇಲೆ ದೈಹಿಕ ಮತ್ತು ಮಾನಸಿಕ ಒತ್ತಡಗಳು ಪರಿಣಾಮ ಬೀರುತ್ತವೆ ನಿಜ. ಅದನ್ನು ಹೊರತುಪಡಿಸಿದ ಬಾಹ್ಯ ಶಕ್ತಿಗಳ ಪರಿಣಾಮಗಳ ಬಗ್ಗೆಯೂ ಗಮನಹರಿಸಬೇಕು. ಯೋಗ ಮತ್ತು ಧ್ಯಾನ ಅದನ್ನು ಕಂಡುಕೊಳ್ಳಲು ಇರುವ ಉತ್ತಮ ಮಾರ್ಗ. ಭೌತಿಕ ಜಗತ್ತಿನ ರಚನೆ ಮತ್ತು ನಿಯಮಗಳನ್ನು ಅರ್ಥೈಸಿಕೊಳ್ಳಬೇಕು. ಆಗ ಅದಕ್ಕೂ ಮಾನವನಿಗೂ ಇರುವ ಸಂಬಂಧದ ತಂತು ಏನೆಂಬುದು ಅರಿವಿಗೆ ಬರುತ್ತದೆ ಎಂದು ನಾಗೇಂದ್ರ ಹೇಳಿದರು.

ಯೋಗ ವಿಜ್ಞಾನದ ಪ್ರಕಾರ ಮಾನವ ದೇಹವು ಪಂಚಕೋಶಗಳಿಂದ ಆವರಿಸಿದೆ. ಮನೋಮಯ ಕೋಶ, ಪ್ರಾಣಮಯ ಕೋಶ, ವಿಜ್ಞಾನಮಯ ಕೋಶ, ಅನ್ನಮಯಕೋಶ ಮತ್ತು ಆನಂದಮಯಕೋಶ. ಶುದ್ಧ ಪ್ರಜ್ಞೆ ಪಡೆಯುವುದರಿಂದ ನಿರ್ವಾಣ ಸಾಧ್ಯ.ಜಗತ್ತಿನಲ್ಲಿ ಕಾರ್ಯ ಮತ್ತು ಕಾರಣಗಳಿಗೆ ಸಂಬಂಧವಿದೆ ಮತ್ತು ಅದು ನಿರ್ಧಾರಿತ ಎಂದೂ ಅವರು ಅಭಿಪ್ರಾಯಪಟ್ಟರು.

ಬೌದ್ಧ ಸಂನ್ಯಾಸಿ ನಾಗಾರ್ಜುನನು ಕ್ಷಣಿಕವಾದವನ್ನು, ಮಾಹಾಯಾನ ಪಂಥದವರು ಶೂನ್ಯವಾದವನ್ನು ಪ್ರತಿಪಾದಿಸಿದರು. ನಂತರ ಬಂದ ಶಂಕರಾಚಾರ್ಯರು ಅನಂತ ಜಗತ್ತಿನ ಪೂರ್ಣತೆ ಮತ್ತು ಶುದ್ಧ ಪ್ರಜ್ಞೆಯನ್ನು ಪ್ರತಿಪಾದಿಸಿದರು. ಈ ಹಾದಿಯಲ್ಲಿ ಮುನ್ನಡೆದು ಪೂರ್ಣತೆ ಸಾಧಿಸಲು ಯೋಗ ಒಂದು ಸಾಧನ ಎಂದು ಅವರು ಅಭಿಪ್ರಾಯಪಟ್ಟರು.

‘ಪಶುತ್ವದಿಂದ ದೈವತ್ವದೆಡೆಗೆ ಸಾಗಲು, ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಯೋಗ ಅಮೂಲ್ಯ ವಿದ್ಯೆ. ಸಮಯ ಇಲ್ಲ ಎಂದು ನಾವು ಕಾಲ ಹರಣ ಮಾಡುತ್ತೇವೆ. ನಮ್ಮೊಳಗೇ ನಾವು ಶೋಧಿಸುತ್ತಾ ಹೋದರೆ, ನಮ್ಮ ಅರಿವಿನ ಪರಿಧಿಗಿಂತ ದೊಡ್ಡ ಜಗತ್ತೇ ಅನಾವರಣಗೊಳ್ಳುತ್ತದೆ. ಆನಂದದ ಕುಸುಮ ಅರಳುತ್ತದೆ’ ಎಂದು ನಾಗೇಂದ್ರ ಹೇಳಿದರು.

ವಿಜ್ಞಾನಿಗಳಿಗೇ ‘ಸುದರ್ಶನ ಕ್ರಿಯಾ’!

‘ನಿಧಾನವಾಗಿ ಕಣ್ಣುಗಳನ್ನು ಮುಚ್ಚಿ, ದೀರ್ಘವಾಗಿ ಉಸಿರು ತೆಗೆದುಕೊಳ್ಳಿ, ನಿಧಾನಕ್ಕೆ ಉಸಿರು ಹೊರಗೆ ಹಾಕಿ. ಮತ್ತೊಮ್ಮೆ ಉಸಿರು ಒಳಕ್ಕೆ ತೆಗೆದುಕೊಳ್ಳಿ...’

ಈ ರೀತಿ ವಿಜ್ಞಾನಿಗಳು ಮತ್ತು ವಿಜ್ಞಾನದ ವಿದ್ಯಾರ್ಥಿಗಳಿಗೆ ಧ್ಯಾನದ ಲೋಕವನ್ನು ಪರಿಚಯಿಸಿದ್ದು ಡಾ.ವಿನೋದ್‌ ಕುಮಾರ್‌. ಇವರು ಆರ್ಟ್‌ ಆಫ್‌ ಲಿವಿಂಗ್‌ನ ‘ಸುದರ್ಶನ ಕ್ರಿಯೆ’ಯ ಮೇಲೆ ಅಧ್ಯಯನ ನಡೆಸುತ್ತಿದ್ದಾರೆ. ತಮ್ಮ ವಿಚಾರ ಮಂಡಿಸುತ್ತಲೇ ಅಲ್ಲಿ ಸೇರಿದ್ದ ಸಭಿಕರಿಂದ ಸುದರ್ಶನ ಕ್ರಿಯೆ ಮಾಡಿಸಿದರು. ಅಲ್ಲಿದ್ದವರು ಯೋಗಾಸ್ತಕರೇ ಆಗಿದ್ದರಿಂದ ಹೇಳಿದ್ದನ್ನು ಚಾಚೂ ತಪ್ಪದೇ ಮಾಡಿದರು.

ಸುದರ್ಶನ ಕ್ರಿಯೆ ಒಂದು ಬಗೆಯ ಉಸಿರಾಟದ ಕ್ರಮ. ಇದರಿಂದ ಅತಿ ಬೇಗನೆ ಮನಸ್ಸನ್ನು ಶಾಂತಗೊಳಿಸಬಹುದು ಮತ್ತು ಶಕ್ತಿ (ಎನರ್ಜಿ) ಪ್ರಮಾಣವೂ ಹೆಚ್ಚುತ್ತದೆ. ಅದರ ಅನುಭವನ್ನು ಪಡೆಯಬಹುದು ಎಂದು ವಿನೋದ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT