ಮಂಗಳವಾರ, ನವೆಂಬರ್ 19, 2019
23 °C
ವಿಪರೀತ ಮಳೆಯಿಂದ ಬ್ಯಾರೇಜ್‌ಗೆ ಹಾನಿ

ಗೋಕಾಕ: ಶಿಥಿಲಗೊಂಡ ಶಿಂಗಳಾಪುರ ಬ್ಯಾರೇಜ್‌

Published:
Updated:
Prajavani

ಗೋಕಾಕ (ಬೆಳಗಾವಿ ಜಿಲ್ಲೆ): ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಇಲ್ಲಿಗೆ ಸಮೀಪದ ಶಿಂಗಳಾಪುರ ಬ್ರಿಡ್ಜ್‌ ಕಮ್‌ ಬ್ಯಾರೇಜ್‌ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಗೋಕಾಕ ಹಾಗೂ ಶಿಂಗಳಾಪುರ ನಡುವೆ ಸಂಪರ್ಕ ಕಲ್ಪಿಸುವ ಈ ಬ್ರಿಡ್ಜ್‌ ಹಾಳಾಗಿದ್ದರಿಂದ ಗ್ರಾಮಸ್ಥರು 10 ರಿಂದ 12 ಕಿಲೊಮೀಟರ್‌ ಸುತ್ತುವರಿದು ಹೋಗಬೇಕಾದ ಪರಿಸ್ಥಿತಿ ಇದೆ.

ಬೆಳಗಾವಿಯಿಂದ ಹರಿದು ಬರುವ ಮಾರ್ಕಂಡೇಯ ನದಿಯು ಗೋಕಾಕ ಬಳಿ ಭೋರ್ಗರೆಯುತ್ತ ಸಾಗುತ್ತದೆ. ಇತ್ತೀಚೆಗೆ ಸುರಿದ ಅತಿವೃಷ್ಟಿಯಿಂದ ನದಿಗೆ ಹೆಚ್ಚಿನ ಹರಿವು ಬಂದಿದೆ. ಶಿಂಗಳಾಪುರ ಬ್ಯಾರೇಜ್‌ ತಿಂಗಳಿಂದ ನೀರಿನಲ್ಲಿ ಮುಳುಗಡೆಯಾಗಿದೆ. ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಭಾರಿ ವಾಹನಗಳು ಸಂಚರಿಸಿದಾಗ ಕಂಪಿಸಲಾರಂಭಿಸಿದೆ.

ಶಿಂಗಳಾಪುರದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ವಾಸ ಇವೆ. ಅಂದಾಜು 500 ಮಂದಿ ನಿತ್ಯ ಇದೇ ಬ್ಯಾರೇಜ್‌ ಮೇಲೆ ಸಂಚರಿಸುತ್ತಾರೆ. ಇದಲ್ಲದೇ, ಗೋಕಾಕ ಕಡೆಯಿಂದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಹೋಗುವ ವಾಹನಗಳೂ ಇಲ್ಲಿ ಓಡಾಡುತ್ತವೆ. ಶಿಥಿಲಗೊಂಡಿರುವುದರಿಂದ ಬಹಳಷ್ಟು ಜನ ರಸ್ತೆಯಲ್ಲಿ ಸಂಚರಿಸುತ್ತಿಲ್ಲ. ಬದಲಿಗೆ, ಲೊಳಸೂರ ಮಾರ್ಗವಾಗಿ ಗೋಕಾಕಗೆ ಹೋಗುತ್ತಿದ್ದು, ಸಮಯ, ಶ್ರಮ ವ್ಯರ್ಥವಾಗುತ್ತಿದೆ. ಶಾಲೆ–ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಹೀಗಾಗಿ ಬಹಳಷ್ಟು ಮಕ್ಕಳು ಗೈರಾಗುತ್ತಿದ್ದಾರೆ.

ಜೀವ ಕೈಯಲ್ಲಿ ಹಿಡಿದು ಪಯಣ:

ಪ್ರಾಣಾಪಾಯವನ್ನೂ ಲೆಕ್ಕಿಸದೆ ಕೆಲವರು ಇದೇ ಬ್ಯಾರೇಜ್‌ ಮೂಲಕ ಸಂಚರಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳನ್ನು ಅಪಾಯದಲ್ಲಿಯೇ ಓಡಿಸಿಕೊಂಡು ಹೋಗುತ್ತಿದ್ದಾರೆ.

‘ಬ್ಯಾರೇಜ್‌ ಮೇಲೆ ನೀರು ಹರಿಯುವುದು ನಮಗೆ ಹೊಸದಲ್ಲ. ಆದರೆ, ಇದೇ ಮೊದಲ ಬಾರಿಗೆ ತಿಂಗಳಿಗಿಂತ ಹೆಚ್ಚು ಸಮಯ ನೀರು ಇಲ್ಲಿ ಹರಿದಿದೆ. ನೀರಿನ ಹರಿವು ಕಡಿಮೆಯಾದಾಗ ನಡೆದುಕೊಂಡು ಬ್ಯಾರೇಜ್‌ ದಾಟುತ್ತೇವೆ. ಅಪಾಯವಂತೂ ಇದ್ದೇ ಇದೆ’ ಎನ್ನುತ್ತಾರೆ ನಾಗರಾಜ ಚಿಗಡೊಳ್ಳಿ.

‘ಮೊದಲು ಗ್ರಾಮಕ್ಕೆ ಬ್ಯಾರೇಜ್‌ ಇರಲಿಲ್ಲ. ಗ್ರಾಮಸ್ಥರ ಮನವಿ ಮೇರೆಗೆ 2006ರಲ್ಲಿ ಬ್ರಿಡ್ಜ್‌ ಕಮ್‌ ಬ್ಯಾರೇಜ್‌ ನಿರ್ಮಿಸಲಾಗಿತ್ತು. ಇಷ್ಟು ವರ್ಷಗಳ ಕಾಲ ಗಟ್ಟಿಮುಟ್ಟಾಗಿಯೇ ಇತ್ತು. ಆದರೆ, ಈ ಸಲ ವಿಪರೀತ ಮಳೆ ಬಂದಿರುವುದರಿಂದ ಬ್ಯಾರೇಜ್‌ಗೆ ಸಾಕಷ್ಟು ಹಾನಿಯಾಗಿದೆ. ನೀರು ಇಳಿದ ಮೇಲೆ ದುರಸ್ತಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

**

'ಬ್ಯಾರೇಜ್ ತೀವ್ರ ಹಾನಿಯಾಗಿದ್ದು, ಕಾಂಕ್ರೀಟ್ ಹಾಕಲು ಹಾಗೂ ತಡೆಗೋಡೆ ನಿರ್ಮಿಸಲು ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ'
– ಎಸ್.ಎಸ್. ಮೆಳವಂಕಿ, ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ

ಪ್ರತಿಕ್ರಿಯಿಸಿ (+)