ಗೋಕರ್ಣ ದೇವಸ್ಥಾನ ಹಸ್ತಾಂತರ ಪ್ರಕರಣ: ಯಥಾಸ್ಥಿತಿಗೆ ‘ಸುಪ್ರೀಂ’ ಆದೇಶ

7

ಗೋಕರ್ಣ ದೇವಸ್ಥಾನ ಹಸ್ತಾಂತರ ಪ್ರಕರಣ: ಯಥಾಸ್ಥಿತಿಗೆ ‘ಸುಪ್ರೀಂ’ ಆದೇಶ

Published:
Updated:

ನವದೆಹಲಿ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಂದಿನ ಆದೇಶ ನೀಡುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಆದೇಶ ನೀಡಿದೆ.

‘ದೇಗುಲದ ನಿರ್ವಹಣೆ ಮಠದ ಸುಪರ್ದಿಯಲ್ಲೇ ಇರಲಿ ಎಂಬ ಹೈಕೋರ್ಟ್‌ನ ಮಧ್ಯಂತರ ಆದೇಶ ಉಲ್ಲಂಘಿಸಿರುವ ಸರ್ಕಾರವು ದೇವಸ್ಥಾನವನ್ನು ತನ್ನ ಸುಪರ್ದಿಗೆ ಪಡೆದಿದೆ’ ಎಂದು ಆರೋಪಿಸಿ ರಾಮಚಂದ್ರಾಪುರ ಮಠ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇತ್ಯರ್ಥಪಡಿಸಿದ ನ್ಯಾಯಮೂರ್ತಿಗಳಾದ ಕುರಿಯನ್‌ ಜೋಸೆಫ್‌ ಹಾಗೂ ಎ.ಎಂ. ಖನ್ವಿಲ್ಕರ್‌ ಅವರಿದ್ದ ಪೀಠ, ನಾಲ್ಕು ವಾರಗಳ ನಂತರ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

‘ದೇವಸ್ಥಾನದ ನಿರ್ವಹಣೆ ಕುರಿತಂತೆ ಕಳೆದ ತಿಂಗಳ 7ರಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಅನುಸಾರ ಯಥಾಸ್ಥಿತಿ ಮುಂದುವರಿಯಲಿದೆ’ ಎಂದು ಪೀಠ ಹೇಳಿತು.

ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿ 2008ರಲ್ಲಿ ರಾಜ್ಯ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ರದ್ದುಪಡಿಸಿ ಕಳೆದ ಆಗಸ್ಟ್‌ 10ರಂದು ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ತಡೆ ನೀಡಲು ಕಳೆದ ಸೆಪ್ಟೆಂಬರ್‌ 7ರಂದು ನ್ಯಾಯಪೀಠ ನಿರಾಕರಿಸಿತ್ತು.

ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಗೆ ವಹಿಸುವ ವಿಚಾರದಲ್ಲಿ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್‌ ಅರ್ಜಿಯ ಕುರಿತು 8 ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆಯೂ ಪೀಠವು ರಾಜ್ಯ ಸರ್ಕಾರ, ಟ್ರಸ್ಟಿಗಳು ಹಾಗೂ ಸಂಬಂಧಪಟ್ಟವರಿಗೆ ಸೂಚಿಸಿತ್ತು.

‘ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್‌ ಆದೇಶವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಿರುಚಿ, ದೇವಸ್ಥಾನವನ್ನು ವಶಕ್ಕೆ ಪಡೆದಿದೆ. ಇದು ನ್ಯಾಯಾಂಗ ನಿಂದನೆ’ ಎಂದು ಮಠದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.

ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸಿರುವುದು ತಪ್ಪು ಎಂಬ ಹೈಕೋರ್ಟ್‌ನ ಆದೇಶ ಜಾರಿಯಲ್ಲಿದೆ. ಆ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿಲ್ಲ. ಅದೇ ರೀತಿ, ಯಥಾಸ್ಥಿತಿ ಮುಂದುವರಿಸುವಂತೆ ಅಥವಾ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಿ ಸುಪ್ರೀಂ ಕೋರ್ಟ್‌ ಆದೇಶ ನೀಡಿಲ್ಲ. ಅಲ್ಲದೆ, ಹೈಕೋರ್ಟ್‌ ಆದೇಶದ ನಂತರ ಕಳೆದ ಆಗಸ್ಟ್‌ನಲ್ಲೇ ದೇವಸ್ಥಾನದ ನಿರ್ವಹಣೆಗಾಗಿ ಅಧಿಕಾರಿ
ಯನ್ನು ನೇಮಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ರಂಜಿತ್‌ಕುಮಾರ್ ನ್ಯಾಯಪೀಠಕ್ಕೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕುರಿಯನ್ ಜೋಸೆಫ್, ಯಥಾಸ್ಥಿತಿ ಮುಂದುವರಿಸುವ ಕುರಿತು ಕಕ್ಷಿದಾರರು ಆಲೋಚಿಸಬೇಕಿತ್ತು ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು.

‘ಯಥಾಸ್ಥಿತಿ ಮುಂದುವರಿಯಲಿ ಎಂಬುದೇ ನಾವು ಸೆಪ್ಟೆಂಬರ್‌ 7ರಂದು ನೀಡಲಾದ ಆದೇಶದ ಸಾರವಾಗಿತ್ತು. ಸರ್ಕಾರ ಇದನ್ನು ಅರ್ಥೈಸಿಕೊಂಡಿದ್ದಾದರೂ ಹೇಗೆ’ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಖನ್ವಿಲ್ಕರ್‌ ಅಚ್ಚರಿ ವ್ಯಕ್ತಪಡಿಸಿದರು.

ಮಠದ ಸುಪರ್ದಿಗೆ- ಪ್ರತಿಕ್ರಿಯೆ: ಮಠದ ಪರ ಕಿರಿಯ ವಕೀಲ ಇಜಾಜ್‌ ಮಕಬೂಲ್‌ ‘ಪ್ರಜಾವಾಣಿ’ ಜೊತೆ ಮಾತನಾಡಿ, ‘ನ್ಯಾಯಪೀಠವು ಮಠದ ನಿರ್ವಹಣೆಯನ್ನು ಮತ್ತೆ ನಮ್ಮ ಸುಪರ್ದಿಗೇ ವಹಿಸಿದೆ. ಆದರೆ, ರಾಜ್ಯ ಸರ್ಕಾರ ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದೆ’ ಎಂದರು.

ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿಯವರು ದೇವಸ್ಥಾನದ ಆಡಳಿತ ಮಂಡಳಿ ಉಸ್ತುವಾರಿಯನ್ನು ಕಳೆದ ಸೆಪ್ಟೆಂಬರ್‌ 19ರಂದು ವಹಿಸಿಕೊಂಡಿದ್ದರು.

‘ನನಗಿನ್ನೂ ಮನವಿ ಬಂದಿಲ್ಲ’
ಬೆಂಗಳೂರು: ‘ಗೋಕರ್ಣ ಮಹಾಬಲೇಶ್ವರ ದೇವಾಲಯದ ದೇಖರೇಖಿ ಸಮಿತಿಯ ಸಲಹೆಗಾರನಾಗುವಂತೆ ಹೈಕೋರ್ಟ್‌ ನೀಡಿರುವ ಆದೇಶಕ್ಕೆ ಅನುಗುಣವಾಗಿ ನನಗೆ ಇನ್ನೂ ಯಾವುದೇ ಅಧಿಕೃತ ಮನವಿ ಬಂದಿಲ್ಲ’ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌.ಶ್ರೀಕೃಷ್ಣ ತಿಳಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ‘ಕನಿಷ್ಠ ಪಕ್ಷ ನನಗೆ ಒಂದು ಇ–ಮೇಲ್‌ನಲ್ಲಿ ಅಧಿಕೃತ ಮನವಿ ಕಳುಹಿಸಿದ್ದರೂ ಒಪ್ಪಿಕೊಳ್ಳುತ್ತಿದ್ದೆ. ಆದರೆ, ಈತನಕ ಅಂತಹ ಯಾವುದೇ ಮನವಿ ಬಂದಿಲ್ಲ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !