ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ದೇಖರೇಖಿ ಸಮಿತಿ ನೇಮಕ

7
ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ದೇಗುಲ ನೀಡಿದ್ದು ಅಕ್ರಮ: ಹೈಕೋರ್ಟ್‌

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ದೇಖರೇಖಿ ಸಮಿತಿ ನೇಮಕ

Published:
Updated:

ಬೆಂಗಳೂರು: ‘ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದ ಈ ಹಿಂದಿನ ರಾಜ್ಯ ಸರ್ಕಾರದ ಕ್ರಮ ಕಾನೂನು ಬಾಹಿರ’ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಇನ್ನು ಮುಂದೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌.ಕೃಷ್ಣ ಅವರ ನೇತೃತ್ವದ ‘ದೇಖರೇಖಿ ಸಮಿತಿ’ ದೇಗುಲದ ಉಸ್ತುವಾರಿ ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ನಿರ್ದೇಶಿಸಿದೆ.

ಪ್ರಕರಣವೇನು?: ಗೋಕರ್ಣ ದೇವಾಲಯವನ್ನು ರಾಜ್ಯ ಸರ್ಕಾರ 2008ರ ಆಗಸ್ಟ್‌ 12ರಂದು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಸರ್ಕಾರದ ಈ ಕ್ರಮವನ್ನು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ ಪ್ರಶ್ನಿಸಲಾಗಿತ್ತು.

ಪ್ರಸ್ತಾವನೆಗೆ ಮಾನ್ಯತೆ:

2005ರಲ್ಲಿ ಮುಜರಾಯಿ ಇಲಾಖೆ ಏಕರೂಪ ಶಾಸನ ಜಾರಿಗೆ ತಂದಿತು. ಇದನ್ವಯ ಮಠಗಳು ಮತ್ತು ಅದಕ್ಕೆ ಸಂಬಂಧಿಸಿದ ದೇವಸ್ಥಾನಗಳನ್ನು ಹೊರತುಪಡಿಸಿ ಉಳಿದವುಗಳನ್ನು ತನ್ನ ವಶಕ್ಕೆ ಪಡೆದಿತ್ತು. ಇದರ ಆಧಾರದಲ್ಲಿ ರಾಮಚಂದ್ರಾಪುರ ಮಠವು 2008ರ ಏಪ್ರಿಲ್‌ನಲ್ಲಿ ರಾಜ್ಯಪಾಲರ ಕೋರಿಕೆ (ಆಗ ರಾಜ್ಯಪಾಲರ ಆಡಳಿತವಿತ್ತು) ಸಲ್ಲಿಸಿತು.

‘ದೇಗುಲವು ನಮ್ಮ ಮಠದ ಅಧೀನದಲ್ಲಿದೆ ಆದ್ದರಿಂದ ಇದರ ಆಡಳಿತದ ಸುಪರ್ದಿಯನ್ನು ನಮಗೆ ನೀಡಬೇಕು’ ಎಂದು ಕೇಳಿತ್ತು. ಈ ಮನವಿಗೆ ಪ್ರತ್ಯುತ್ತರವಾಗಿ ರಾಜ್ಯಪಾಲರ ಅಧೀನ ಕಾರ್ಯದರ್ಶಿ, ‘ಇಂತಹ ಪ್ರಸ್ತಾವನೆ ತರಬೇಡಿ’ ಎಂದು ತಿಳಿಸಿತ್ತು.

ತದನಂತರ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮಠವು ಈ ಕುರಿತು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿತು. ಇದನ್ನು ಮಾನ್ಯ ಮಾಡಿದ ಸರ್ಕಾರ ದೇಗುಲವನ್ನು ಸರ್ಕಾರದ ಅಧಿಸೂಚನೆಯಿಂದ ಕೈಬಿಟ್ಟು ಡಿನೋಟಿಫೈ ಮಾಡಿ ಮಠದ ವಶಕ್ಕೆ ನೀಡಿ ಆದೇಶಿಸಿತು.

ಪಿಐಎಲ್‌ ಸಲ್ಲಿಕೆ:

ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಗೋಕರ್ಣದ ವಿದ್ವಾನ್‌ ಸಾಂಬ ದೀಕ್ಷಿತ್, ನಾಗಭೂಷಣ ಉಪಾಧ್ಯಾಯ, ಬೆಂಗಳೂರಿನ ಎಂ.ಎಸ್‌.ಮುರಳೀಧರ, ರಮೇಶ್ ಮತ್ತು ಧಾರವಾಡದ ವಕೀಲ ಎಲ್‌.ಪಿ.ಮುತಗುಪ್ಪಿ 2008ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಇದೀಗ ಈ ಮೂರೂ ಅರ್ಜಿಗಳನ್ನು ಮಾನ್ಯ ಮಾಡಿರುವ ಹೈಕೋರ್ಟ್‌, ‘ರಾಜ್ಯ ಸರ್ಕಾರದ ಈ ಕ್ರಮ ಸಂಪೂರ್ಣ ಕಾನೂನು ಬಾಹಿರ’ ಎಂದು ಹೇಳಿದೆ.

‘ಮಠಕ್ಕೆ ಸಹಾಯ ಮಾಡುವ ಉದ್ದೇಶದಿಂದಲೇ ಡಿನೋಟಿಫೈ ಮಾಡಲಾಗಿದೆ. ದೇಗುಲ ನಮಗೆ ಸೇರಿದ್ದು ಎಂಬ ಮಠದ ವಾದವನ್ನು ಪುರಸ್ಕರಿಸಲು ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಡಿನೋಟಿಫೈ ಕ್ರಮ ಅಸಮಪರ್ಕವಾಗಿದೆ’ ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !