ಶನಿವಾರ, ಮಾರ್ಚ್ 6, 2021
30 °C
ದೇಶ– ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಆದಿಲ್‌ಶಾಹಿ ಅರಸರ ಸ್ಮಾರಕಗಳಿಗೆ ವಿದ್ಯುತ್‌ ಬೆಳಕು

ಗೋಳಗುಮ್ಮಟಕ್ಕೆ ಬೆಳಕಿನ ಮೆರುಗು!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಗದ್ವಿಖ್ಯಾತಿ ಪಡೆದ ಇಲ್ಲಿನ ಗೋಳಗುಮ್ಮಟವು, ದಶಕಗಳ ಬಳಿಕ ಮತ್ತೆ ವಿದ್ಯುತ್‌ ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿದೆ.

ರಾಷ್ಟ್ರೀಯ ಹಬ್ಬಗಳಂದು, ಸ್ಥಳೀಯ ಜಾತ್ರೆ, ಧಾರ್ಮಿಕ ಸಮಾರಂಭಗಳು ನಡೆಯುವ ಅವಧಿಯಲ್ಲಿ ಹಾಗೂ ವಾರಾಂತ್ಯದಲ್ಲಿ ದೀಪದ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಇನ್ನಿತರ ಸ್ಮಾರಕಗಳಿಗೂ ಈ ಭಾಗ್ಯ ಸಿಗುವ ನಿರೀಕ್ಷೆ ಇದೆ.

ಜಿಲ್ಲೆಯ ಕಗ್ಗೋಡದಲ್ಲಿ ಡಿಸೆಂಬರ್‌ನಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವದ ವೇಳೆ ದೀಪದ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮಾಡಲಾಗಿತ್ತು. ವಿಜಯಪುರದ ಆರಾಧ್ಯ ದೈವ ಸಿದ್ಧೇಶ್ವರರ ಸಂಕ್ರಮಣದ ಜಾತ್ರೆ ಸಂದರ್ಭದಲ್ಲಿ ಅದನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಲಾಗಿದೆ.

ದಶಕಗಳ ಬಳಿಕ ಚಾಲನೆ: ‘ಪ್ರವಾಸಿಗರನ್ನು ಆಕರ್ಷಿಸಲಿಕ್ಕಾಗಿ, 80ರ ದಶಕದಲ್ಲೇ ವಿಜಯಪುರದ ಐತಿಹಾಸಿಕ ಸ್ಮಾರಕಗಳಾದ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾಕಮಾನ್, ಗಗನಮಹಲ್‌ ಸೇರಿದಂತೆ ಜೋಡು ಗುಮ್ಮಟ ಸ್ಮಾರಕಗಳಿಗೆ ವಿದ್ಯುತ್‌ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ 6.30ರಿಂದ ರಾತ್ರಿ 9 ಗಂಟೆವರೆಗೂ ದೀಪದ ಬೆಳಕಿನಲ್ಲಿ ಇವು ಝಗಮಗಿಸುತ್ತಿದ್ದವು. ಈ ಯೋಜನೆ ಅನುಷ್ಠಾನಗೊಂಡ ಕೆಲವೇ ತಿಂಗಳಿಗೆ ವಿದ್ಯುತ್‌ ಬಿಲ್‌ ಪಾವತಿಸುವ ವಿಚಾರದಲ್ಲಿ, ಇಲಾಖೆಗಳ ನಡುವೆ ಗೊಂದಲ ಸೃಷ್ಟಿಯಾಯಿತು. ಆದ್ದರಿಂದ ಆರಂಭದಲ್ಲೇ ಯೋಜನೆ ಸ್ಥಗಿತಗೊಂಡಿತ್ತು’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಕ್ಯಾತನ್‌ ತಿಳಿಸಿದರು.

‘₹70,000 ವಿದ್ಯುತ್‌ ಶುಲ್ಕವನ್ನು ಪಾವತಿಸದಿರುವುದರಿಂದ ಇಡೀ ಯೋಜನೆ ಸ್ಥಗಿತಗೊಂಡಿತ್ತು. ಇದೀಗ ಶುಲ್ಕ ಪಾವತಿಸಲು ಮಹಾನಗರ ಪಾಲಿಕೆ ಸಮ್ಮತಿಸಿದೆ. ಹೀಗಾಗಿ ಭವಿಷ್ಯದಲ್ಲಿ ಸಮಸ್ಯೆ ಎದುರಾಗದು’ ಎಂದರು.

1982ಕ್ಕೂ ಮುಂಚೆಯೇ ಅನುಮತಿ: ‘ಆದಿಲ್‌ಶಾಹಿ ಅರಸರ ಕಾಲದ ಪ್ರಮುಖ ಸ್ಮಾರಕಗಳಿಗೆ ವಿದ್ಯುತ್ ಬೆಳಕಿನ ವ್ಯವಸ್ಥೆ ಕಲ್ಪಿಸಲು 1982ಕ್ಕೂ ಮುಂಚೆಯೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅನುಮತಿ ನೀಡಿದೆ. ಶನಿವಾರ– ಭಾನುವಾರ ಈ ಸ್ಮಾರಕಗಳು ವಿದ್ಯುತ್‌ ದೀಪದ ಬೆಳಕಿನಿಂದ ಕಂಗೊಳಿಸುತ್ತಿದ್ದವು.ಪ್ರವಾಸೋದ್ಯಮ ಇಲಾಖೆ ನಿಭಾಯಿಸುತ್ತಿತ್ತು’ ಎಂದು ಎಎಸ್‌ಐನ ಅಧಿಕಾರಿ ಮೌನೇಶ್ವರ ಬಿ.ಕುರಬತ್ತಿ ತಿಳಿಸಿದರು.

ಧ್ವನಿ– ಬೆಳಕಿನ ವ್ಯವಸ್ಥೆ
‘ಧ್ವನಿ– ಬೆಳಕಿನ ವ್ಯವಸ್ಥೆಯನ್ನು ಗೋಳಗುಮ್ಮಟಕ್ಕೂ ವಿಸ್ತರಿಸಲಾಗುವುದು. ಅದರ ಬಳಿಕ, ಪ್ರವಾಸಿಗರು ರಾತ್ರಿ ವೇಳೆ ನಗರದಲ್ಲೇ ಉಳಿಯಲಿದ್ದಾರೆ. ಇದಕ್ಕೆ ಪೂರಕವಾಗಿ ವಾಸ್ತವ್ಯಕ್ಕೆ ಸೌಲಭ್ಯ ಕಲ್ಪಿಸಬೇಕಾಗಿದೆ. ಮೂಲಸೌಕರ್ಯ ಒದಗಿಸುವುದರ ಜತೆಗೆ ಸೌಂದರ್ಯೀಕರಣಕ್ಕೂ ಒತ್ತು ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್‌ ಮೊಹಸೀನ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ ₹15 ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ಹೇಳಿದರು.

**

ವಿಜಯಪುರ, ಕಲಬುರ್ಗಿ, ಬೀದರ್‌ನ ಐತಿಹಾಸಿಕ ಸ್ಮಾರಕಗಳನ್ನು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಚುರುಕಿನಿಂದ ನಡೆದಿದೆ
- ರಮೇಶ ಜಿಗಜಿಣಗಿ, ಕೇಂದ್ರ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು