ಚಿನ್ನದ ವ್ಯಾಪಾರಿ ಅಪಹರಣ, ದರೋಡೆ: ಇಬ್ಬರ ಬಂಧನ, ₹1.75ಕೋಟಿ ವಶ

7

ಚಿನ್ನದ ವ್ಯಾಪಾರಿ ಅಪಹರಣ, ದರೋಡೆ: ಇಬ್ಬರ ಬಂಧನ, ₹1.75ಕೋಟಿ ವಶ

Published:
Updated:

ಮಂಗಳೂರು: ನಗರದಲ್ಲಿ ಸೆಪ್ಟೆಂಬರ್‌ 23ರಂದು ಚಿನ್ನದ ಅಂಗಡಿ ನೌಕರನನ್ನು ಅಪಹರಿಸಿ, ದರೋಡೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವ ನಗರ ಪೊಲೀಸರು ₹1.75 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ' ನಗರದ ರಥಬೀದಿಯ ವೈಷ್ಣವಿ ಜ್ಯುವೆಲ್ಲರಿ ನೌಕರ ಮಂಜುನಾಥ್ ಗಣಪತಿ ಪಾಲಂನಕರ ಎಂಬುವವರನ್ನು ಅಪಹರಿಸಿ ₹15 ಲಕ್ಷ ದರೋಡೆ ಮಾಡಲಾಗಿದೆ ಎಂಬ ದೂರು ಬಂದಿತ್ತು. ಈ ಪ್ರಕರಣದಲ್ಲಿ ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ತಲಪಾಡಿ ನಿವಾಸಿ ಅಬ್ದುಲಗ ಮನ್ನಾನ್ (29) ಮತ್ತು ಪಡೀಲ್ ಅಳಪೆ ನಿವಾಸಿ ರಾಝಿ (26) ಎಂಬುವವರನ್ನು ಬಂಧಿಸಲಾಗಿದೆ. ಒಟ್ಟು ₹2.35 ಕೋಟಿ ದರೋಡೆ ಮಾಡಿರುವ ಮಾಹಿತಿ ಲಭಿಸಿದೆ. ₹1.75 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ' ಎಂದರು.

ಮಂಜುನಾಥ್ ಗಣಪತಿ ಮುಂಬೈನಿಂದ ಹಣದ ಚೀಲದೊಂದಿಗೆ ನಗರಕ್ಕೆ ಬರುತ್ತಿರುವ ಬಗ್ಗೆ ಆರೋಪಿಗಳು ಮಾಹಿತಿ ಸಂಗ್ರಹಿಸಿದ್ದರು. ಸೆ.23ರ ಬೆಳಿಗ್ಗೆ ಲೇಡಿಹಿಲ್ ಬಸ್ ನಿಲ್ದಾಣದ ಬಳಿ ಬಸ್ ಇಳಿದು ರಸ್ತೆ ದಾಟುತ್ತಿದ್ದಾಗ ಅವರನ್ನು ಆರೋಪಿಗಳು ಅಪಹರಿಸಿದ್ದರು. ಇನ್ನೋವಾ ಕಾರಿನಲ್ಲಿ ಕರೆದೊಯ್ದಿದ್ದರು. 'ಕಾರಿನ ಮುಂದಿನ ಸೀಟಿನಲ್ಲಿ ಎಸಿಪಿ ಮಂಜುನಾಥ ಶೆಟ್ಟಿ ಇದ್ದಾರೆ' ಎಂದು ಬೆದರಿಸಿ ಹಣದ ಚೀಲ ಕಿತ್ತುಕೊಂಡಿದ್ದರು. ನಂತರ ಮಂಜುನಾಥ್ ಅವರನ್ನು ಬಜ್ಪೆ ರಸ್ತೆಯಲ್ಲಿ ಇಳಿಸಿ ಪರಾರಿಯಾಗಿದ್ದರು ಎಂದರು.

ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದರು. ಇಬ್ಬರನ್ನು ಬಂಧಿಸಿ, ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ನಾಲ್ವರ ಪತ್ತೆಗೆ ಶೋಧ ನಡೆಯುತ್ತಿದೆ. ಅವರ ಬಳಿ ಇನ್ನೂ ₹ 60 ಲಕ್ಷ ನಗದು ಇರುವ ಮಾಹಿತಿ ಲಭಿಸಿದೆ ಎಂದು ವಿವರ ನೀಡಿದರು.

ದೂರುದಾರರು ಮೊದಲು ₹ 15 ಲಕ್ಷ ದರೋಡೆ ಆಗಿದೆ ಎಂದಷ್ಟೆ ಉಲ್ಲೇಖಿಸಿದ್ದರು. ವಾಸ್ತವಿಕ ಸಂಗತಿ ಮುಚ್ಚಿಟ್ಟಿರುವ ಕುರಿತು ತನಿಖೆ ನಡೆಯುತ್ತಿದೆ. ಈ ವಹಿವಾಟಿನ ಬಗ್ಗೆಯೂ ತನಿಖೆ ನಡೆಸಲಾಗುವುದು. ಈ ಸಂಬಂಧ ಜ್ಯುವೆಲ್ಲರಿ ಮಾಲೀಕ ಸಂತೋಷ್ ಕುರ್ಡೇಕರ್ ಮತ್ತು ದೂರುದಾರ ಮಂಜುನಾಥ್ ನನ್ನು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.

ಬೃಹತ್ ಪ್ರಮಾಣದ ನಗದು ಪತ್ತೆಯಾಗಿರುವ‌ ಕುರಿತು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಕ್ಕೂ ಮಾಹಿತಿ ನೀಡಲಾಗುವುದು. ಜ್ಯುವೆಲ್ಲರಿ ಮಾಲೀಕರ ವಹಿವಾಟು ಕುರಿತು ಅವರು ಹೆಚ್ಚಿನ ತನಿಖೆ ನಡೆಸಲಿದ್ದಾರೆ ಎಂದರು.

ಪ್ರಕರಣವನ್ನು ಪತ್ತೆ ಮಾಡಿರುವ ನಗರ ಅಪರಾಧ ಘಟಕದ ಇನ್ ಸ್ಪೆಕ್ಟರ್ ಶಾಂತಾರಾಮ್, ಸಬ್ ಇನ್ ಸ್ಪೆಕ್ಟರ್ ಶ್ಯಾಮ್ ಸುಂದರ್, ಉರ್ವ ಠಾಣೆ ಇನ್ ಸ್ಪೆಕ್ಟರ್ ರವೀಶ್ ನಾಯಕ್ ಮತ್ತು ಸಿಬ್ಬಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಪ್ರಕಟಿಸಿದರು.


ವಶಕ್ಕೆ ಪಡೆದ ನಗದನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಲಾಯಿತು.

 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !