ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ಸೂರ್‌ನ ‘ಐಎಂಎ ಜ್ಯುವೆಲ್ಸ್’, 3ನೇ ಪತ್ನಿ ಮನೆ ಮೇಲೆ ಎಸ್‌ಐಟಿ ದಾಳಿ

₹33 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ
Last Updated 18 ಜೂನ್ 2019, 17:51 IST
ಅಕ್ಷರ ಗಾತ್ರ

ಬೆಂಗಳೂರು: ಮನ್ಸೂರ್‌ ಖಾನ್‌ ಮಾಲೀಕತ್ವದ ಜಯನಗರದ 11ನೇ ಮುಖ್ಯರಸ್ತೆಯಲ್ಲಿರುವ ‘ಐಎಂಎ ಜ್ಯುವೆಲ್ಸ್‌’ ಮತ್ತು ಆತನ ವಿಚ್ಚೇದಿತ ಮೂರನೇ ಪತ್ನಿಯ ಮನೆಯಲ್ಲಿ ಶೋಧ ನಡೆಸಿರುವ ಎಸ್‌ಐಟಿ ಅಧಿಕಾರಿಗಳು ₹33 ಕೋಟಿ ಮೌಲ್ಯದ ಚಿನ್ನಾಭರಣ, ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಜ್ಯುವೆಲ್ಸ್‌ ಮಳಿಗೆಯಲ್ಲಿ ₹ 13 ಕೋಟಿ ಮೌಲ್ಯದ 43 ಕೆ.ಜಿ ಚಿನ್ನಾಭರಣ, ₹17.6 ಕೋಟಿ ಮೌಲ್ಯದ 5,864 ಕ್ಯಾರೆಟ್‌ವಜ್ರ, ₹ 1.5 ಕೋಟಿ ಮೌಲ್ಯದ 520 ಕೆ.ಜಿ ಬೆಳ್ಳಿ ಹಾಗೂ ₹ 1.5 ಕೋಟಿ ಮೌಲ್ಯದ ವಜ್ರಾಭರಣ ವಶಪಡಿಸಿಕೊಳ್ಳಲಾಗಿದೆ.

ಮೂರನೇ ಪತ್ನಿ ತಬಸ್ಸಮ್ ಬಾನು ಅವರ ಶಿವಾಜಿನಗರದ ಗುಲ್ಸನ್‌ ಅಪಾರ್ಟ್‌ಮೆಂಟ್‌ನ ಮೇಲೆ ದಾಳಿ ನಡೆಸಿ ₹39.5 ಕೋಟಿ ಮೌಲ್ಯದ 1503 ಗ್ರಾಂ ಚಿನ್ನಾಭರಣ, 1.5 ಕೆ.ಜಿ ಬೆಳ್ಳಿ. ₹2.69 ಲಕ್ಷ ನಗದು ಜಪ್ತಿ ಮಾಡಲಾಗಿದೆ.

ಅಲ್ಲದೆ, ಆಕೆಯ ಹೆಸರಿಗೆ ತಿಲಕ್ ನಗರದ ಎಸ್ಆರ್‌ಕೆ ಗಾರ್ಡನ್‌ನಲ್ಲಿ ₹120 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್‌ ಸಮುಚ್ಚಯವಿದೆ. ಆ ದಾಖಲೆಗಳನ್ನೂ ಜಪ್ತಿ ಮಾಡಲಾಗಿದೆ. ಜೊತೆಗೆ ಮನ್ಸೂರ್‌ ಖಾನ್‌ಗೆ ಸೇರಿದ್ದು ಎನ್ನಲಾದ ವಾಣಿಜ್ಯ ಕಟ್ಟಡಗಳು, ಜಮೀನುಗಳು, ಶಾಲೆಗಳ ಆಸ್ತಿ, ಅಪಾರ್ಟ್‌ಮೆಂಟ್ ಸೇರಿ ಒಟ್ಟು 28 ಸ್ಥಿರಾಸ್ತಿಗಳನ್ನೂ ಎಸ್ಐಟಿ ಗುರುತಿಸಿದೆ.

ವಂಚನೆಗೊಳಗಾದವರಿಗೆ ನ್ಯಾಯ ಕೊಡಿಸುವೆ: ಕುಮಾರಸ್ವಾಮಿ
ರಾಮನಗರ: ಐಎಂಎ ವಂಚನೆ ಪ್ರಕರಣದ ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಸರ್ಕಾರವು ಒತ್ತಡಕ್ಕೆ ಮಣಿಯುವುದಿಲ್ಲ.‌ ಹಣ ತೊಡಗಿಸಿದವರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಯ ನೀಡಿದರು.

ಚನ್ನಪಟ್ಟಣ ತಾಲ್ಲೂಕಿನ ಕಣ್ವ ಗ್ರಾಮದ ಬಳಿ ಮಂಗಳವಾರ ನೀರಾವರಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಗ್ರಾಮ ವಾಸ್ತವ್ಯಕ್ಕೆ ಮುನ್ನ ಡಿಐಜಿ‌ ಹಾಗೂ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಈ ಸಂಬಂಧ ಸಭೆ ನಡೆಸುತ್ತೇನೆ. ಆರೋಪಿಗಳು ವಿದೇಶಕ್ಕೆ ಹೋಗಿದ್ದರೂ ಪರವಾಗಿಲ್ಲ. ಮೋಸ ಹೋದವರಿಗೆ ನ್ಯಾಯ‌ ಕೊಡಿಸುತ್ತೇನೆ. ಈ ಬಗ್ಗೆ ಅನುಮಾನ‌ ಬೇಡ’ ಎಂದರು.

‘ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ನ್ಯಾಯಾಲಯಗಳು ಯಾವ ನಿರ್ಬಂಧವನ್ನೂ‌‌ ಹೇರಿಲ್ಲ. ಈ ಬಗ್ಗೆ ಮಾಹಿತಿಯ ಕೊರತೆ ಹಾಗೂ ರಾಜಕೀಯ ಕಾರಣಗಳಿಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಕೇಂದ್ರ ಸಚಿವರಿಗೂ ಇದನ್ನು ಮನವರಿಕೆ ಮಾಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

₹ 9 ಕೋಟಿ ಚೆಕ್‌ ಬೌನ್ಸ್‌!
ಐಎಂಎ ಜ್ಯುವೆಲ್ಸ್‌ಗೆ ₹ 9.83 ಕೋಟಿ ಮೌಲ್ಯದ ಚಿನ್ನಾಭರಣ ನೀಡಿದ್ದ ಅವೆನ್ಯೂ ರಸ್ತೆಯ ನಿವಾಸಿ ಉದ್ಯಮಿ ಅಂಕಿತ್ ಸಂಗಾವಿ ಎಂಬುವರಿಗೆ ಕಂಪನಿ ನೀಡಿದ್ದ ₹ 9 ಕೋಟಿ ಮೊತ್ತದ ಚೆಕ್ ಜೂನ್‌ 11 ರಂದು ಬೌನ್ಸ್ ಆಗಿರುವ ಕುರಿತು ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಚೆಕ್‌ ಬೌನ್ಸ್‌ ಆಗಿರುವ ಬಗ್ಗೆ ವಿಚಾರಿಸಲು ಐಎಂಎ ಜ್ಯುವೆಲ್ಸ್ ಮಳಿಗೆಗೆ ತೆರಳಿದಾಗ ಮನ್ಸೂರ್ ತಲೆಮರೆಸಿಕೊಂಡಿರುವ ವಿಷಯ ಗೊತ್ತಾಗಿದೆ’ ಎಂದು ಅಂಕಿತ್ ದೂರಿನಲ್ಲಿ ತಿಳಿಸಿದ್ದಾರೆ.

ಐಎಂಎ ಕಚೇರಿಯಲ್ಲಿ ಇಡಿಪರಿಶೀಲನೆ
ಮನ್ಸೂರ್‌ ಖಾನ್‌ ವಿರುದ್ಧ ದೂರು ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನ್ಯಾಯಾಲಯದಿಂದ ಸರ್ಚ್‌ ವಾರೆಂಟ್‌ ಪಡೆದು ಶಿವಾಜಿ
ನಗರದ ಲೇಡಿ ಕರ್ಜನ್ ರಸ್ತೆಯಲ್ಲಿ ಐಎಂಎ ಸಮೂಹ ಕಂಪನಿಯ ಪ್ರಧಾನ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದರು.

ಮನ್ಸೂರ್ ಸೇರಿದಂತೆ ಏಳು ಮಂದಿಗೆ ಇ.ಡಿ ಸೋಮವಾರ ನೋಟಿಸ್‌ ನೀಡಿತ್ತು. ಮಂಗಳವಾರ ನಾಲ್ವರು ಅಧಿಕಾರಿಗಳ ತಂಡ ಐಎಂಎ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿತು. ಐಎಂಎ ವಿದೇಶಿ ಬಂಡವಾಳ ಹೂಡಿಕೆ, ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಆರೋಪ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT