ಬುಧವಾರ, ಸೆಪ್ಟೆಂಬರ್ 18, 2019
26 °C
ಜನವರಿಯಿಂದ ಸೆಪ್ಟೆಂಬರ್‌ 4ರವರೆಗೆ ತಲಾ 10 ಗ್ರಾಂಗೆ ₹ 7,505ರವರೆಗೂ ಏರಿಕೆ

ಚಿನ್ನ ‌ದುಬಾರಿ: ವಹಿವಾಟು ಕುಸಿತ

Published:
Updated:
Prajavani

ಬೆಂಗಳೂರು: ಜಾಗತಿಕ ಮತ್ತು ದೇಶಿ ಆರ್ಥಿಕತೆಗಳ ಮಂದಗತಿಯ ಬೆಳವಣಿಗೆಯಿಂದಾಗಿ ಹೂಡಿಕೆದಾರರು ಚಿನ್ನದೆಡೆಗೆ ಈಗ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದಾಗಿ ಬೆಲೆಯು ಗರಿಷ್ಠ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಖರೀದಿದಾರರಿಗೆ ಹೊರೆಯಾಗುತ್ತಿದೆ.

ದೀಪಾವಳಿಗೆ ವೇಳೆಗೆ ತಲಾ 10 ಗ್ರಾಂಗೆ ₹ 38 ಸಾವಿರಕ್ಕೆ ತಲುಪಲಿದೆ ಎಂದು ಮಾರುಕಟ್ಟೆಯ ವಿಶ್ಲೇಷಕರು ಹೇಳಿದ್ದರು. ಆದರೆ, ಈಗಾಗಲೇ ₹ 40 ಸಾವಿರದ ಸಮೀಪಕ್ಕೆ ಬಂದು ನಿಂತಿದೆ. ಹಬ್ಬದ ವೇಳೆಗೆ ₹ 45 ಸಾವಿರಕ್ಕೆ ತಲುಪಿದರೂ ಅಚ್ಚರಿ ಏನಲ್ಲ. ಆದರೆ, ಉತ್ತಮ ಬೆಲೆ ಸಿಗುತ್ತದೆ ಎಂದು ಜನ ಮಾರಾಟಕ್ಕೆ ಮುಗಿಬಿದ್ದರೆ ಆಗ ಬೆಲೆಯಲ್ಲಿ ದಿಢೀರ್‌ ಇಳಿಕೆ ಕಾಣುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

2019ರ ಜನವರಿಯಿಂದ ಇಲ್ಲಿಯವರೆಗೆ ಅಂದರೆ ಸೆಪ್ಟೆಂಬರ್‌ 4  ರವರೆಗೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ‌‌ ₹ 7,505ರವರೆಗೂ ಏರಿಕೆಯಾಗಿದ್ದು, ₹ 39,223ಕ್ಕೆ ತಲುಪಿದೆ. ‌‌

ಚಿನ್ನದ ಬೆಲೆಯು ಮುಖ್ಯವಾಗಿ ಜಾಗತಿಕ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿದೆ. ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರದಿಂದ ಷೇರುಪೇಟೆಯಲ್ಲಿ ಬಂಡವಾಳ ಗಳಿಕೆ ಕಷ್ಟವಾಗಿದ್ದು, ಹೂಡಿಕೆದಾರರು ಸುರಕ್ಷಿತ ಹೂಡಿಕೆ ಮಾರ್ಗವಾಗಿರುವ ಚಿನ್ನದ ಖರೀದಿಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಇದರಿಂದಾಗಿ ಜಾಗತಿಕ
ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಿದೆ. ಇದು ಭಾರತದ ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರುತ್ತಿದೆ.  

'ಅಮೆರಿಕ ಮತ್ತು ಚೀನಾದ ವಾಣಿಜ್ಯ ಸಮರದ ಜತೆಗೆ ಭಾರತದಲ್ಲಿ ರೂಪಾಯಿ ಮೌಲ್ಯ ಇಳಿಕೆ ಕಾಣುತ್ತಿರುವುದು ಚಿನ್ನದ ದರದ ಮೇಲೆ ಎರಡು ಪಟ್ಟು ಹೆಚ್ಚಿನ ಪರಿಣಾಮ ಬೀರುತ್ತಿದೆ’ ಎಂದು ಅಖಿಲ ಭಾರತ ಹರಳು ಮತ್ತು ಚಿನ್ನಾಭರಣ ಸಮಿತಿಯ ಅಧ್ಯಕ್ಷ ಅನಂತ ಪದ್ಮನಾಭನ್‌ ಅವರು ಅಭಿಪ್ರಾಯಪಟ್ಟಿದ್ದಾರೆ. 

ಹೆಚ್ಚುತ್ತಲೇ ಇದೆ ಬೇಡಿಕೆ: ಚಿನ್ನದ ಆಮದು ಸುಂಕವನ್ನು ಶೇ 10 ರಿಂದ ಶೇ 12.5ಕ್ಕೆ ಹೆಚ್ಚಿಸಿರುವುದರಿಂದ 2019ರಲ್ಲಿ ಬೇಡಿಕೆ ಕಡಿಮೆಯಾಗಲಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಹೇಳಿತ್ತು. ಆದರೆ ಕ್ಯಾಲೆಂಡರ್‌ ವರ್ಷದ ಏಪ್ರಿಲ್‌–ಜೂನ್‌ ಅವಧಿಯಲ್ಲಿ ಭಾರತದ ಚಿನ್ನದ ಬೇಡಿಕೆ ಶೇ 13ರಷ್ಟು ಏರಿಕೆಯಾಗಿದ್ದು, 189 ಟನ್‌ಗಳಿಗೆ ತಲುಪಿದೆ.

ಶೇ 45ರಷ್ಟು ಮಾರಾಟ ಕುಸಿತ

‘ಸದ್ಯದ ಮಟ್ಟಿಗೆ, ಮಾರಾಟ ಶೇ 40 ರಿಂದ ಶೇ 45ರವರೆಗೂ ಇಳಿಕೆಯಾಗಿದೆ. ನವರಾತ್ರಿ ವೇಳೆಗೆ ಸ್ಥಿತಿ ಸುಧಾರಿಸುವ ವಿಶ್ವಾಸವಿದೆ. ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಬೇಡಿಕೆ ಸೃಷ್ಟಿಯಾಗಿ ಮಾರಾಟ ಚೇತರಿಸಿಕೊಳ್ಳದೇ ಇದ್ದರೆ ಆಗ ಉದ್ಯೋಗ ಕಡಿತ, ಮಳಿಗೆಗಳನ್ನು ಮುಚ್ಚುವ ಸ್ಥಿತಿ ಎದುರಾಗಲಿದೆ. ಚಿನ್ನದ ಬೆಲೆ ಏರಿಕೆಯಾಗಲಿ, ಆಗದೇ ಇರಲಿ. ಮದುವೆ ಸಮಾರಂಭಗಳು ನಡೆದೇ ನಡೆಯುತ್ತವೆ. ಚಿನ್ನಾಭರಣ ಖರೀದಿಸದೇ ಇರಲಂತೂ ಆಗುವುದಿಲ್ಲ. ಖರೀದಿ ಪ್ರಮಾಣದಲ್ಲಿ ಕೆಲಮಟ್ಟಿಗೆ ಇಳಿಕೆಯಾಗಬಹುದು‘ ಎಂದು ಪದ್ಮನಾಭನ್‌ ಹೇಳಿದ್ದಾರೆ.

‘ಉದ್ಯಮ ಚೇತರಿಸಿಕೊಳ್ಳುವ ಅವಕಾಶವೇ ಸಿಗಲಿಲ್ಲ. ನೋಟು ರದ್ದತಿಯ ಬಳಿಕ ಜಿಎಸ್‌ಟಿ, ಆ ಬಳಿಕ ಇದೀಗ ಆಮದು ಸುಂಕ ಹೆಚ್ಚಳದಿಂದಾಗಿ ವಹಿವಾಟು ಅರ್ಧಕ್ಕಿಂತಲೂ ಹೆಚ್ಚು ಇಳಿಮುಖವಾಗಿದೆ’ ಎನ್ನುತ್ತಾರೆ ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಆದ್ಯಕ್ಷ ವೆಂಕಟೇಶ್‌ ಬಾಬು.

ಆಮದು ಸುಂಕ ತಗ್ಗಿಸಿ

ಆಮದು ಸುಂಕ ತಗ್ಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಶೇ 10ರಷ್ಟಿದ್ದ ಸುಂಕವನ್ನು ಶೇ 12.5ಕ್ಕೆ ಹೆಚ್ಚಿಸಲಾಗಿದೆ. ಹೀಗೆ ಮಾಡುವುದರಿಂದ ಸರ್ಕಾರ ವರಮಾನ ಗಳಿಸಲು ಮುಂದಾಗಿದೆ. ಆದರೆ, ಚಿನ್ನದ ಕಳ್ಳಸಾಗಣೆ ತಡೆಯಲೂ ಸೂಕ್ತ ಕ್ರಮ ಕೈಗೊಳ್ಳಬೇಕು. ಉದ್ಯಮದ ವಹಿವಾಟಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದೂ ವರ್ತಕರು ಒತ್ತಾಯಿಸಿದ್ದಾರೆ.

ಬೆಲೆ ಏರಿಕೆಗೆ ಕಾರಣಗಳೇನು?

*ಜಾಗತಿಕ ಆರ್ಥಿಕತೆಯ ಅನಿಶ್ಚಿತ ಸ್ಥಿತಿ

*ಅಮೆರಿಕ–ಚೀನಾ ನಡುವಣ ವಾಣಿಜ್ಯ ಸಮರ

*ಷೇರುಪೇಟೆಯಲ್ಲಿ ಹೂಡಿಕೆಗೆ ನಿರೀಕ್ಷಿತ ಮಟ್ಟದ ಗಳಿಕೆ ಬಾರದೇ ಇರುವುದು

*ಬಾಂಡ್‌ ಗಳಿಕೆಯಲ್ಲಿ ಇಳಿಕೆ

*ರೂಪಾಯಿ ವಿನಿಮಯ ದರದಲ್ಲಿ ಆಗುತ್ತಿರುವ ಇಳಿಕೆ

*ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನದ ಖರೀದಿ ತ್ವರಿತಗೊಳಿಸಿವೆ

*ಹೂಡಿಕೆ ಆಯ್ಕೆಯಾಗಿ ಆಕರ್ಷಿಸುತ್ತಿರುವ ಚಿನ್ನ

*ಚಿನ್ನದ ಇಟಿಎಫ್‌ ಬೇಡಿಕೆಯೂ ಹೆಚ್ಚಳ

Post Comments (+)