ಕಾಡುಗೊಲ್ಲ, ಹಟ್ಟಿ ಗೊಲ್ಲ ‘ಎಸ್ಟಿಗೆ’ ಸೇರ್ಪಡೆಗೆ ಪ್ರಧಾನಿಗೆ ಮನವಿ– ಯಡಿಯೂರಪ್ಪ

ಬುಧವಾರ, ಮಾರ್ಚ್ 27, 2019
22 °C
ಗುರುವಂದನೆ, ಗೊಲ್ಲರ ಸಮಾವೇಶ

ಕಾಡುಗೊಲ್ಲ, ಹಟ್ಟಿ ಗೊಲ್ಲ ‘ಎಸ್ಟಿಗೆ’ ಸೇರ್ಪಡೆಗೆ ಪ್ರಧಾನಿಗೆ ಮನವಿ– ಯಡಿಯೂರಪ್ಪ

Published:
Updated:
Prajavani

ತುಮಕೂರು: ಗೊಲ್ಲ ಸಮುದಾಯದ ಕಾಡುಗೊಲ್ಲ, ಹಟ್ಟಿ ಗೊಲ್ಲ ಸಮುದಾಯಗಳನ್ನು ’ಪರಿಶಿಷ್ಟ ವರ್ಗ’ಕ್ಕೆ ಸೇರ್ಪಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶನಿವಾರ ನಗರದ ಗಾಜಿನ ಮನೆಯಲ್ಲಿ ಅಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿ, ಗುರುವಂದನೆ ಹಾಗೂ ಗೊಲ್ಲ ಸಮಾವೇಶದಲ್ಲಿ ಮಾತನಾಡಿದರು.

‘ಗೊಲ್ಲ ಸಮುದಾಯ ಶ್ರಮಿಕ ಮತ್ತು ಕಾಯಕ ನಿಷ್ಠ ಸಮಾಜವಾಗಿದೆ. ಸಾಮಾಜಿಕ, ಶೈಕ್ಷಣಿಕವಾಗಿ, ರಾಜಕೀಯವಾಗಿ ಈ ಸಮುದಾಯ ಮುಂದುವರಿಯಬೇಕು. ಈ ದಿಶೆಯಲ್ಲಿ ನಮ್ಮ ಪಕ್ಷವು ಎಲ್ಲ ರೀತಿಯ ಸಹಕಾರ ನೀಡಲಿದೆ’ ಎಂದು ಭರವಸೆ ನೀಡಿದರು.

‘ಕಾಡುಗೊಲ್ಲ, ಹಟ್ಟಿಗೊಲ್ಲ ಸಮುದಾಯ ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂಬ ಸಮುದಾಯದ ಬೇಡಿಕೆ ಸೂಕ್ತವಾಗಿದೆ. ಈಗಾಗಲೇ ಈ ದಿಶೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ನಡೆದಿದೆ’ ಎಂದು ತಿಳಿಸಿದರು.

ಸಮುದಾಯದ ಮುತ್ಸದ್ದಿ ನಾಯಕರಾಗಿದ್ದ ಕೃಷ್ಣಪ್ಪ ಅವರ ಮಗಳಾದ ಪೂರ್ಣಿಮಾ ಅವರಿಗೆ ರಾಜಕೀಯ ಅವಕಾಶವನ್ನು ನಮ್ಮ ಪಕ್ಷ ಕೊಟ್ಟಿದ್ದು, ಶಾಸಕಿಯಾಗಿ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಬಾರದ ಸಿಎಂ– ಬೇಸರ: ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗದ ಗೊಲ್ಲಗಿರಿ ಯಾದವಪೀಠದ ಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ‘ಸಮಾವೇಶಕ್ಕೆ ಮುಖ್ಯಮಂತ್ರಿಯವರು ಬರಬೇಕಿತ್ತು. ಅವರನ್ನು ಕೇಳಿಯೇ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ, ಯಾಕೆ ತಪ್ಪಿಸಿಕೊಂಡಿದ್ದಾರೊ ಗೊತ್ತಿಲ್ಲ’ ಎಂದರು.

ಸಮಾಜದ ಜನರು ಸಂಘಟಿತರಾದರೆ ರಾಜಕೀಯ ಪಕ್ಷಗಳು, ಅವುಗಳ ಮುಖಂಡರು ಹುಡುಕಿಕೊಂಡು ಬರುತ್ತಾರೆ. ಇಲ್ಲದೇ ಇದ್ದರೆ ಯಾರೂ ಬರುವುದಿಲ್ಲ. ಸಮಾಜದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ರಾಜ್ಯ ಗೊಲ್ಲರ ಸಂಘದ ಗೌರವಾಧ್ಯಕ್ಷ  ಡಿ.ಟಿ.ಶ್ರೀನಿವಾಸ್ ಮಾತನಾಡಿದರು. ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಜಿ.ಚಂದ್ರಶೇಖರಗೌಡ ವೇದಿಕೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !