ಗುರುವಾರ , ನವೆಂಬರ್ 14, 2019
19 °C
ಗೊಲ್ಲರಹಟ್ಟಿಯಲ್ಲಿ ಜೀವಂತವಾಗಿದೆ ಮೌಢ್ಯ l ‘ದೇವರು ಒಪ್ಪುವುದಿಲ್ಲ’ ಎಂದು ಶೌಚಾಲಯ ನಿರ್ಮಾಣಕ್ಕೂ ಹಿಂದೇಟು

ಉದಿ ಬಾಗಿಲು ದಾಟಿದರೆ ಹಟ್ಟಿಗೆ ಮೈಲಿಗೆ

Published:
Updated:
Prajavani

ಚಿತ್ರದುರ್ಗ: ದಲಿತರು ಗೊಲ್ಲರಹಟ್ಟಿಯ ಉದಿ ಬಾಗಿಲು ಹಾಗೂ ಗುಡ್ಡೆಕಲ್ಲು ದಾಟಿದ್ದು ಗೊತ್ತಾದರೆ ಗೋಮೂತ್ರ ಪ್ರೋಕ್ಷಣೆ ಮಾಡಿ ಎಲ್ಲ ಮನೆಗಳನ್ನು ಶುದ್ಧೀಕರಿಸುವ ಸಂಪ್ರದಾಯ ಇಂದಿಗೂ ಚಾಲನೆಯಲ್ಲಿದೆ.

ಇದನ್ನೂ ಓದಿ: ದಲಿತ ಎಂಬ ಕಾರಣಕ್ಕೆ ಹಟ್ಟಿ ಪ್ರವೇಶಕ್ಕೆ ಸಂಸದರಿಗೆ ಅಡ್ಡಿ

ಗೊಲ್ಲರಹಟ್ಟಿಗೆ ಉದಿಬಾಗಿಲು ಪ್ರವೇಶ ದ್ವಾರ. ದಲಿತ ಸಮುದಾಯದ ಎಡಗೈ ಪಂಗಡದವರಿಗೆ ಈ ಬಾಗಿಲಿನಿಂದ ಪ್ರವೇಶಕ್ಕೆ ನಿರ್ಬಂಧ. ಹಟ್ಟಿಗೆ ಭೇಟಿ ನೀಡಿದ ವ್ಯಕ್ತಿ ದಲಿತರಾಗಿದ್ದರೆ ಎಲ್ಲ ಮನೆಗಳೂ ಈ ಸಂಪ್ರದಾಯ ‍ಪಾಲಿಸುವುದು ಕಡ್ಡಾಯ. ದೇಗುಲದಲ್ಲಿ ಪೂಜೆ ನೆರವೇರುವವರೆಗೂ ಚಿಕ್ಕ ಮಕ್ಕಳು ಕೂಡ ಊಟ ಸೇವಿಸುವಂತಿಲ್ಲ.‌

ಇದನ್ನೂ ಓದಿ: ಸಂಸದರಿಗೆ ಗೊಲ್ಲರಹಟ್ಟಿ ಪ್ರವೇಶಿಸದಂತೆ ಅಡ್ಡಿ ಪಡಿಸಿಲ್ಲ; ನಾವೇ ಆಹ್ವಾನಿಸುತ್ತೇವೆ

ಗ್ರಾಮಸ್ಥರೇ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಾಗಲೂ ಈ ಸಂಪ್ರದಾಯ ಪಾಲನೆ ಮಾಡಲಾಗುತ್ತದೆ. ಚಪ್ಪಲಿ ತಾಗಿದ ವ್ಯಕ್ತಿಯನ್ನು ಹಟ್ಟಿಯಿಂದ ಹೊರಗೆ ಇಡಲಾಗುತ್ತದೆ. ದಾಸಪ್ಪ ಮತ್ತು ಪೂಜಾರಿಗಳು ಕಟ್ಟೆಮನೆಯ ತೀರ್ಥ ತಂದು ಪ್ರೋಕ್ಷಣೆ ಮಾಡಿದ ಬಳಿಕವೇ ಹಟ್ಟಿ ಶುದ್ಧೀಕರಣಗೊಂಡಿದೆ ಎಂಬುದು ಜನರ ನಂಬಿಕೆ.

ಇದನ್ನೂ ಓದಿ: ಅಸ್ಪೃಶ್ಯನಂತೆ ಕಂಡಿದ್ದರಿಂದ ಬೇಸರ: ಸಂಸದ ನಾರಾಯಣಸ್ವಾಮಿ 

ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಹಾಸನ, ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಗೊಲ್ಲರಹಟ್ಟಿಗಳು ಇಂತಹ ಹತ್ತಾರು ಮೌಢ್ಯಗಳಿಗೆ ಕಟ್ಟುಬಿದ್ದಿವೆ. ಇಡೀ ಊರಿಗೆ ಕಳ್ಳೆ ಸಾಲು ಹಾಕಿ ಗಡಿಯನ್ನು ಗುರುತಿಸಲಾಗುತ್ತದೆ. ಮಾದಿಗ, ಹೊಲೆಯ ಸಮುದಾಯದವರು ಅಧಿಕಾರ
ಸ್ಥರಾಗಿದ್ದರೂ ಈ ಹಟ್ಟಿಗಳಿಗೆ ಪ್ರವೇಶ ಸಿಗುವುದಿಲ್ಲ. ದೈವಾಂಶ ಸಂಭೂತರೆಂದು ನಂಬಿರುವ ಜುಂಜಪ್ಪ, ಕ್ಯಾತಪ್ಪರ ಮೇಲಿನ ಭಕ್ತಿಯ ಮೇರೆಗೆ ಇಂತಹ ಸಂಪ್ರದಾಯ ಹುಟ್ಟಿಕೊಂಡಿವೆ ಎಂಬುದು ಯಾದವ ಸಮುದಾಯದ ವಿವರಣೆ.

‘ದೇವರು ಒಪ್ಪುವುದಿಲ್ಲ’ ಎಂಬ ಕಾರಣಕ್ಕೆ ಶೌಚಾಲಯ ನಿರ್ಮಾಣಕ್ಕೂ ಈ ಸಮುದಾಯ ಹಿಂದೇಟು ಹಾಕಿತ್ತು. ಮಾದಿಗ ಸಮುದಾಯದ ಜನ ಹಟ್ಟಿ ಪ್ರವೇಶಿಸಲು ಇದೊಂದು ಮಾರ್ಗವಾಗುತ್ತದೆ ಎಂಬ ನಂಬಿಕೆ ಗೊಲ್ಲರಲ್ಲಿತ್ತು. ಶೌಚಾಲಯ ಕಟ್ಟಿಸಿಕೊಳ್ಳುವಂತೆ ಅರಿವು ಮೂಡಿಸಲು ಹೋಗಿದ್ದ ಅಧಿಕಾರಿಗಳನ್ನು ಜನ ಹೆದರಿಸಿ ಕಳುಹಿಸಿದ ನಿದರ್ಶನಗಳು ಜಿಲ್ಲೆಯಲ್ಲಿವೆ. ಒತ್ತಡಕ್ಕೆ ಮಣಿದು ಕಟ್ಟಿಸಿಕೊಂಡ ಶೌಚಾಲಯಗಳನ್ನು ಇವರು ಬಳಸುತ್ತಿರಲಿಲ್ಲ.

ವಿದ್ಯುತ್‌ ಸಂಪರ್ಕ ಕಲ್ಪಿಸಲೂ ಹಟ್ಟಿಗಳಲ್ಲಿ ವಿರೋಧವಿತ್ತು. ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗೊಲ್ಲರಹಟ್ಟಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರಿ ಅಧಿಕಾರಿಗಳು ನಿರಂತರವಾಗಿ ಶ್ರಮಿಸಿದ್ದರು. ವಿದ್ಯುತ್‌ ತಂತಿಯ ಕೆಳಗೆ ದೇವರು ಹೋಗಬಾರದು ಎಂಬ ನಂಬಿಕೆ ಬಲವಾಗಿತ್ತು. ಆಧುನಿಕತೆಯ ಸೆಳೆತ ಹಾಗೂ ಅರಿವಿನ ಪರಿಣಾಮವಾಗಿ ಹಟ್ಟಿಗಳು ಇತ್ತೀಚಿನ ದಿನಗಳಲ್ಲಿ ವಿದ್ಯುತ್‌ ದೀಪದ ಬೆಳಕು ಕಂಡಿವೆ.

ಮುಟ್ಟು, ಹೆರಿಗೆ ಹಾಗೂ ಋತುಮತಿಯಾದ ಸಂದರ್ಭದಲ್ಲಿ ಮಹಿಳೆಯರು ಈಗಲೂ ಹಟ್ಟಿಯಿಂದ ಹೊರಗೆ ಇರುತ್ತಾರೆ. ಚಿತ್ರದುರ್ಗದ ‘ಸಂಸದರ ಆದರ್ಶ ಗ್ರಾಮ’ ಹೊಸದುರ್ಗ ತಾಲ್ಲೂಕಿನ ಗಂಗಸಮುದ್ರದಲ್ಲಿ ಮಹಿಳೆಯರು ಪ್ರತಿ ತಿಂಗಳು ಮೂರು ದಿನ ಹೊರಗೆ ಉಳಿಯುತ್ತಾರೆ.

‘ಸಮುದಾಯದ ಪರವಾಗಿ ಕ್ಷಮೆಯಾಚಿಸುವೆ’

‘ಯಾದವ ಸಮುದಾಯದ ಪ‍ರವಾಗಿ ಸಂಸದ ಎ.ನಾರಾಯಣಸ್ವಾಮಿ ಅವರಲ್ಲಿ ಕ್ಷಮೆಯಾಚಿಸುತ್ತೇನೆ. ಯಾರಿಗೂ ಹೀಗೆ ಪ್ರವೇಶ ನಿರ್ಬಂಧ ಹೇರಬಾರದು. ಇದು ಬೇಸರದ ಸಂಗತಿ. ರಾಜಕೀಯ ಹಿತಾಸಕ್ತಿಗೆ ಕೆಲವರು ಇಂಥ ಮೌಢ್ಯ ಪೋಷಿಸಿಕೊಂಡು ಬಂದಿದ್ದಾರೆ. ಗೊಲ್ಲರಿಗೆ ಶಿಕ್ಷಣ ಸಿಕ್ಕಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ಗೊಲ್ಲರಹಟ್ಟಿಗೆ ಸರ್ಕಾರ ಮೂಲಸೌಲಭ್ಯ ಕಲ್ಪಿಸಿ, ಶಿಕ್ಷಣ ಒದಗಿಸಬೇಕು’ ಎಂದು ಯಾದವ ಸಮುದಾಯದವರೂ ಆದ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಪ್ರತಿಕ್ರಿಯಿಸಿದರು.

ಮತ ಕೈಜಾರುವ ಭೀತಿ

ಗ್ರಾಮಸ್ಥರೇ ಆಹ್ವಾನಿಸಿದರೂ ಚಿತ್ರದುರ್ಗ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಹಟ್ಟಿ ಪ್ರವೇಶಿಸುತ್ತಿರಲಿಲ್ಲ. ಮತ ಕೈಜಾರುವ ಭೀತಿಯಿಂದ ಈ ನಿರ್ಬಂಧ ವಿರೋಧಿಸು
ತ್ತಿರಲಿಲ್ಲ. ಮ್ಯಾಸಬೇಡರ ಹಟ್ಟಿ ಹಾಗೂ ಗೊಲ್ಲರ ಹಟ್ಟಿಗಳಲ್ಲಿ ಸಾಮ್ಯತೆ ಇದೆ. ಇವೆರೆಡೂ ಬುಡಕಟ್ಟು ಸಮುದಾಯಗಳು. ಎರಡೂ ಹಟ್ಟಿಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶವಿಲ್ಲ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ರಾಷ್ಟ್ರೀಯ ಪಕ್ಷದ ಮುಖಂಡರೊಬ್ಬರು ಚಿತ್ರದುರ್ಗದಿಂದ 12 ಕಿ.ಮೀ ದೂರದ ಮ್ಯಾಸಬೇಡರ ಹಟ್ಟಿಗೆ ಮತಯಾಚನೆಗೆ ತೆರಳಿದ್ದರು. ಹಟ್ಟಿಯ ಬಾಗಿಲು ಬಳಿಯೇ ಕುಳಿತು ಕಾರ್ಯಕರ್ತರನ್ನು ಮಾತ್ರ ಊರೊಳಗೆ ಕಳುಹಿಸಿದ್ದರು. ಬಾಗಿಲು ಬಳಿ ಬಂದ ಗ್ರಾಮಸ್ಥರನ್ನು ಕೈಮುಗಿದು ಮತ ಕೇಳಿದರು. ಚುನಾವಣೆಯಲ್ಲಿ ಗೆದ್ದು ಸಮಾಜಕಲ್ಯಾಣ ಸಚಿವರಾದರೂ ಪರಿಸ್ಥಿತಿ ಬದಲಾಗಲಿಲ್ಲ.

ಪ್ರತಿಕ್ರಿಯಿಸಿ (+)