ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ

ಸೋಮವಾರ, ಮೇ 27, 2019
21 °C
ಹಾಸನ, ಮೈಸೂರು–ಕೊಡಗು, ಚಾಮರಾಜನಗರ ಶಾಂತಿಯುತ ಮತದಾನ

ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ

Published:
Updated:
Prajavani

ಮೈಸೂರು: ಮೈಸೂರು–ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಶಾಂತಿಯುತ ಮತದಾನವಾಗಿದೆ.

ಚಾಮರಾಜನಗರದ ಮತಗಟ್ಟೆಯೊಂದಕ್ಕೆ ನಿಯೋಜಿಸಿದ್ದ ಹೆಚ್ಚುವರಿ ಮತಗಟ್ಟೆ ಅಧಿಕಾರಿ ಎಸ್‌.ಶಾಂತಮೂರ್ತಿ (48) ಹೃದಯಾಘಾತದಿಂದ ಮೃತಪಟ್ಟರು. ಮತಯಂತ್ರದಲ್ಲಿ ದೋಷ ಕಂಡು ಬಂದಿದ್ದರಿಂದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮತಗಟ್ಟೆಯಲ್ಲಿ ಒಂದೂವರೆ ಗಂಟೆ ಕಾದು ಕುಳಿತರು.

ಕುಶಾಲನಗರ ಸಮೀಪದ ಶಿರಂಗಾಲ ಮತಗಟ್ಟೆ ಬಳಿ ಪ್ರಚಾರದಲ್ಲಿ ತೊಡಗಿದ್ದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಈ ಸಂದರ್ಭ ಸಿದ್ದಲಿಂಗಪ್ಪ ಎಂಬುವವರಿಗೆ ಕೈಗೆ ಪೆಟ್ಟು ಬಿದ್ದಿದೆ. ಕುಶಾಲನಗರದ ಮಹಿಳಾ ಸಮಾಜದ 164ನೇ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಕೆ.ಎಂ.ಅಪ್ಪಣ್ಣ ಅವರಿಗೆ ಪಾರ್ಶ್ವವಾಯು ಉಂಟಾಗಿದೆ.

ಮೈಸೂರು ನಗರ ಪ್ರದೇಶದಲ್ಲಿ ಬೆಳಿಗ್ಗೆ ಮತದಾನ ಮಂದಗತಿಯಲ್ಲಿ ಸಾಗಿತ್ತು. ಮೈಸೂರಿನ ಚಾಮರಾಜ, ನರಸಿಂಹರಾಜ, ಕೃಷ್ಣರಾಜ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ನಡೆದಿಲ್ಲ. ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಿರಿಯಾಪಟ್ಟಣ, ಹುಣಸೂರು, ಮಡಿಕೇರಿ, ವಿರಾಜಪೇಟೆ ವ್ಯಾಪ್ತಿಯಲ್ಲಿ ಶೇ 70 ದಾಟಿದೆ. ಯುವಕರಿಗಿಂತ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದು ಕಂಡುಬಂತು. ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಯಲ್ಲೂ ಉತ್ತಮ ಮತದಾನವಾಗಿದೆ.

ಇವಿಎಂ ಅದಲು–ಬದಲು: ವಿದ್ಯುನ್ಮಾನ ಮತಯಂತ್ರಗಳು ಅದಲು–ಬದಲಾಗಿದ್ದ ಕಾರಣ ಮದ್ದೂರು ತಾಲ್ಲೂಕು ಪಣ್ಣೆದೊಡ್ಡಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಎರಡೂವರೆ ಗಂಟೆ ಸ್ಥಗಿತಗೊಂಡಿತ್ತು. ಕ್ರಮಸಂಖ್ಯೆ 17ರಿಂದ 22ರ ವರೆಗಿನ ಅಭ್ಯರ್ಥಿಗಳ ಹೆಸರುಳ್ಳ ಮತಯಂತ್ರವನ್ನು ಮೊದಲು ಇಟ್ಟು, ಕ್ರಮಸಂಖ್ಯೆ 1ರಿಂದ 16ವ ರೆಗಿನ ಅಭ್ಯರ್ಥಿಗಳ ಹೆಸರುಳ್ಳ ಯಂತ್ರವನ್ನು ನಂತರ ಇಡಲಾಗಿತ್ತು. ಇದಕ್ಕೆ ಸುಮಲತಾ ಕಡೆಯ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !