ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸ್ಮರಣಶಕ್ತಿ ಮರುಕಳಿಸಿದ ಗೂಗಲ್ ಮ್ಯಾಪ್

*ಸ್ಮರಣೆ ಕಳೆದುಕೊಂಡು ವಿವಿಧ ರಾಜ್ಯ ಸುತ್ತಾಟ *ಸ್ಮರಣೆಯೊಂದಿಗೆ ಪುನ ಹುಟ್ಟೂರಿಗೆ ಬಂದ ವಿರುಪಾಕ್ಷಪ್ಪ
Last Updated 25 ಜನವರಿ 2020, 13:56 IST
ಅಕ್ಷರ ಗಾತ್ರ

ಚಿತ್ರದುರ್ಗ: ಸ್ಮರಣಶಕ್ತಿ ಕಳೆದುಕೊಂಡು ಹುಟ್ಟಿದ ಊರನ್ನೇ ಮರೆತು, ದೇಶದ ವಿವಿಧ ರಾಜ್ಯಗಳಲ್ಲಿ ಅಲೆದಾಡಿದ್ದ ವ್ಯಕ್ತಿಯೊಬ್ಬರಿಗೆ ಗೂಗಲ್‌ ಮ್ಯಾಪ್‌ ನೆನಪನ್ನು ಮರುಕಳಿಸಲು ಸಹಕಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಮೂರು ದಶಕಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಚಿತ್ರದುರ್ಗ ತಾಲ್ಲೂಕಿನ ಹಂಪನೂರು ಗ್ರಾಮದ ವಿರುಪಾಕ್ಷಪ್ಪ ಆಲಿಯಾಸ್ ಬಾಬು ಅವರು ಸಂಬಂಧಿಕರು, ಸ್ನೇಹಿತರು, ಹಿತೈಷಿಗಳು, ಗ್ರಾಮವನ್ನು ಮರೆತು ಹೋಗಿದ್ದರು. ಈಗ ಎಲ್ಲವೂ ನೆನಪಾಗಿರುವುದು ಗೂಗಲ್ ಮ್ಯಾಪ್‌ನಿಂದ ಎಂಬುದೇ ಅಚ್ಚರಿಗೆ ಕಾರಣವಾಗಿದೆ.

6 ತಿಂಗಳ ಹಿಂದೆಯಷ್ಟೇ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಇವರು, ವಿಳಾಸಗಳನ್ನು ಗೂಗಲ್‌ ಮ್ಯಾಪ್‌ನ‌ಲ್ಲಿ ತಡಕಾಡಿದ್ದಾರೆ. ಈ ವೇಳೆ ಚಿತ್ರದುರ್ಗ, ಭರಮಸಾಗರದ ಜತೆಗೆ ಸ್ವಗ್ರಾಮದ ಶ್ರೀರಂಗನಾಥ ಸ್ವಾಮಿ ದೇಗುಲ ಹೆಸರುಗಳು ಮ್ಯಾಪ್‌ನಲ್ಲಿ ಕಾಣಿಸಿಕೊಂಡಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರ ನೆನಪಿನ ಶಕ್ತಿ ಮರುಕಳಿಸಿದೆ.

ಗ್ರಾಮದಲ್ಲಿ ಓಡಾಡಿದ ಹಳೆಯ ನೆನಪುಗಳು ಮನನವಾದ ವಿಷಯವನ್ನು ವಿರುಪಾಕ್ಷಪ್ಪ ಮೊದಲು ಪತ್ನಿಗೆ ತಿಳಿಸಿದ್ದಾರೆ. ಕುಟುಂಬದವರ ಸಲಹೆ ಪಡೆದು ಊರಿಗೆ ಹೋಗಲು ನಿರ್ಧರಿಸಿ ವಾರದ ಹಿಂದೆಯಷ್ಟೇ ಗ್ರಾಮಕ್ಕೆ ಬಂದಿದ್ದಾರೆ.

ಗ್ರಾಮದ ಅನೇಕರು ಈತನನ್ನು ಗುರುತಿಸಿ ನೀವು ವಿರುಪಾಕ್ಷಪ್ಪ ಅಲ್ವಾ ಎಂದು ಕೇಳಿದ್ದಾರೆ. ಹೌದು ಎಂದಾಗ ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸಹೋದರ, ಸಹೋದರಿಯರನ್ನು ಕಂಡು ಪರಸ್ಪರ ಆಲಂಗಿಸಿಕೊಂಡು ಆನಂದದಲ್ಲಿ ತೇಲಾಡಿದ್ದಾರೆ. ಕಳೆದು ಹೋದ ವ್ಯಕ್ತಿ ಸಿಕ್ಕ ಹಿನ್ನಲೆಯಲ್ಲಿ ಕೆಲಕಾಲ ಗ್ರಾಮದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ.

ಊರು ಬಿಟ್ಟಿದ್ದು ಏಕೆ? 20ವರ್ಷವಿದ್ದಾಗ ಮುಂದೆ ಓದುವುದಿಲ್ಲ. ದಾವಣಗೆರೆಯಲ್ಲಿ ಬೀಡಾ ಅಂಗಡಿ ತೆರೆದು ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಸಹೋದರರ ಬಳಿ ಹೇಳಿ ಒಂದಿಷ್ಟು ಹಣ ಪಡೆದು ಹೋಗಿದ್ದಾರೆ. ಇಲ್ಲಿಗೆ ಬಂದ ನಂತರ 1990ರಲ್ಲಿ ರಾಮ ಜನ್ಮಭೂಮಿ ವಿವಾದ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ನಡೆದ ಕೋಮುಗಲಭೆ ನೋಡಿ ವಿರುಪಾಕ್ಷಪ್ಪ ಆಕಸ್ಮಿಕವಾಗಿ ಊರು ತೊರೆದಿದ್ದಾರೆ.

ಬೆಂಗಳೂರು, ಹುಬ್ಬಳ್ಳಿ, ಧಾರಾವಾಡ ನಂತರ ಮುಂಬೈಗೂ ಹೋಗಿದ್ದಾರೆ. ಕೊನೆಗೆ ಹೈದಾರಾಬಾದ್‌ನಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಇಲ್ಲಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ. ಅಪಘಾತ ಮಾಡಿದವರೇ ಚಿಕಿತ್ಸೆ ಕೊಡಿಸಿ, ಮಗಳನ್ನು ಧಾರೆ ಎರೆದು ಮನೆ ಅಳಿಯನ್ನನ್ನಾಗಿ ಮಾಡಿಕೊಂಡಿದ್ದಾರೆ.

ಕೆಲಸ ಕಾರ್ಯ ನಿಮಿತ್ತ ಬೆಂಗಳೂರಿಗೆ ಆಗಿಂದಾಗ್ಗೆ ಬರುತ್ತಿದ್ದ ಇವರು, ಗೂಗಲ್‌ ಮ್ಯಾಪ್‌ನಲ್ಲಿಯೇ ವಿಳಾಸ ಹುಡುಕುತ್ತಿದ್ದರು. ಕೊನೆಗೆ ಅದರ ಸಹಾಯದಿಂದಲೇ ತನ್ನ ಮೂಲ ಊರಿನ ದಾರಿಯನ್ನು ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT