ವಿರೋಧದ ನಡುವೆ ದೀಕ್ಷೆ; ಕುರುಬರ ಪ್ರತಿಭಟನೆ

7
ಕಾರಣಿಕ ಗೊರವಯ್ಯನ ಬದಲಾವಣೆ; ಮೈಲಾರದಲ್ಲಿ ಬಿಗುವಿನ ವಾತಾವರಣ

ವಿರೋಧದ ನಡುವೆ ದೀಕ್ಷೆ; ಕುರುಬರ ಪ್ರತಿಭಟನೆ

Published:
Updated:
Deccan Herald

ಹೂವಿನಹಡಗಲಿ: ಮೈಲಾರದಲ್ಲಿ ಕಾರಣಿಕ ನುಡಿಯುವ ಗೊರವಯ್ಯನನ್ನು ಗುರುವಾರ ದಿಢೀರ್‌ ಬದಲಿಸಿದ್ದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.

ಪ್ರತಿಭಟನಾಕಾರರು ಕಪಿಲಮುನಿ ಪೀಠಕ್ಕೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಒಳಕೋಣೆಗೆ ಹೋಗಿ ರಕ್ಷಣೆ ಪಡೆದರು. ಪೊಲೀಸರು ಗುಂಪು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಎರಡು ವರ್ಷದ ಹಿಂದೆ ಕಾರಣಿಕ ಗೊರವಯ್ಯನಾಗಿ ನೇಮಕವಾಗಿದ್ದ ರಾಮಣ್ಣನ ಬದಲಿಗೆ ಕಾರಣಿಕ ವಂಶಸ್ಥರಲ್ಲಿಯೇ ಒಬ್ಬರಾದ ಸಣ್ಣಪ್ಪನನ್ನು ನೇಮಿಸಲಾಗಿದೆ. ಗುರುವಾರ ಬೆಳಿಗ್ಗೆ ಕಪಿಲಮುನಿ ಪೀಠದ ಎದುರು ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಧಾರ್ಮಿಕ ವಿಧಿ ಪ್ರಕಾರ ಸಣ್ಣಪ್ಪನಿಗೆ ಗೊರವ ದೀಕ್ಷೆ ನೀಡಿದರು. ಅದನ್ನು ಕುರುಬ ಸಮಾಜದ ಮುಖಂಡರು ವಿರೋಧಿಸಿ, ರಾಮಣ್ಣನನ್ನೇ ಮುಂದುವರಿಸಲು ಪಟ್ಟು ಹಿಡಿದರು.

ಗಲಾಟೆ ನಡೆಯಬಹುದೆಂದು ಅರಿತ ಧರ್ಮಕರ್ತರು ನಿಗದಿತ ಸಮಯಕ್ಕಿಂತ ಮುಂಚೆಯೇ ಹೊಸ ಗೊರವಯ್ಯನಿಗೆ ದೀಕ್ಷೆ ನೀಡಿದರು. ಅದನ್ನು ವಿರೋಧಿಸಿ ದೇವಸ್ಥಾನ ಆವರಣದಲ್ಲಿ ಪ್ರತಿಭಟಿಸಿದ ಮುಖಂಡರು, ಧರ್ಮಕರ್ತರ ವಿರುದ್ಧ ಘೋಷಣೆ ಕೂಗಿದರು. ‘ಬರೀ ಗೊರವಯ್ಯನ ಬದಲಿಸಿದರೆ ಸಾಲದು ಸರ್ವಾಧಿಕಾರಿಯಂತೆ ವರ್ತಿಸುವ ಧರ್ಮಕರ್ತರನ್ನೂ ಬದಲಿಸಿ’ ಎಂದು ಆಗ್ರಹಿಸಿದರು.

‘ಕಾರಣಿಕದ ಗೊರವಯ್ಯ ಸೇರಿ ಬಾಬುದಾರರ ನೇಮಕಕ್ಕೆ ಕಪಿಲಮುನಿ ಪೀಠಕ್ಕೆ ಅಧಿಕಾರವಿದೆ. ರಾಮಣ್ಣ, ಪೀಠಕ್ಕೆ ವಿಧೇಯರಾಗಿ ನಡೆದುಕೊಳ್ಳದೇ ಕ್ಷೇತ್ರದ ಪರಂಪರೆಗೆ ಧಕ್ಕೆ ತಂದಿದ್ದಾರೆ. ಅವರನ್ನು ಬದಲಿಸಿ ಸಣ್ಣಪ್ಪನಿಗೆ ದೀಕ್ಷೆ ನೀಡಿದ್ದೇವೆ’ ಎಂದು ಒಡೆಯರ್ ಸಮರ್ಥಿಸಿಕೊಂಡರು.

‘ಈ ಹಿಂದೆ ಜಿಲ್ಲಾಡಳಿತವು ರಾಮಣ್ಣನ ತಾತ್ಕಾಲಿಕ ನೇಮಕಕ್ಕೆ ಒತ್ತಡ ಹೇರಿತ್ತು. ಜಾತ್ರೆಯಲ್ಲಿ ಗಲಾಟೆ ಆಗಬಾರದೆಂದು ಅದನ್ನು ಒಪ್ಪಿದ್ದೆವು. ನಮ್ಮ ಹಕ್ಕು ಜಿಲ್ಲಾಡಳಿತ ಮೊಟಕುಗೊಳಿಸಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದೆವು. ಈಗ ತೀರ್ಪು ನಮ್ಮ ಪರ ಬಂದಿದೆ. ಜಿಲ್ಲಾಧಿಕಾರಿಯ ಅಭಿಪ್ರಾಯದಂತೆ ಹೊಸ ಗೊರವಯ್ಯನನ್ನು ನೇಮಿಸಿದ್ದೇವೆ’ ಎಂದು ಒಡೆಯರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !