ಚಾಲ್ತಿಯಲ್ಲಿದೆ ಶಾಲೆಗಳ ವಿಲೀನ ಪ್ರಕ್ರಿಯೆ

7

ಚಾಲ್ತಿಯಲ್ಲಿದೆ ಶಾಲೆಗಳ ವಿಲೀನ ಪ್ರಕ್ರಿಯೆ

Published:
Updated:
Deccan Herald

ಬೆಂಗಳೂರು: ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದರೂ ಸರ್ಕಾರ ಇನ್ನೂ ಆ ಪ್ರಸ್ತಾವ ಕೈಬಿಟ್ಟಿಲ್ಲ. ಸದ್ದಿಲ್ಲದೆ ಅದಕ್ಕೆ ಬೇಕಾಗುವ ತಯಾರಿಗಳನ್ನು ಮಾಡುತ್ತಿದೆ.

2018–19ನೇ ಸಾಲಿನಲ್ಲಿ ಕಡಿಮೆ ದಾಖಲಾತಿಯಾಗಿರುವ ಹಾಗೂ ಒಂದು ಕಿ.ಮೀ ವ್ಯಾಪ್ತಿಯಲ್ಲಿನ ಸರ್ಕಾರಿ ಪ್ರಾಥಮಿಕ ಕನ್ನಡ, ಉರ್ದು ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ವಿವರಗಳನ್ನು ಇಲಾಖೆ ಸಂಗ್ರಹಿಸುತ್ತಿದೆ.

ಈ ಬಗ್ಗೆ ಎಲ್ಲಾ ಉಪನಿರ್ದೇಶಕರಿಗೆ ಜ್ಞಾಪನಪತ್ರ ಕಳುಹಿಸಿರುವ ಇಲಾಖೆ, ಒಂದು ಕಿ.ಮೀ ವ್ಯಾಪ್ತಿಯೊಳಗಿನ 30ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಪ್ರತಿ ಹಳ್ಳಿಗಳ ಸಮಗ್ರ ವಿವರ ಸಲ್ಲಿಸುವಂತೆ ಸೂಚಿಸಿದೆ.

ಶಾಲೆಗಳಲ್ಲಿ ಕನಿಷ್ಠ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಅನುಪಾತ 1:30 ಹಾಗೂ ಪ್ರತಿ ಶಾಲೆಗೆ ಕನಿಷ್ಠ ಇಬ್ಬರು ಶಿಕ್ಷಕರನ್ನು ಒದಗಿಸಬಹುದು ಎಂದು ಸರ್ಕಾರ ಹೇಳಿದ್ದು, ಅದಕ್ಕೆ ಅನುಗುಣವಾಗಿ ಪ್ರಸ್ತಾವ ನೀಡಬೇಕು ಎಂದೂ ಹೇಳಿದೆ.

ರಾಜ್ಯದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗಳು, ಅಲ್ಲಿರುವ ಶಿಕ್ಷಕರು, ಶೂನ್ಯ ದಾಖಲಾತಿಯ ಶಾಲೆಗಳು, 30 ಹಾಗೂ ಅದಕ್ಕಿಂತ ಕಡಿಮೆ ದಾಖಲಾತಿ ಇರುವ ಶಾಲೆಗಳು ಹಾಗೂ ಶಿಕ್ಷಕರ ವಿವರಗಳನ್ನು ಪರಿಶೀಲಿಸಿ ಉಪನಿರ್ದೇಶಕರು ಸಮಗ್ರ ವರದಿ ಸಿದ್ಧಪಡಿಸಬೇಕಿದೆ. ‘ನಮ್ಮ ಜಿಲ್ಲೆಯ ಎಲ್ಲಾ ಬಿಇಒಗಳಿಗೆ ಮಾಹಿತಿ ಕಳುಹಿಸಲು ಹೇಳಿದ್ದೇನೆ. ಅವೆಲ್ಲವನ್ನು ಒಟ್ಟು ಮಾಡಿ ಪ್ರಸ್ತಾವ ಕಳುಹಿಸಬೇಕಿದೆ’ ಎಂದು ಚಿಕ್ಕಬಳ್ಳಾಪುರ ಉಪನಿರ್ದೇಶಕರು ತಿಳಿಸಿದರು.

ಸರ್ಕಾರ ಪ್ರಕಟಿಸಿರುವ ಪಟ್ಟಿಯ ಪ್ರಕಾರ ಮುಖ್ಯಮಂತ್ರಿ ಕುಮಾರಸ್ವಾಮಿಯವರ ತವರೂರಾದ ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಶಾಲೆಗಳು ಶೂನ್ಯ ದಾಖಲಾತಿಯನ್ನು ಹೊಂದಿವೆ. ಅಲ್ಲದೆ 30ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳೂ ಇಲ್ಲೇ ಹೆಚ್ಚಾಗಿವೆ.

ವಿಲೀನ ಇಲ್ಲವೆಂದಿದ್ದ ಸರ್ಕಾರ: 

ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಲು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಕಡಿಮೆ ದಾಖಲಾತಿ ಹೊಂದಿರುವ 28 ಸಾವಿರ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಸಮೀಪದ 8,530 ಶಾಲೆಗಳಲ್ಲಿ ವಿಲೀನ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಶಿಕ್ಷಣ ತಜ್ಞರು, ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾದ ನಂತರ ಶಾಲೆಗಳನ್ನು ವಿಲೀನ ಮಾಡುವುದಿಲ್ಲ ಎಂದು ಮೌಖಿಕವಾಗಿ ತಿಳಿಸಿತ್ತು.

 

ರಾಜ್ಯದಲ್ಲಿರುವ ಒಟ್ಟು ಕಿರಿಯ ಪ್ರಾಥಮಿಕ ಶಾಲೆಗಳು –21,486

ಕಿರಿಯ ಪ್ರಾಥಮಿಕ ಶಾಲೆಗಳಲ್ಲಿರುವ ಒಟ್ಟು ಶಿಕ್ಷಕರು –41,786

––

ಶೂನ್ಯ ದಾಖಲಾತಿಯ ಶಾಲೆಗಳು –261

ಶೂನ್ಯ ದಾಖಲಾತಿ ಶಾಲೆಗಳಲ್ಲಿರುವ ಶಿಕ್ಷಕರ ಸಂಖ್ಯೆ – 229

–––

ಶೂನ್ಯ ದಾಖಲಾತಿ ಹೆಚ್ಚಿರುವ ಜಿಲ್ಲೆಗಳು

ಹಾಸನ– 98

ಉತ್ತರ ಕನ್ನಡ– 37

ಶಿವಮೊಗ್ಗ –24

ಚಿಕ್ಕಮಗಳೂರು – 28

––

1–10 ಮಕ್ಕಳಿರುವ ಶಾಲೆಗಳು – 3374

11–30 ಮಕ್ಕಳಿರುವ ಶಾಲೆಗಳು – 11,077

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !