ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳಿದ ಕೂಡಲೇ ಮನೆ: ರಾಜ್ಯದ ಯೋಜನೆ

ಪ್ರಧಾನಿ ನೀಡಿದ 2022ರ ಗಡುವು ಪೂರೈಸಲು ಚಿಂತನೆ
Last Updated 22 ನವೆಂಬರ್ 2019, 16:13 IST
ಅಕ್ಷರ ಗಾತ್ರ

ಬೆಂಗಳೂರು: 2022ರ ವೇಳೆಗೆ ಎಲ್ಲರಿಗೂ ಮನೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲು ಮುಂದಾಗಿರುವ ರಾಜ್ಯ ಸರ್ಕಾರ, ‘ಕೇಳಿದ ಕೂಡಲೇ ಮನೆ’ ಎಂಬ ಪರಿಕಲ್ಪನೆಗೆ ಜೀವ ತುಂಬುವ ಕೆಲಸ ಮಾಡಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆದ್ಯತೆಯ ಕ್ಷೇತ್ರಗಳಲ್ಲಿ ವಸತಿಯೂ ಒಂದು. ಕೇಳಿದ ಕೂಡಲೇ ಮನೆಯ ಕನಸು ಈಡೇರಬೇಕಾದರೆ ಅಧಿಕಾರಿಗಳು ಮನೆ ನೀಡುವ ಕೆಲಸವನ್ನು ತ್ವರಿತಗೊಳಿಸಬೇಕಿದ್ದು, ಮಧ್ಯವರ್ತಿಗಳನ್ನು ಬದಿಗೆ ಸರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ 25.36 ಲಕ್ಷ ಕುಟುಂಬಗಳಿಗೆ ಸ್ವಂತ ಸೂರಿಲ್ಲ ಅಥವಾ ಭೂಮಿ ಇಲ್ಲ. ನಗರ ಪ್ರದೇಶಗಳ 11 ಲಕ್ಷ ಕುಟುಂಬಗಳು ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ ಮನೆಗೆ ಬೇಡಿಕೆ ಇಟ್ಟಿವೆ.

ತ್ವರಿತ ಕೆಲಸ ಹೀಗೆ:ಮನೆಯಿಲ್ಲದವರು ಸಲ್ಲಿಸಿದ ಅರ್ಜಿಯನ್ನು ಗೃಹ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಜೋಡಿಸುವುದು. ಇಂತಹ ಸಾಲಕ್ಕೆ 12ರಿಂದ 15 ವರ್ಷಗಳ ವರೆಗೆ ಬಡ್ಡಿಯನ್ನು ಸರ್ಕಾರವೇ ನೀಡುತ್ತದೆ. (ಪ್ರಸ್ತುತ ಸರ್ಕಾರವೇ ಫಲಾನುಭವಿಗಳಿಗೆ ಹಣಕಾಸಿನ ನೆರವನ್ನು ನೀಡುತ್ತದೆ).

‘ಬೇಡಿಕೆಗೆ ತಕ್ಕಂತೆ ಮನೆ ಎಂದರೆ, ಯಾವುದೇ ವ್ಯಕ್ತಿ ಯಾವುದೇ ಹಂತದಲ್ಲಿ ಮನೆ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಬಹುದು’ ಎಂದು ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ನಿರತರಾಗಿರುವ ಅಧಿಕಾರಿಯೊಬ್ಬರು ಹೇಳಿದರು. ‘ಸರ್ಕಾರ ತಕ್ಷಣ ಈ ಅರ್ಜಿಯನ್ನು ಬ್ಯಾಂಕ್‌ಗೆ ಜೋಡಿಸುತ್ತದೆ. ಅರ್ಜಿ ಸಲ್ಲಿಸಿದವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಾಗಿದ್ದರೆ, ಬ್ಯಾಂಕ್‌ ಸಾಲದ ಕಂತನ್ನು ಸಹ ಸರ್ಕಾರವೇ ಪಾವತಿಸುತ್ತದೆ’ ಎಂದು ಅವರು ವಿವರಿಸಿದರು.

‘ಮನೆ ಇಲ್ಲದವರಿಗೆಲ್ಲ ಮನೆ ನೀಡಲು ₹25 ಸಾವಿರ ಕೋಟಿ ಅಗತ್ಯ ಇದೆ. ಸದ್ಯದ ರಾಜ್ಯದ ಹಣಕಾಸು ಸ್ಥಿತಿಗತಿ ನೋಡಿದಾಗ ಅಷ್ಟು ಮೊತ್ತವನ್ನು ಒದಗಿಸಲು ಸಾಧ್ಯವಿಲ್ಲ. ಸದ್ಯದ ವಸತಿ ಯೋಜನೆಗಳ ವೇಗವೂ ಈ ಗುರಿಯನ್ನು ಮಟ್ಟುವ ಸ್ಥಿತಿಯಲ್ಲಿ ಇಲ್ಲ’ ಎಂದು ಅವರು ಮಾಹಿತಿ ನೀಡಿದರು.

ಯೋಜನೆ ಕಾರ್ಯರೂಪಕ್ಕೆ ಬಂದರೆ ರಾಜೀವ್‌ ಗಾಂಧಿ ಗೃಹನಿರ್ಮಾಣ ನಿಗಮ (ಆರ್‌ಜಿಎಚ್‌ಸಿಎಲ್‌) ಇದರ ಹೊಣೆ ಹೊತ್ತುಕೊಳ್ಳಲಿದೆ. ‘ನಿಗಮಕ್ಕೆ 2011ರಿಂದೀಚೆಗೆ ಆಧಾರ್‌ ಜೋಡಣೆಯ ಮಾಹಿತಿ ಇದೆ. ಈಗಾಗಲೇ ಒಬ್ಬ ವ್ಯಕ್ತಿಯ ಬಳಿ ಮನೆ ಇದೆ ಎಂದಾದರೆ ಆಧಾರ್‌ ಜೋಡಣೆಯಿಂದ ಅದು ಗೊತ್ತಾಗುತ್ತದೆ. ಹೀಗಾಗಿ ಯೋಜನೆ ದುರ್ಬಳಕೆ ಆಗಲು ಸಾಧ್ಯವಿಲ್ಲ’ ಎಂದು ಅಧಿಕಾರಿ ವಿವರಿಸಿದರು.‌

ಮುಖ್ಯವಾಗಿ ಈ ಯೋಜನೆ ಇರುವುದು ಬಿಪಿಎಲ್‌ ಕುಟುಂಬಗಳಿಗೆ. ಕೆಲವು ಷರತ್ತುಗಳನ್ನು ಅಳವಡಿಸಿ ಎಪಿಎಲ್‌ ಕುಟುಂಬಗಳಿಗೂ ಇದು ಅನ್ವಯವಾಗಬಹುದು ಎಂದು ಹೇಳಲಾಗಿದೆ.

ಬ್ಯಾಂಕ್‌ ಸಾಲ ಬೇಡ, ಹಣಕಾಸಿನ ನೆರವೇ ಬೇಕು ಎಂದು ಬಯಸುವರಿಗೆ ಸಹ ಅನುಕೂಲ ಮಾಡಿಕೊಡಲು ಸಹ ಸರ್ಕಾರ ಮುಂದಾಗುವ ಸಾಧ್ಯತೆ ಇದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ₹ 2.7 ಲಕ್ಷದಿಂದ ₹ 3.5 ಲಕ್ಷದವರೆಗೆ ಹಣಕಾಸಿನ ನೆರವು ಸಿಗುತ್ತದೆ.

25.36 ಲಕ್ಷ -ಗ್ರಾಮೀಣ ಭಾಗದಲ್ಲಿ ಮನೆಗಾಗಿ ಕಾದಿರುವ ಕುಟುಂಬಗಳು


11 ಲಕ್ಷ -ನಗರ ಪ್ರದೇಶಗಳಲ್ಲಿ ಮನೆಗಾಗಿ ಕಾದಿರುವ ಕುಟುಂಬಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT