ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಕೇವಲ ಬೈ ಎಲೆಕ್ಷನ್ ಪಕ್ಷ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

* ಕರ್ನಾಟಕದಲ್ಲಿ ಬಿಜೆಪಿ ಸ್ಥಿತಿಗತಿ ಹೇಗಿದೆ? ಚುನಾವಣೆ ಗೆಲ್ಲುವ ಕುರಿತು ನಿಮ್ಮ ಲೆಕ್ಕಾಚಾರವೇನು?

ನಾವು ಕರ್ನಾಟಕದಲ್ಲಿ ಪ್ರಯಾಸವಿಲ್ಲದೆ ಗೆಲ್ಲುತ್ತೇವೆ. ರಾಜ್ಯದ ಜನ ಹಲವು ಕಾರಣಗಳಿಂದ ಕಾಂಗ್ರೆಸ್‌ ‍‍ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಮೋದಿ ಅವರ ಆಡಳಿತದಿಂದ ಆಕರ್ಷಿತರಾಗಿದ್ದಾರೆ. ಕಾಂಗ್ರೆಸ್‌ ಗೂನ್‌ ಗವರ್ನೆನ್ಸ್‌ (ಗೂಂಡಾ ಆಡಳಿತ) ನಡೆಸುತ್ತಿದೆ. ನಾವು ಗುಡ್‌ ಗವರ್ನೆನ್ಸ್‌ (ಒಳ್ಳೆಯ ಆಡಳಿತ) ನೀಡುತ್ತಿದ್ದೇವೆ. ಇದರಿಂದಾಗಿ ಜನ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ನೀವು ದೇಶದ ನಕ್ಷೆ ಗಮನಿಸಿದರೆ ಕಾಂಗ್ರೆಸ್‌ ಆಡಳಿತವಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕ. ಈ ಸಲ ಮತದಾರರು ಇಲ್ಲೂ ಈ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ 3,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದಿದ್ದ ಸಾಲವನ್ನು ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ಸರ್ಕಾರಗಳು ಮರುಪಾವತಿ ಮಾಡಿವೆ. ಸಿದ್ದರಾಮಯ್ಯ ಅವರು ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮರುಪಾವತಿ ಮಾಡಿಲ್ಲ. ಮುಖ್ಯಮಂತ್ರಿ ಸ್ವಂತ ಜಿಲ್ಲೆಯಲ್ಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಸನದ ಆಲೂಗೆಡ್ಡೆ ಬೆಳೆಗಾರರು ಮೂರು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ವರ್ಷ ರಾಜ್ಯ ಸರ್ಕಾರ ಪ್ರಮಾಣೀಕೃತ ಬಿತ್ತನೆ ಬೀಜ ವಿತರಿಸಿದೆ. ಅದೂ ಕೈಕೊಟ್ಟಿದೆ. ದಾವಣಗೆರೆಯ ಮೆಕ್ಕೆಜೋಳ ಬೆಳೆಗಾರರು ತೊಂದರೆ ಎದುರಿಸುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಮೆಕ್ಕೆಜೋಳದ ಬೆಲೆ ಕುಸಿದಿತ್ತು. ಆಗ ಕ್ವಿಂಟಲ್‌ಗೆ ₹ 1,550ರಂತೆ ಬೆಂಬಲ ಬೆಲೆ ನೀಡಿ ಸರ್ಕಾರ ಖರೀದಿಸಿತ್ತು. ಕೇಂದ್ರ ಸರ್ಕಾರ ಅಡಿಕೆಗೆ ಬೆಂಬಲ ಬೆಲೆಯನ್ನು ₹ 1,000 ಹೆಚ್ಚಿಸಿದೆ. ಕೃಷಿ ತಜ್ಞ ಸ್ವಾಮಿನಾಥನ್‌ ಸಮಿತಿ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊಡಬೇಕು. ವೈಜ್ಞಾನಿಕ ಬೆಲೆ ಎಂದರೆ, ಕೃಷಿಗೆ ತಗಲುವ ಒಟ್ಟು ವೆಚ್ಚದ ಜೊತೆಗೆ ಶೇ 50ರಷ್ಟು ಹೆಚ್ಚುವರಿಯಾಗಿ ಪಾವತಿಸುವುದು. ಯುಪಿಎ ಸರ್ಕಾರ ಸ್ವಾಮಿನಾಥನ್‌ ಸಮಿತಿ ವರದಿಯನ್ನು ಒಪ್ಪಿಕೊಳ್ಳಲಿಲ್ಲ. ಆದರೆ, ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸುತ್ತಿದೆ. ಈ ವರ್ಷದ ಮೇ ತಿಂಗಳಲ್ಲಿ ಮುಂಗಾರು ಬೆಳೆಗಳಿಗೆ ಬೆಲೆ ನಿಗದಿಯಾದ ಬಳಿಕ ಜನರಿಗೆ ವ್ಯತ್ಯಾಸ ಗೊತ್ತಾಗಲಿದೆ. ಅಷ್ಟೇ ಅಲ್ಲ, ಮಣ್ಣು ಪರೀಕ್ಷೆ ಕಾರ್ಡ್‌, ನೀರಾವರಿ ಯೋಜನೆಗಳು, ಫಸಲ್‌ ಬಿಮಾ ಯೋಜನೆಗಳ ಮೂಲಕ ರೈತರನ್ನು ಸಬಲೀಕರಣ ಮಾಡುವ ಉದ್ದೇಶ ನಮ್ಮ ಸರ್ಕಾರಕ್ಕಿದೆ.

ರಾಜ್ಯ ಸರ್ಕಾರ ಪ್ರತಿ ಹಂತದಲ್ಲೂ ರೈತರನ್ನು ವಂಚಿಸುತ್ತಿದೆ. ತುಮಕೂರು ರೈತರಿಗೆ ಹೇಮಾವತಿ ನದಿಯಿಂದ 24 ಟಿಎಂಸಿ ಅಡಿ ನೀರು ಹರಿಸುವ ಭರವಸೆ ನೀಡಿತ್ತು. 4 ಟಿಎಂಸಿ ಅಡಿ ನೀರು ಮಾತ್ರ ತಲುಪಿದೆ.

* ನಿಮ್ಮ ಪಕ್ಷವೂ ಮಹದಾಯಿ ವಿಷಯದಲ್ಲಿ ಹೀಗೇ ನಡೆದುಕೊಂಡಿದೆಯಲ್ಲವೇ?

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಆಸಕ್ತಿಯನ್ನು ಗೋವಾದ ಬಿಜೆಪಿ ಮುಖ್ಯಮಂತ್ರಿ ತೋರಿದ್ದರು. ಅದಕ್ಕೆ ಅಲ್ಲಿನ ಕಾಂಗ್ರೆಸ್‌ ಘಟಕ ಅಡ್ಡಿ ಮಾಡಿತು. ನ್ಯಾಯಮಂಡಳಿ ಹೊರಗೆ ಮಹದಾಯಿ ಸಮಸ್ಯೆ ಬಗೆಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿತು. ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರೂ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದವನ್ನು ನ್ಯಾಯಮಂಡಳಿಗೆ ಒಪ್ಪಿಸಿದ್ದು ಯಾರು; ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ. ಕರ್ನಾಟಕಕ್ಕೆ ನೀರು ಕೊಡುವುದಕ್ಕೆ ಯಾರು ವಿರೋಧ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.

* ಮಹದಾಯಿ ನದಿಯಿಂದ ಮುಂಬೈ– ಕರ್ನಾಟಕಕ್ಕೆ ಕುಡಿಯುವ ನೀರು ಕೊಡುವ ಆಸಕ್ತಿ ನಿಮ್ಮ ಪಕ್ಷಕ್ಕಿದ್ದರೆ ಕೇಂದ್ರ ಮಧ್ಯಸ್ಥಿಕೆ ವಹಿಸಬೇಕಿತ್ತು. ಅದನ್ನು ಬಿಟ್ಟು ಗೋವಾ ಮುಖ್ಯಮಂತ್ರಿ ಮನೋಹರ ಪರ್ರೀಕರ್ ಅವರು ಯಡಿಯೂರಪ್ಪಗೆ ಪತ್ರ ಬರೆಯುವ ಅಗತ್ಯವೇನಿತ್ತು?

ಮಹದಾಯಿ ನದಿಯಿಂದ ಮುಂಬೈ– ಕರ್ನಾಟಕ ಭಾಗಕ್ಕೆ ಕುಡಿಯುವ ನೀರು ಬಿಡುಗಡೆ ಮಾಡುವಂತೆ ಕರ್ನಾಟಕದ ಮುಖ್ಯಮಂತ್ರಿ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದಿರಲಿಲ್ಲ. ಪತ್ರ ಬರೆದಿದ್ದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ. ಈ ಕಾರಣಕ್ಕೆ ಪರ್ರೀಕರ್‌ ಅವರು ಯಡಿಯೂರಪ್ಪ ಅವರಿಗೆ ಪತ್ರ ಬರೆದರು. ಅದರಲ್ಲಿ ತಪ್ಪೇನಿದೆ?

* ಕರ್ನಾಟಕಕ್ಕೆ ನಿಗದಿಪಡಿಸಿರುವ ಮಿಷನ್‌–150 ಗುರಿಯನ್ನು ಹೇಗೆ ತಲುಪುವಿರಿ?

2014ರಲ್ಲಿ ಮೋದಿ ಪ್ರಧಾನಿಯಾದರು. ಆಗ ನಮ್ಮ ಕೈಯಲ್ಲಿ ಒಂಬತ್ತು ರಾಜ್ಯಗಳಿದ್ದವು. ಈಗ 21 ರಾಜ್ಯಗಳಿವೆ. ತ್ರಿಪುರಾ, ನಾಗಾಲ್ಯಾಂಡ್‌ ಚುನಾವಣೆಯಲ್ಲೂ ನಾವು ಗೆದ್ದಿದ್ದೇವೆ. ಮೇಘಾಲಯ ನಮ್ಮ ತೆಕ್ಕೆಗೆ ಬಂದಿದೆ. ಶೇ 67ರಷ್ಟು ಜನ ಬಿಜೆಪಿ ಆಡಳಿತಕ್ಕೆ ಒಳಪಟ್ಟಿದ್ದಾರೆ. ಇಷ್ಟೊಂದು ಜನ ನಮ್ಮ ಪಕ್ಷವನ್ನು ಇಷ್ಟಪಡುತ್ತಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್‌ ಸ್ಥಿತಿ ಹೇಗಿದೆ ನೋಡಿ. ಕರ್ನಾಟಕದಲ್ಲಿ ಅದು ಸೋತರೆ ಉಳಿಯುವುದು ಪುದುಚೇರಿ ಮತ್ತು ಪಂಜಾಬ್‌ಗಳಲ್ಲಿ ಮಾತ್ರ. ನಾವು ಜನರ ಜೊತೆಗಿದ್ದೇವೆ. ಜನರಿಗಾಗಿ ಇದ್ದೇವೆ.

* ಹಾಗಾದರೆ, ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಸ್ವಂತ ರಾಜ್ಯ ಗುಜರಾತಿನಲ್ಲಿ ಏಕೆ 150ರ ಗಡಿ ತಲುಪಲು ಸಾಧ್ಯವಾಗಲಿಲ್ಲ?

ಕಾಂಗ್ರೆಸ್‌ ರಾಜಕೀಯಕ್ಕಾಗಿ ಜನರನ್ನು ಜಾತಿ, ಧರ್ಮದ ಆಧಾರದಲ್ಲಿ ಒಡೆಯುತ್ತಿದೆ. ಮಣಿಪುರದಲ್ಲಿ 50 ವರ್ಷದಿಂದ ಶಾಂತಿ ನೆಲೆಸಿರಲಿಲ್ಲ. ನಾಗಾ, ಮೈತೀಸ್ ಮತ್ತು ಕುಕ್ಕಿಗಳು ಕಾದಾಡುತ್ತಿದ್ದರು. ಒಂದು ವರ್ಷದಿಂದ ಅಲ್ಲಿ ಪರಿಸ್ಥಿತಿ ತಿಳಿಯಾಗಿದೆ. ಭಯೋತ್ಪಾದನೆ ಇಲ್ಲದಂತಾಗಿದೆ. ಎಲ್ಲೆಡೆ ನಾವು ಜನರನ್ನು ಒಗ್ಗೂಡಿಸುತ್ತಿದ್ದೇವೆ. ಜೀವನಮಟ್ಟ ಸುಧಾರಿಸುತ್ತಿದ್ದೇವೆ.

ಗುಜರಾತಿನಲ್ಲೂ ನಾವು ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ಉತ್ತರ ಪ್ರದೇಶದ 400 ಕ್ಷೇತ್ರಗಳ ಪೈಕಿ 325ರಲ್ಲಿ ಗೆದ್ದಿದ್ದೇವೆ. ಉತ್ತರಾಖಂಡದಲ್ಲೂ 3/4ರಷ್ಟು ಸ್ಥಾನಗಳನ್ನು ಪಡೆದಿದ್ದೇವೆ. ನೀವು ಅದನ್ನೆಲ್ಲಾ ಮರೆತು ಮಾತನಾಡುತ್ತಿದ್ದೀರಿ.

* 2014ರ ಬಳಿಕ ನಡೆದ ಅನೇಕ ಚುನಾವಣೆಗಳಲ್ಲಿ ನೀವು ಸೋತಿದ್ದೀರಿ? ಕರ್ನಾಟಕ, ರಾಜಸ್ಥಾನದ ಉಪ ಚುನಾವಣೆಗಳಲ್ಲೂ ನೀವು ಸೋತಿದ್ದೀರಿ?

ನಮಗೂ ಕಾಂಗ್ರೆಸ್‌ಗೂ ಇರುವುದು ಅದೇ ವ್ಯತ್ಯಾಸ. ನಮ್ಮದು ಪಾರ್ಟಿ ಆಫ್‌ ಮೇನ್‌ ಎಲೆಕ್ಷನ್ಸ್‌... ಅವರದು ಪಾರ್ಟಿ ಆಫ್ ಬೈ ಎಲೆಕ್ಷನ್ಸ್‌... ನಾವು ಮುಖ್ಯ ಚುನಾವಣೆಗಳಲ್ಲಿ ಗೆಲ್ಲುತ್ತೇವೆ. ಅವರು ಉಪ ಚುನಾವಣೆಗಳಲ್ಲಿ ಗೆಲ್ಲುತ್ತಾರೆ. ಗುಜರಾತಿನಲ್ಲೂ ನಮಗೆ ಶೇ 50ರಷ್ಟು ಮತಗಳು ದೊರೆತಿವೆ. ಕಾಂಗ್ರೆಸ್‌ಗೆ ಇಷ್ಟೊಂದು ಮತಗಳು ಯಾವಾಗಲೂ ಸಿಕ್ಕಿಲ್ಲ. ನಮ್ಮ ನಡುವೆ ಶೇ 10ರಷ್ಟು ಮತಗಳ ಅಂತರವಿದೆ.
ಕಾಂಗ್ರೆಸ್‌ ಜೊತೆಗಿದ್ದ ಬಡವರೀಗ ಬಿಜೆಪಿ, ಮೋದಿ ಅವರತ್ತ ವಾಲಿದ್ದಾರೆ. ನಮ್ಮ ಕಾಂಗ್ರೆಸ್‌ಮುಕ್ತ ಭಾರತ ಹೋರಾಟ ಒಂದು ಪಕ್ಷದ ವಿರುದ್ಧ ಅಲ್ಲ. ಒಂದು ಸಂಸ್ಕೃತಿ ವಿರುದ್ಧ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳ ಸಂಸ್ಕೃತಿ ಒಂದೇ. ಕುಟುಂಬ ರಾಜಕಾರಣ, ಹಣ ಮತ್ತು ಜಾತಿ ಬಲದ ಮೇಲೆ ಅವು ರಾಜಕಾರಣ ಮಾಡುತ್ತಿವೆ.

* ರಾಜ್ಯ ವಿಧಾನಸಭೆ ಚುನಾವಣೆ ಜಾತ್ಯತೀತವಾದ ಹಾಗೂ ಕೋಮುವಾದದ ನಡುವಣ ಸಂಘರ್ಷ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನೀವು ಇದನ್ನು ಒಪ್ಪುವಿರಾ?

ನಮ್ಮದು ಹುಸಿ ಜಾತ್ಯತೀತವಾದ, ಗೂಂಡಾ ಆಡಳಿತ, ಆರಾಜಕತೆ ವಿರುದ್ಧದ ಹೋರಾಟ... ಬಡವರು, ರೈತರು, ಜನಸಾಮಾನ್ಯರು ಹಾಗೂ ಅಭಿವೃದ್ಧಿ ಪರವಾದ ಹೋರಾಟ... ಮೊದಲೇ ಹೇಳಿರುವಂತೆ ನಮ್ಮದು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಸಿದ್ಧಾಂತ.

* ರಾಜ್ಯದಲ್ಲಿ ನಿಮ್ಮ ಪಕ್ಷ ಅತ್ಯಂತ ದುರ್ಬಲವಾಗಿದೆ. ಗುಂಪುಗಾರಿಕೆ, ಒಳಜಗಳವಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಬಣಗಳಿವೆ. ಶೆಟ್ಟರ್‌ ಮತ್ತಿತರ ಹಿರಿಯ ನಾಯಕರು ಯಡಿಯೂರಪ್ಪನವರ ಕಾರ್ಯವೈಖರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತಿದೆ...

ಬಿಜೆಪಿಯೊಳಗೆ ಸಮಸ್ಯೆಯಿದೆ ಎನ್ನುವುದು ನಿಮ್ಮ (ಮಾಧ್ಯಮಗಳ) ಸೃಷ್ಟಿ. ನಾವು ಒಟ್ಟಾಗಿದ್ದೇವೆ. ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಯಾವುದೇ ಗುಂಪುಗಾರಿಕೆ, ಒಳಜಗಳ ಇಲ್ಲ. ಅವೆಲ್ಲವೂ ಸುಳ್ಳು.

* ನಿಮ್ಮ ಪಕ್ಷದ ಕೆಲವು ನಾಯಕರು ಎರಡು ದಿನಗಳ ಹಿಂದೆ, ವಿಧಾನಸಭೆ ಅಭ್ಯರ್ಥಿಗಳ ಹೆಸರನ್ನು ಯಡಿಯೂರಪ್ಪ ಪ್ರಕಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲಾ?

ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಬಿಜೆ‍ಪಿ ರಾಜ್ಯ ಸಮಿತಿ ಶಿಫಾರಸು ಮಾಡುತ್ತದೆ. ನಮ್ಮ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಇದರಲ್ಲಿ ಯಾವ ಗೊಂದಲವೂ ಇಲ್ಲ.

* ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದೀರಿ. ಜೈಲಿಗೆ ಹೋಗಿ ಬಂದ ನಿಮ್ಮ ಪಕ್ಷದ ನಾಯಕರನ್ನು ಪಕ್ಕದಲ್ಲಿ ಕೂರಿಸಿಕೊಂಡು ಆರೋಪ ಮಾಡಲು ನಿಮಗೇನು ನೈತಿಕತೆ ಇದೆ?

ಕರ್ನಾಟಕದಲ್ಲಿ ಮಾಫಿಯಾ ಆಡಳಿತವಿದೆ. ಯಡಿಯೂರಪ್ಪನವರ ಆಡಳಿತದಲ್ಲಿ ಟ್ರಕ್‌ ಮರಳಿಗೆ ₹ 4,000 ಇತ್ತು. ಈಗ ₹ 40,000 ಇದೆ. ಇದು ಏನು ಹೇಳುತ್ತದೆ? ಇದೊಂದು ಹಗರಣಗಳ ಸರ್ಕಾರ ಎನ್ನುವುದು ಕಣ್ಣಿಗೆ ಕಾಣುವುದಿಲ್ಲವೇ? ನಮ್ಮ ನಾಯಕರ ವಿರುದ್ಧದ ಆರೋಪಗಳು ಆಧಾರರಹಿತವಾದವು ಎಂದು ಕೋರ್ಟ್‌ಗಳೇ ಹೇಳಿವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿವೆ. ಅವರು ಜಾಮೀನು ಪಡೆದು ಹೊರಗಿದ್ದಾರೆ. ಅವರಿಗಿನ್ನೂ ಕ್ಲೀನ್‌ ಚಿಟ್‌ ಸಿಕ್ಕಿಲ್ಲ.

* ನೀವು ಕರ್ನಾಟಕದಿಂದ ರಾಜ್ಯಸಭೆ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದೀರಾ?

ನನ್ನ ರಾಜ್ಯಸಭೆ ಸದಸ್ಯತ್ವದ ಅವಧಿ ಮುಗಿಯುತ್ತಿದೆ. ಆದರೆ, ಟಿಕೆಟ್‌ ಕೇಳುವುದು ನಮ್ಮ ಸಂಸ್ಕೃತಿಯಲ್ಲ. ಈ ವಿಷಯದಲ್ಲಿ ಪಕ್ಷವೇ ತೀರ್ಮಾನ ಕೈಗೊಳ್ಳಲಿದೆ.
ಸದ್ಯಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ಹೊಣೆಗಾರಿಕೆ ಕೊಡಲಾಗಿದೆ. ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇನೆ.

* ಯಾವುದೇ ಪಕ್ಷಕ್ಕೂ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಸಿಗದೆ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದರೆ ಜೆಡಿಎಸ್‌ ಬೆಂಬಲ ಕೇಳುವಿರಾ?

ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬರುವ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT