ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿಗೃಹ ಇಲಿ, ಹೆಗ್ಗಣ ಬೀಡು!

ಬೆಂಗಾಡಾಗುತ್ತಿದೆ ಕೆಮ್ಮಣ್ಣಗುಂಡಿಯ ರಮಣೀಯ ‘ಕೃಷ್ಣರಾಜ ಗಿರಿಧಾಮ’
Last Updated 17 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕೃಷ್ಣರಾಜೇಂದ್ರ ಗಿರಿಧಾಮ (ಕೆಮ್ಮಣ್ಣಗುಂಡಿ) ಬೆಂಗಾಡಾಗಿದೆ. ಇಲ್ಲಿನ ಅತಿಥಿಗೃಹಗಳಿಗೆ ಬಂದು ಸೇರುತ್ತಿರುವ ಹೆಚ್ಚಿನ ಅತಿಥಿಗಳೆಂದರೆ ಹಾವು, ಇಲಿ, ಹೆಗ್ಗಣಗಳು!

ಹೌದು, ಕೆಮ್ಮಣ್ಣಗುಂಡಿ ಗಿರಿಧಾಮಕ್ಕೆ ರಾಜ್ಯದ ಯಾವುದೇ ಭಾಗದಿಂದ ಸರ್ಕಾರಿ ಅಥವಾ ಖಾಸಗಿ ಬಸ್ಸುಗಳ ಸಂಚಾರವಿಲ್ಲ ಬೀರೂರಿನಿಂದ ಕೆಮ್ಮಣ್ಣುಗುಂಡಿಗೆ ಹೋಗುವ ರಸ್ತೆಯೂ ಬಹುತೇಕ ಹಾಳಾಗಿ ಹೋಗಿದೆ. ಗಿರಿಧಾಮದಲ್ಲಿ 24x7 ವಿದ್ಯುತ್‌ ಪೂರೈಕೆ ಖಾತರಿ ಇಲ್ಲ. ಪ್ರವಾಸಿಗರು ಬಂದರಷ್ಟೇ ಕ್ಯಾಂಟೀನ್‌ ತೆರೆಯುತ್ತದೆ. ಅಲ್ಲಿ ಕೆಲಸ ಮಾಡುವ ಬೆರಳೆಣಿಕೆ ಸಿಬ್ಬಂದಿ ಬಿಟ್ಟರೆ ಪ್ರವಾಸಿಗರನ್ನು ಕಾಣುವುದೇ ಅಪರೂಪ.

ಇವೆಲ್ಲದರ ಪರಿಣಾಮ ಗಿರಿ ಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಈಗಾಗಲೇ ಬೇಸಿಗೆ ಶುರುವಾಗಿದೆ. ಶನಿವಾರ ಅಥವಾ ಭಾನುವಾರದಂದು ಅಲ್ಪ ಸಂಖ್ಯೆಯಲ್ಲಿ ಬರುತ್ತಾರೆ. ಉಳಿದ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ವಿರಳ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಕರ್ನಾಟಕದ ಅತ್ಯಂತ ಹಳೆಯ ಎರಡು ಗಿರಿಧಾಮಗಳೆಂದರೆ ಕೆಮ್ಮಣ್ಣಗುಂಡಿ ಮತ್ತು ನಂದಿಬೆಟ್ಟ. ಕೆಮ್ಮಣ್ಣಗುಂಡಿಯನ್ನು ಗಿರಿಧಾಮವಾಗಿ ಮಾಡಿದ್ದು, ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌. ಅವರು ಬೇಸಿಗೆಯಲ್ಲಿ ಅಲ್ಲಿಗೆ ಬಂದು ಇಳಿದುಕೊಳ್ಳುತ್ತಿದ್ದರು. ಇದು ಅವರ ಖಾಸಗಿ ಬೇಸಿಗೆ ಗಿರಿಧಾಮವಾಗಿತ್ತು. ಈ ಕಾರಣಕ್ಕೆ ಕೃಷ್ಣರಾಜೇಂದ್ರ ಒಡೆ
ಯರ್‌ ಹೆಸರನ್ನೇ ಇಡಲಾಗಿದೆ. ಅವರ ಕಾಲದಲ್ಲೇ ಗಿರಿಧಾಮದ ಉಸ್ತುವಾರಿಯನ್ನು ತೋಟಗಾರಿಕೆ ಇಲಾಖೆ ನೀಡಲಾಗಿತ್ತು. ಆ ಬಳಿಕವೂ ತೋಟಗಾರಿಕೆ ಇಲಾಖೆಯೇ ಉಸ್ತುವಾರಿ ನೋಡಿಕೊಳ್ಳುತ್ತಾ ಬಂದಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಹಾವು, ಚೇಳುಗಳಿಗೆ ಮನೆ: ಗಿರಿಧಾಮದಲ್ಲಿ ಮುಖ್ಯವಾಗಿ ‘ರಾಜಭವನ’ ಮತ್ತು ‘ದತ್ತಾತ್ರೇಯ’ ಎಂಬ ಎರಡು ಪ್ರಮುಖ ಅತಿಥಿಗೃಹಗಳಿವೆ. ಅಲ್ಲದೆ, ಕಡಿಮೆ ಶುಲ್ಕದ ಅತಿಥಿ ಗೃಹಗಳೂ ಸಾಕಷ್ಟು ಇವೆ. ರಾಜಭವನ ಮತ್ತು ದತ್ತಾತ್ರೇಯ ಅತಿಥಿಗೃಹಗಳ ನಿರ್ವಹಣೆ ಚೆನ್ನಾಗಿಯೇ ಇದೆ. ಆದರೆ, ಉಳಿದ ಅತಿಥಿಗೃಹಗಳಿಗೆ ನಿರ್ವಹಣೆಗೆ ಅಗತ್ಯವಿರುವಷ್ಟು ಸಿಬ್ಬಂದಿ ಇಲ್ಲ.

2011 ರಿಂದ 2013 ರ ಅವಧಿಯಲ್ಲಿ ಪ್ರವಾಸೋದ್ಯಮ ಇಲಾಖೆ ಇಲ್ಲಿನ ಅತಿಥಿ ಗೃಹಗಳ ನವೀಕರಣ ಮಾಡಿದೆ. ಆದರೆ, ಇಲ್ಲಿನ ಭಾರಿ ಮಳೆ ಮತ್ತು ಹಿಮದ ವಾತಾವರಣಕ್ಕೆ ಹೊಂದಿಕೊಳ್ಳದ ನಿರ್ಮಾಣ ಸಾಮಗ್ರಿಗಳನ್ನು ಬಳಸಿದ ಕಾರಣ, ಅತಿಥಿಗೃಹಗಳಿಗೆ ಬಳಸಿರುವ ವುಡನ್ ಪಾಲಿಮರ್‌ ಕಿತ್ತು ಹೋಗಿದ್ದು, ಹಾವು, ಚೇಳು, ಇಲಿ– ಹೆಗ್ಗಣಗಳು ಆರಾಮವಾಗಿ ಒಳ ಬರುತ್ತಿವೆ ಎನ್ನುತ್ತಾರೆ ಸ್ಥಳೀಯರು.

ಇಲ್ಲಿನ ಐಷಾರಾಮಿ ಅತಿಥಿಗೃಹ ಎಂದೇ ಪರಿಗಣಿಸಲಾಗುವ ರಾಜ ಭವನದ ಕೊಠಡಿಗಳ ಸೀಲಿಂಗ್‌ ಕೂಡಾ ಕಿತ್ತು ಹೋಗಿವೆ. ಹೀಗಾಗಿ ಮಳೆಗಾಲದಲ್ಲಿ ಇಡೀ ಕಟ್ಟಡವೇ ತೇವಗೊಳ್ಳುತ್ತದೆ. ಕೊಠಡಿಗಳ ಒಳಗೆ ನೀರು ಹನಿಯುತ್ತದೆ. ಹವಾ ನಿಯಂತ್ರಿತ ವ್ಯವಸ್ಥೆ ಆಗಾಗ್ಗೆ ಶಾರ್ಟ್‌ ಸರ್ಕ್ಯೂಟ್‌ಗೂ ಒಳಗಾಗುತ್ತದೆ. ಬಹುತೇಕ ಅತಿಥಿ ಗೃಹಗಳಿಗೆ ಕಲ್ಪಿಸಿರುವ ವಿದ್ಯುತ್‌, ನೀರಿನ ಸಂಪರ್ಕದ ಪ್ಲಂಬಿಂಗ್‌ ವ್ಯವಸ್ಥೆ ಅತ್ಯಂತ ಕಳಪೆ. ನೀರಿನ ಸಪ್ಲೈ ಲೈನ್‌ ತೀರಾ ಅವ್ಯವಸ್ಥೆಯಿಂದ ಕೂಡಿರುವುದು ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಣ್ಣಿಗೆ ರಾಚುತ್ತದೆ.

ಅಧಿಕಾರಿಗಳು ಹೇಳುವುದೇನು?: ಹಿಂದೆ ಅಭಿವೃದ್ಧಿ ಆಯುಕ್ತರಾಗಿದ್ದ ಈಗಿನ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರು ಕೆಮ್ಮಣ್ಣಗುಂಡಿಯ ಸಮಗ್ರ ಅಭಿವೃದ್ಧಿಗೆ ₹ 3 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದರು. ಪ್ರವಾಸಿಗರ ಆಕರ್ಷಣೆಗಾಗಿ ಕೇಬಲ್‌ ಕಾರ್‌ ವ್ಯವಸ್ಥೆ ಪುನರಾರಂಭಿಸಲಾಗುವುದು ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಇವೆರಡೂ ಕಾರ್ಯಗತಗೊಂಡಿದ್ದರೆ ಕೆಮ್ಮಣ್ಣಗುಂಡಿ ಸ್ಥಿತಿಗತಿ ಬೇರೆಯದೇ ರೀತಿ ಆಗಿರುತ್ತಿತ್ತು ಎಂದು ವಿಶೇಷಾಧಿಕಾರಿ ಯೋಗಾನಂದ ತಿಳಿಸಿದರು.

ಗಿರಿಧಾಮವನ್ನು ಅಭಿವೃದ್ಧಿಪಡಿಸಿದರೆ ಕರ್ನಾಟಕದ ಸ್ವಿಜರ್‌ಲ್ಯಾಂಡ್‌ ಆಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಅಚ್ಚರಿ ಇಲ್ಲ ಎಂಬುದು ಅವರ ಖಚಿತ ನಂಬಿಕೆ. 35 ಎಕರೆ ಗಿರಿಧಾಮಕ್ಕೆ ಮಂಜೂರಾ ಗಿರುವ ತೋಟಗಾರರ ಹುದ್ದೆಗಳು 18. ಆದರೆ, ಈಗ ಇರುವುದು ಇಬ್ಬರು ಮಾತ್ರ. ಒಬ್ಬರು ಸದ್ಯದಲ್ಲೇ ನಿವೃತ್ತಿ ಹೊಂದಿದರೆ, ಒಬ್ಬ ತೋಟಗಾರ ಮಾತ್ರ ಉಳಿಯುತ್ತಾನೆ. ಅಲ್ಲದೆ, 5 ಎಕರೆ ರಾಕ್‌ ಗಾರ್ಡನ್‌, 9.50 ಎಕರೆ ಆಲೂಗಡ್ಡೆ ಬೀಜೋತ್ಪಾದನಾ ಕೇಂದ್ರವೂ ಇದೆ. ಇಲ್ಲಿ ಮರ ಸಂಬಾರ ಉದ್ಯಾನ ಮಾಡುವ ಯೋಜನೆ ಇದೆ. ಆದರೆ, ಕೆಲಸಗಾರರು ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಯೋಗಾನಂದ.

ಆಗಬೇಕಾಗಿದ್ದು ಏನು?

*ಈ ಪ್ರವಾಸಿ ತಾಣಕ್ಕೆ ಬೆಂಗಳೂರು ಮತ್ತು ಇತರ ಪ್ರಮುಖ ಸ್ಥಳಗಳಿಂದ ಕೆಎಸ್ಸಾರ್ಟಿಸಿ ಬಸ್ಸುಗಳ ವ್ಯವಸ್ಥೆ

* ಬೀರೂರಿನಿಂದ ಲಿಂಗದಹಳ್ಳಿ ಮಾರ್ಗವಾಗಿ ಕೆಮ್ಮಣ್ಣಗುಂಡಿ ತಲುಪುವ ರಸ್ತೆಯನ್ನು ಸರಿಪಡಿಸಬೇಕು

* ಕೆಮ್ಮಣ್ಣಗುಂಡಿಯಿಂದ ದತ್ತಪೀಠಕ್ಕೆ ಹೋಗುವ ರಸ್ತೆಯನ್ನು ಸರಿಪಡಿಸಬೇಕು.

* 'ನಿರಂತರ ಜ್ಯೋತಿ’ ವ್ಯವಸ್ಥೆಯಡಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸಬೇಕು.

* ಘಟ್ಟ ಪ್ರದೇಶದಲ್ಲಿ ತಿರುವುಗಳು ಅಪಾಯಕಾರಿಯಾಗಿದ್ದು, ಮೆಟಲ್‌ ಸ್ಟ್ರಿಪ್‌ ಬ್ಯಾರಿಕೇಡ್‌ಗಳನ್ನು ಅಳವಡಿಸಿದರೆ, ವಾಹನಗಳಿಗೆ ಸುರಕ್ಷತೆ ಸಿಗುತ್ತದೆ.

* ಗಿರಿಧಾಮದ ವ್ಯಾಪ್ತಿಗೆ ಬೇಲಿಯನ್ನು ಹಾಕಬೇಕು. ಇದರಿಂದ ಪ್ರವಾಸಿಗರಿಗೆ ಹೆಚ್ಚಿನ ಸುರಕ್ಷತೆ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT