ಸರ್ಕಾರಿ ಭೂಮಿ ಭೂಗಳ್ಳರಲ್ಲಿ: ಸಿಎಜಿ ವರದಿ

7
ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಿದ್ದು 482 ಎಕರೆ ಮಾತ್ರ

ಸರ್ಕಾರಿ ಭೂಮಿ ಭೂಗಳ್ಳರಲ್ಲಿ: ಸಿಎಜಿ ವರದಿ

Published:
Updated:

ಬೆಳಗಾವಿ: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ 31,050 ಎಕರೆ ಭೂಮಿಯನ್ನು ತೆರವುಗೊಳಿಸಿದ್ದಾಗಿ ಸರ್ಕಾರ ಹೇಳುತ್ತಿದ್ದರೂ ಬೇಲಿ ಹಾಕಿ ಸಂರಕ್ಷಿಸಿರುವುದು 482.69 ಎಕರೆ ಮಾತ್ರ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಉಲ್ಲೇಖಿಸಿದೆ.

ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾದ ‘ಸರ್ಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿ ತೆರವು
ಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವಿಕೆ’ ಎಂಬ ವರದಿಯಲ್ಲಿ ಒತ್ತುವರಿ ತೆರವಿನ ಹೆಸರಿ
ನಲ್ಲಿ ಸರ್ಕಾರ ಎಸಗಿರುವ ಭಾನಗಡಿಗಳನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಅನರ್ಹರಿಗೆ ಮಂಜೂರಾತಿ ಮಾಡುವ ಮೂಲಕ ಬೊಕ್ಕಸಕ್ಕೆ ಆಗಿರುವ ನಷ್ಟದ ಲೆಕ್ಕವನ್ನೂ ನೀಡಿದೆ.

ಬೆಂಗಳೂರು ನಗರದಲ್ಲಿ 18,441 ಎಕರೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 12,609 ಎಕರೆ ಭೂಮಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಸಿಎಜಿ ಅಧಿಕಾರಿಗಳ ತಂಡವು ಒತ್ತುವರಿ ತೆರವಿನ ಬಗ್ಗೆ ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಕಂದಾಯ ಇಲಾಖೆ ಸಿಬ್ಬಂದಿ ಜತೆ ಜಂಟಿ ಪರಿವೀಕ್ಷಣೆ ನಡೆಸಿತು. ತೆರವುಗೊಳಿಸಲಾಗಿದೆ ಎಂದು ತಿಳಿಸಲಾಗಿದ್ದ 43 ಪ್ರಕರಣಗಳ ಪೈಕಿ 219 ಎಕರೆ 14 ಗುಂಟೆ ಒಳಗೊಂಡಂತೆ 22 ಪ್ರಕರಣಗಳಲ್ಲಿ ಒತ್ತುವರಿ ಮುಂದುವರಿದಿತ್ತು ಎಂದು ವರದಿ ವಿವರಿಸಿದೆ.

ಬೆಂಗಳೂರಿನ ಸುತ್ತಮುತ್ತ ಭೂಮಿಯ ಬೆಲೆ ಮಾರ್ಗಸೂಚಿ ದರ (ಮಾರುಕಟ್ಟೆ ದರವಲ್ಲ) ಎಕರೆಗೆ ₹14 ಲಕ್ಷದಿಂದ ₹12 ಕೋಟಿವರೆಗೂ ಇದೆ. ಇಂತಹ ಅತ್ಯಮೂಲ್ಯ ಬೆಲೆಬಾಳುವ ಭೂಮಿಯನ್ನು ‘ತೆರವು’ಗೊಳಿಸಿರುವುದಾಗಿ ಹೇಳಿದರೂ ಅದನ್ನು ಪುನಃ ಒತ್ತುವರಿದಾರರ ಬಳಿಯೇ ಬಿಟ್ಟಿರುವುದು ಏಕೆ ಎಂದು ಸಿಎಜಿ ಪ್ರಶ್ನಿಸಿದೆ.

18 ಸಾವಿರ ಎಕರೆ ರಕ್ಷಣೆ: 2017ರ ಮಾರ್ಚ್‌ನಲ್ಲಿ ಕರ್ನಾಟಕ ಸಾರ್ವಜನಿಕ ಭೂಮಿ ನಿಗಮ ನೀಡಿದ ಪ್ರಗತಿ ವರದಿ ಪ್ರಕಾರ ರಾಜ್ಯದಲ್ಲಿ 4,48,615 ಎಕರೆ ಒತ್ತುವರಿಯಾಗಿದೆ ಎಂದು ವರದಿ ಹೇಳಿದೆ.

 ಒತ್ತುವರಿ ಭೂಮಿಯಲ್ಲಿ 2,61,174 ಎಕರೆ ತೆರವುಗೊಳಿಸಲಾಗಿದ್ದು, 1,87,441 ಎಕರೆ ತೆರವಿಗೆ ಬಾಕಿ ಇದೆ ‌ಎಂದು ವರದಿ ಹೇಳಿದೆ. ಆದರೆ, ಈ ಭೂಮಿಯಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ, ಬಗರ್‌ಹುಕುಂ ಹಾಗೂ ಅರಣ್ಯ ಭೂಮಿ ಒತ್ತುವರಿಯೂ ಸೇರಿದೆ ಎಂದು ನಿಗಮ ವಿವರಿಸಿದೆ ಎಂದು ವರದಿ ಹೇಳಿದೆ.

ವಿಚಿತ್ರವೆಂದರೆ 2,61,174 ಎಕರೆ ತೆರವುಗೊಳಿಸಲಾಗಿದೆ. ಆದರೆ, 18,273 ಎಕರೆ 74 ಗುಂಟೆಗಳನ್ನು ಮಾತ್ರ ಬೇಲಿ ಹಾಕಿ ರಕ್ಷಿಸಲಾಗಿದೆ ಎಂದು ನಿಗಮ ತಿಳಿಸಿದೆ.

ಖರ್ಚಾಗದ ಹಣ: ಒತ್ತುವರಿ ತೆರವುಗೊಳಿಸಿ ಭೂಮಿ ಸಂರಕ್ಷಿಸಲು ಸಾರ್ವಜನಿಕ ಭೂಮಿ ನಿಗಮವು ಜಿಲ್ಲಾಧಿಕಾರಿಗಳಿಗೆ ₹17.46 ಕೋಟಿ ಬಿಡುಗಡೆ ಮಾಡಿತ್ತು. 30 ಜಿಲ್ಲೆಗಳಿಗೆ 2012ರಿಂದ 2016ರ ಅವಧಿಯಲ್ಲಿ ಬಿಡುಗಡೆಯಾಗಿದ್ದ ಈ ಮೊತ್ತದಲ್ಲಿ ₹10.39 ಕೋಟಿಗೆ ಮಾತ್ರ ಬಳಕೆ ಪ್ರಮಾಣಪತ್ರ ಸಲ್ಲಿಕೆಯಾಗಿದೆ. ಉಳಿದ ₹7.07 ಕೋಟಿ ಮೊತ್ತ ಬಳಕೆಯೇ ಆಗಿಲ್ಲ. ಹೀಗಾಗಿ, ರಕ್ಷಿಸಿದ ಭೂಮಿಗೆ ಬೇಲಿ ಹಾಕುವ, ಸುತ್ತ ಹಳ್ಳವನ್ನು ತೋಡುವ ಹಾಗೂ ನಾಮಫಲಕ ಹಾಕುವ ಕೆಲಸ ಆಗಿಯೇ ಇಲ್ಲ ಎಂದು ವರದಿ ಹೇಳಿದೆ. 

ಒತ್ತುವರಿ ತೆರವಿನ ವಿಧ:ಮೈಸೂರು ಜಿಲ್ಲೆಯ ಕಾವೇರಿ ನದಿ ತೀರದಲ್ಲಿ 2 ಎಕರೆಯನ್ನು ತಲಕಾಡು ಜಲಧಾಮ ರೆಸಾರ್ಟ್ಸ್‌ನವರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು, ಕಟ್ಟಡ ಹಾಗೂ ರಸ್ತೆಯನ್ನು ನಿರ್ಮಿಸಿದ್ದರು. ಒತ್ತುವರಿದಾರರ ಕೋರಿಕೆ ಮೇರೆಗೆ ಹಾಗೂ ಜಿಲ್ಲಾಧಿಕಾರಿ ಶಿಫಾರಸಿನ ವಿರುದ್ಧವಾಗಿ ಈ ಭೂಮಿಯನ್ನು ಬಳಸಿಕೊಳ್ಳಲು 2014ರಲ್ಲಿ ಅನುಮತಿ ನೀಡಲಾಯಿತು. 

ತೆರವಿನ ಮಾದರಿ ಹೀಗೆ!

ಒತ್ತುವರಿ ತೆರವು ಎಂಬುದು ಕೇವಲ ಕಣ್ಣೊರೆಸುವ ತಂತ್ರ ಎಂಬುದನ್ನು ಸಿಎಜಿ ವರದಿಯು ಒಂದು ಪ್ರಕರಣದ ಮೂಲಕ ವಿವರಿಸಿದೆ.

ಬೆಂಗಳೂರು ನಗರ ಜಿಲ್ಲೆ ದಕ್ಷಿಣ ತಾಲ್ಲೂಕಿನ ಹುಳಿಮಾವು ಗ್ರಾಮದಲ್ಲಿ 12 ಎಕರೆ ಹುಲ್ಲುಗಾವಲಿನ ಪೈಕಿ 5 ಎಕರೆ ಇಸ್ಲಾಮಿಯಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯವರು ಒತ್ತುವರಿ ಮಾಡಿಕೊಂಡಿದ್ದರು. ಅದನ್ನು ತೆರವುಗೊಳಿಸಿದ್ದಾಗಿ 2016ರ ಅಕ್ಟೋಬರ್ 1ರಂದು ನಾಮಫಲಕ ಹಾಕಲಾಗಿದೆ. ಇಲಾಖೆ ಸಿಬ್ಬಂದಿ ಜತೆ ಜಂಟಿ ಪರಿವೀಕ್ಷಣೆ ಮಾಡಿದಾಗ ನಾಮಫಲಕ ಇದ್ದರೂ ತೆರವುಗೊಳಿಸಿದ್ದು ಕಂಡುಬರಲಿಲ್ಲ ಎದು ವರದಿ ಹೇಳಿದೆ.

₹280 ಕೋಟಿ ನಷ್ಟ

* ಫಲಾನುಭವಿಗಳು ಅರ್ಜಿ ಸಲ್ಲಿಸದಿದ್ದರೂ ಹಾಗೂ ಅದಕ್ಕಾಗಿ ಯಾವುದೇ ಕಾರಣ ದಾಖಲಿಸದೆ ಐದು ಪ್ರಕರಣಗಳಲ್ಲಿ ₹19.61 ಕೋಟಿ ಮೊತ್ತದಷ್ಟು ರಿಯಾಯಿತಿ ನೀಡಲಾಗಿತ್ತು. ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ಟ್ರಸ್ಟ್‌, ಧಾರವಾಡದ ಕರ್ನಾಟಕ ಶಿಕ್ಷಣ ಮಂಡಳಿ,  ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತು,  ಕನಕಪುರದ ಮಹಾತ್ಮ ಗಾಂಧಿ ವಿದ್ಯಾಪೀಠ, ಬೆಂಗಳೂರಿನ ಕೃಷ್ಣ ಸೇವಾಶ್ರಮ ಟ್ರಸ್ಟ್‌ ರಿಯಾಯಿತಿ ಪಡೆದ ಸಂಸ್ಥೆಗಳು. 

*  51 ಪ್ರಕರಣಗಳಲ್ಲಿ ₹176 ಕೋಟಿ ಮೌಲ್ಯದ ಭೂಮಿಯನ್ನು ಅನರ್ಹ ಫಲಾನುಭವಿಗಳಿಗೆ ನೀಡಲಾಗಿತ್ತು.

* 30 ಪ್ರಕರಣಗಳಲ್ಲಿ ಮಾರುಕಟ್ಟೆ ಮೌಲ್ಯ/ಮಾರ್ಗಸೂಚಿ ದರ ಕಡಿಮೆ ಪ್ರಮಾಣದಲ್ಲಿ ಅಳವಡಿಸಿಕೊಂಡ ಕಾರಣಕ್ಕೆ ₹17.83 ಕೋಟಿ ನಷ್ಟ.

* ಕೇಂದ್ರ ಮೌಲ್ಯಮಾಪನ ಸಮಿತಿಯ ತತ್ವಗಳನ್ನು ಅಳವಡಿಸಿಕೊಳ್ಳದ ಕಾರಣ 29 ಪ್ರಕರಣಗಳಲ್ಲಿ ₹35.40 ಕೋಟಿ ಮೊತ್ತದಷ್ಟು ಸಂಭಾವ್ಯ ವರಮಾನದ ಪಾವತಿಗೆ ತಗಾದೆ ಸೃಷ್ಟಿಸಲಿಲ್ಲ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !