ಬರಪೀಡಿತ ಜಿಲ್ಲೆಗಳ ಮಕ್ಕಳಿಗೆ ಆಶಾಕಿರಣ ಸರ್ಕಾರಿ ಶಾಲೆ

ಬುಧವಾರ, ಮಾರ್ಚ್ 27, 2019
22 °C
ಹುಬ್ಬಳ್ಳಿ: ಶಾಲೆಯಲ್ಲಿ ಹಾಸ್ಟೆಲ್‌ ಸೌಲಭ್ಯ, ವ್ಯಾಪಾರಸ್ಥರು, ಹಮಾಲಿ ಕೂಲಿ ಕಾರ್ಮಿಕರ ನೆರವಿನ ಹಸ್ತ

ಬರಪೀಡಿತ ಜಿಲ್ಲೆಗಳ ಮಕ್ಕಳಿಗೆ ಆಶಾಕಿರಣ ಸರ್ಕಾರಿ ಶಾಲೆ

Published:
Updated:
Prajavani

ಹುಬ್ಬಳ್ಳಿ: ಬರಪೀಡಿತ ಪ್ರದೇಶಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾಳಜಿಯಿಂದ, ನಾಲ್ಕು ವರ್ಷಗಳ ಹಿಂದೆ ಇಲ್ಲಿನ ಅಮರಗೋಳದ ಎ.ಪಿ.ಎಂ.ಸಿ ಆವರಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ವಸತಿ ನಿಲಯ ನೂರಾರು ಬಡಮಕ್ಕಳ ಪಾಲಿಗೆ ಆಶಾಕಿರಣವಾಗಿದೆ.

2013–14ರಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭೀಕರ ಬರ ಎದುರಾಗಿತ್ತು. ಜನರು ಕೂಲಿ ಅರಸಿ ಬೆಂಗಳೂರು, ಗೋವಾ, ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದರು. ತಮ್ಮೊಂದಿಗೆ ಮಕ್ಕಳನ್ನೂ ಕರೆದುಕೊಂಡು ಹೋಗುತ್ತಿದ್ದರಿಂದ ಆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಶಾಲೆಯ ಮುಖ್ಯ ಶಿಕ್ಷಕ ರಾಮು ಮೂಲಗಿ ಅದೇ ವರ್ಷ ಸರ್ಕಾರಿ ಶಾಲೆಯಲ್ಲಿ ಬಾಲಕ ಹಾಗೂ ಬಾಲಕಿಯರ ವಸತಿ ನಿಲಯ ಆರಂಭಿಸಿದರು.

ಧಾರವಾಡ, ಕಲಬುರ್ಗಿ, ಬೆಳಗಾವಿ, ರಾಯಚೂರು, ಬಾಗಲಕೋಟೆ ಮತ್ತು ಬೀದರ್‌ ಜಿಲ್ಲೆಗಳ ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ವಸತಿ ನಿಲಯದ ಮಕ್ಕಳಿಗೆ ಎಪಿಎಂಸಿಯ ಹಮಾಲಿ ಕಾರ್ಮಿಕರು, ವ್ಯಾಪಾರಸ್ಥರು, ಶಿಕ್ಷಣ ಪ್ರೇಮಿಗಳು, ಜನಪ್ರತಿನಿಧಿಗಳು ‌‌ದವಸ ಧಾನ್ಯ ಹಾಗೂ ತರಕಾರಿಯನ್ನು ಉಚಿತವಾಗಿ ನೀಡುತ್ತಾರೆ.

ಶಾಲೆಯಲ್ಲಿ ಒಟ್ಟು 170 ಮಕ್ಕಳು ಓದುತ್ತಿದ್ದಾರೆ. ಅವರ ಪೈಕಿ 100 ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇರುತ್ತಾರೆ. ಅವರಲ್ಲಿ ಕೆಲವರಿಗೆ ತಂದೆಯಿಲ್ಲ. ಕೆಲವರಿಗೆ ತಾಯಿಯಿಲ್ಲ. ಇನ್ನೂ ಕೆಲವು ಮಕ್ಕಳು ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡವರು. ಎಲ್ಲ ಧರ್ಮಗಳ ಮಕ್ಕಳೂ ಇಲ್ಲಿದ್ದು, ಇವರಲ್ಲಿ ಬಹುತೇಕರು ಹಮಾಲಿ ಕಾರ್ಮಿಕರ ಮಕ್ಕಳಾಗಿದ್ದಾರೆ.

ಅನೇಕರು ಹಾಸ್ಟೆಲ್‌ಗೆ ಬಂದು ಜನ್ಮದಿನ ಆಚರಿಸಿಕೊಂಡು ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುತ್ತಾರೆ. ದಾನಿಗಳು ನೋಟ್‌ಬುಕ್‌, ಪೆನ್, ಚಾಪೆ, ಆಟದ ಸಾಮಾನುಗಳನ್ನು ಉಚಿತವಾಗಿ ನೀಡುತ್ತಾರೆ. ಶಾಲೆ ಬಿಟ್ಟ ತಕ್ಷಣ ಒಂದು ತಾಸು ಆಟಕ್ಕೆ ಮೀಸಲು. ನಂತರ ಶಾಲೆಯಲ್ಲಿಯೇ ಮಕ್ಕಳಿಗೆ ಟ್ಯೂಷನ್‌ ಕೂಡ ಹೇಳಿಕೊಡಲಾಗುತ್ತದೆ.

‘1999ರಲ್ಲಿ ಎ.ಪಿ.ಎಂ.ಸಿಯ ದನದ ಮಾರುಕಟ್ಟೆಯ ಬಾಡಿಗೆ ಕಟ್ಟಡದಲ್ಲಿ ಶಾಲೆ ಆರಂಭವಾಯಿತು. ಆಗ ಹಮಾಲಿ ಕಾರ್ಮಿಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ‘ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ದಿನಗೂಲಿ ಯಾರು ಕೊಡುತ್ತಾರೆ?’ ಎಂದು ಕೇಳುತ್ತಿದ್ದರು. ಆದ್ದರಿಂದ, ಪ್ರತಿ ಭಾನುವಾರ ‘ಶಿಕ್ಷಣ– ಚಿಂತನ‘ ಕಾರ್ಯಕ್ರಮ ಮಾಡಿ ಹಾಡುಗಳ ಮೂಲಕ ಪೋಷಕರಿಗೆ ಶಿಕ್ಷಣದ ಮಹತ್ವ ತಿಳಿ ಹೇಳುತ್ತಿದ್ದೆ. ಬಳಿಕ ಅವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರು. ಅವರಲ್ಲಿ ಈಗ ಅನೇಕರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ’ ಎಂದು 20 ವರ್ಷಗಳಿಂದ ಶಾಲೆಯ ಮುಖ್ಯ ಶಿಕ್ಷಕರಾಗಿರುವ ರಾಮು ಮೂಲಗಿ ತಿಳಿಸಿದರು.

‘ಶಾಲೆ ಆರಂಭವಾದಾಗ 60 ವಿದ್ಯಾರ್ಥಿಗಳಿದ್ದರು. ಆಗ ನಾನೊಬ್ಬನೇ ಶಿಕ್ಷಕ. ಶಿವಲಿಂಗಪ್ಪ ಶಂಕರಗೌಡ ಬಾಳನಗೌಡರ ಅವರು ಭೂಮಿಯನ್ನು ದಾನ ನೀಡಿದ್ದರಿಂದ, 2013ರಲ್ಲಿ ಹೊಸ ಕಟ್ಟಡ ನಿರ್ಮಿಸಲಾಯಿತು. ಈಗ ಅಲ್ಲಿಯೇ ಹಾಸ್ಟೆಲ್‌ ನಡೆಯುತ್ತಿದೆ’ ಎಂದರು.

ಮಕ್ಕಳ ನಿರ್ವಹಣೆ ಮತ್ತು ಅಡುಗೆಗೆ ಒಟ್ಟು ಐದು ಜನ ಸಿಬ್ಬಂದಿ ಇದ್ದಾರೆ. ಜಾನಪದ ಹಾಡುಗಾರ ಕೂಡ ಆಗಿರುವ ರಾಮು ಮೂಲಗಿ ಕಾರ್ಯಕ್ರಮಗಳಲ್ಲಿ ಹಾಡಿ ಪಡೆಯುವ ಗೌರವ ಧನದ ಹಣವನ್ನು ಹಾಸ್ಟೆಲ್‌ ಸಿಬ್ಬಂದಿಯ ವೇತನಕ್ಕಾಗಿ ಬಳಸುತ್ತಾರೆ.

**

‘ಅನುದಾನಕ್ಕೆ ಒಳಪಡಿಸಿ’
ವಸತಿ ನಿಲಯವನ್ನು ರಾಜ್ಯ ಸರ್ಕಾರ ಅನುದಾನಕ್ಕೆ ಒಳಪಡಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಮುಂದೆಯೂ ಬಡ ಮಕ್ಕಳು ಸುಲಭವಾಗಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರಾಮು ಮೂಲಗಿ ಮನವಿ ಮಾಡಿದರು.

**

ಹಾಸ್ಟೆಲ್‌ ಆರಂಭವಾಗಿ ನಾಲ್ಕು ವರ್ಷವಾಯಿತು. ಒಂದೂ ದಿನ ಮಕ್ಕಳ ಊಟಕ್ಕೆ ಕೊರತೆಯಾಗಿಲ್ಲ. ಸಿದ್ಧಾರೂಢ ಮಠಕ್ಕೆ ಭಕ್ತರು ಧಾನ್ಯಗಳನ್ನು ಕೊಡುವಂತೆ ನಮಗೂ ಕೊಡುತ್ತಾರೆ.
-ರಾಮು ಮೂಲಗಿ, ಮುಖ್ಯ ಶಿಕ್ಷಕ

**

ನನ್ನ ತಂದೆ ಹಮಾಲಿ ಕೆಲಸ ಮಾಡುತ್ತಿದ್ದರಿಂದ ನಾನೂ ಇದೇ ಶಾಲೆಯಲ್ಲಿ ಓದಿದೆ. ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾದರೆ ನನ್ನ ಶ್ರಮ ಸಾರ್ಥಕ.
-ಅಯ್ಯಪ್ಪ ದೇವರಮನಿ, ಹಾಸ್ಟೆಲ್‌ ಅಡುಗೆ ಸಹಾಯಕ

**

ಪೋಷಕರು ನಮ್ಮ ಮೇಲೆ ವಿಶ್ವಾಸವಿಟ್ಟು ಮಕ್ಕಳನ್ನು ಶಾಲೆಗೆ ಕಳಿಸಿದ್ದರಿಂದ ನೂರಾರು ಮಕ್ಕಳ ಬದುಕು ಹಸನಾಗಿದೆ.
-ಸುನಂದಾ ಪಾಟೀಲ, ಕನ್ನಡ ಶಿಕ್ಷಕಿ

**

ಅಪ್ಪ, ಅಮ್ಮ ಇಬ್ಬರೂ ಕೃಷಿಕರು. ಆದ್ದರಿಂದ ನರಗುಂದ ತಾಲ್ಲೂಕಿನ ಕುರ್ಲಗೇರಿಯಿಂದ ಬಂದು ಇಲ್ಲಿನ ಶಾಲೆಗೆ ಸೇರಿಕೊಂಡೆ. ಈ ಶಾಲೆಗೆ ಸೇರಿದ ಮೇಲೆ ಮಗ್ಗಿ, ಲೆಕ್ಕ, ಇಂಗ್ಲಿಷ್‌ ಕಲಿತಿದ್ದೇನೆ.
-ಸುನಂದಾ ಕಣಕಣ್ಣವರ, 6ನೇ ತರಗತಿ ವಿದ್ಯಾರ್ಥಿನಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !