ಕಾನ್ವೆಂಟ್‌ ಮೀರಿಸಿದ ಸರ್ಕಾರಿ ಶಾಲೆ!

7
ಜಾಲತಾಣ ಹೊಂದಿದ ಹೆಮ್ಮೆ; ಪಾಠ, ಪೀಠೋಪಕರಣ ಸೌಲಭ್ಯ

ಕಾನ್ವೆಂಟ್‌ ಮೀರಿಸಿದ ಸರ್ಕಾರಿ ಶಾಲೆ!

Published:
Updated:
Prajavani

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕು ನಿಡಗುಂದಿಯ ಅಂಬೇಡ್ಕರ್‌ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್‌ ನಿರ್ಮಿಸಿ, ಉದ್ಯಾನ ಅಭಿವೃದ್ಧಿಪಡಿಸಿ, ಗೋಡೆಗಳಿಗೆ ಸ್ವತಃ ಆಕರ್ಷಕ ಚಿತ್ರಗಳನ್ನು ಬಿಡಿಸಿ ಗಮನಸೆಳೆದಿದ್ದ ಅಲ್ಲಿನ ಪ್ರಭಾರ ಮುಖ್ಯಶಿಕ್ಷಕ, ಕವಿ ವೀರಣ್ಣ ಮಡಿವಾಳರ ದಾನಿಗಳ ನೆರವಿನಿಂದಾಗಿ ಒಳಾವರಣವನ್ನೂ ಅಂದಗೊಳಿಸಿದ್ದಾರೆ. ಮಕ್ಕಳ ಕಲಿಕೆಗೆ ಅಗತ್ಯವಾದ ಪಾಠೋ‍ಪಕರಣ ಹಾಗೂ ಪೀಠೋಪಕರಣಗಳನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಶಿಕ್ಷಕರು ಮನಸ್ಸು ಮಾಡಿದರೆ, ದೂರದ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಪ್ರಗತಿಪಥದತ್ತ ತೆಗೆದುಕೊಂಡು ಹೋಗಬಹುದು. ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ರೂಪಿಸಬಹುದು ಎನ್ನುವುದನ್ನು ನಿರೂಪಿಸಿದ್ದಾರೆ. ಮಾದರಿ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ. ಹಿಂದುಳಿದಿದ್ದ ಈ ಶಾಲೆ ಈಗ ಶಿಕ್ಷಕರ ಪ್ರಯತ್ನದಿಂದಾಗಿ ಕೆಲವೇ ತಿಂಗಳುಗಳಲ್ಲಿ ಅಚ್ಚರಿ ಎನಿಸುವಷ್ಟು ಪ್ರಗತಿ ಕಂಡಿದೆ. ಪೋಷಕರು, ಶಿಕ್ಷಣ ಪ್ರೇಮಿಗಳು ಹಾಗೂ ಇಲಾಖೆ ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ದಾನಿಗಳ ನೆರವು ಇದಕ್ಕೆ ಪೂರಕವಾಗಿದೆ.

ಜಾಲತಾಣ, ವಾಟ್ಸ್‌ಆ್ಯಪ್‌ ಗ್ರೂಪ್: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಶಾಲೆಯು ತನ್ನದೇ ಆದ ಜಾಲತಾಣ (http://www.nannashale.in/klpsambedkarnidagundi/) ಹೊಂದಿದ ಮೊದಲ ಸರ್ಕಾರಿ ಶಾಲೆ ಎಂಬ ಖ್ಯಾತಿಗೂ ಭಾಜನವಾಗಿದೆ. ಈ ಜಾಲತಾಣದಲ್ಲಿ, ಶಾಲೆ ನಡೆದು ಬಂದ ಹೆಜ್ಜೆಗಳನ್ನು ಕಟ್ಟಿಕೊಡಲಾಗಿದೆ. ವಿಡಿಯೊ, ಫೋಟೊಗಳು, ಪ್ರಗತಿ ಹಾಗೂ ಪತ್ರಿಕಾ ವರದಿಗಳನ್ನು ಹಾಕಲಾಗಿದೆ. ಗ್ರಾಮಸ್ಥರು, ಪಾಲಕರು, ಎಸ್‌ಡಿಎಂಸಿಯವರು, ಶಿಕ್ಷಣ ಪ್ರೇಮಿಗಳು, ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆಗಳನ್ನು ಸೇರಿಸಿ ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿ, ಶಾಲೆಯ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.

ವೀರಣ್ಣ ಅವರು ಶಾಲೆಯ ಅಭಿವೃದ್ಧಿಗೆ ಯತ್ನಿಸುತ್ತಿರುವ ಬಗ್ಗೆ ಅ. 16ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಶಿಕ್ಷಣ ಪ್ರೇಮಿಗಳು ಹಾಗೂ ಓದುಗರು ಆರ್ಥಿಕ ನೆರವು ನೀಡಿ ಕನ್ನಡ ಶಾಲೆಯೊಂದರ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.

ಕೊರೆಯುವ ಚಳಿಯಲ್ಲೂ, ಸಿಮೆಂಟ್‌ ನೆಲದ ಮೇಲೆ ಮಕ್ಕಳು ಕೂರಬೇಕಾದ ಸ್ಥಿತಿ ಇತ್ತು. ಈಗ, ಅವರು ಕುರ್ಚಿಗಳಲ್ಲಿ ಕುಳಿತು, ಮೇಜುಗಳನ್ನು ಬಳಸಿಕೊಂಡು ಕಲಿಯುತ್ತಿದ್ದಾರೆ.

ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ: ‘ಶಾಲೆಗೆ ಹೊಸ ರೂಪ ನೀಡಬೇಕು ಎನ್ನುವ ಕನಸಿತ್ತು. ಆದರೆ, ಇಷ್ಟು ತ್ವರಿತವಾಗಿ ಆಗುತ್ತದೆ ಎಂದು ಭಾವಿಸಿರಲಿಲ್ಲ. ಪ್ರಜಾವಾಣಿಯಲ್ಲಿ  ಬಂದ ವರದಿಯಿಂದ ಬಹಳಷ್ಟು ಅನುಕೂಲವಾಗಿದೆ. ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತು. ಬೆಂಗಳೂರಿನ ಬಿಬಿಎಂಪಿಯಲ್ಲಿ ವೈದ್ಯಾಧಿಕಾರಿಯಾಗಿರುವ ಡಾ.ಕುಮಾರಸ್ವಾಮಿ ₹ 10 ಸಾವಿರ, ಬಾಬು ಕಡೂರು ಎನ್ನುವವರು ಕೊಟ್ಟ ₹ 15ಸಾವಿರ ಸೇರಿ ಹಲವರಿಂದ ಒಟ್ಟು ₹ 82ಸಾವಿರ ದೊರೆಯಿತು. ಪತ್ರಿಕೆಗೆ ಹಾಗೂ ದಾನಿಗಳಿಗೆ ಶಾಲೆಯ ಶ್ರೇಯಸ್ಸಿನ ಪಾಲು ಸಲ್ಲಬೇಕು’ ಎಂದು ವೀರಣ್ಣ ತಿಳಿಸಿದರು.

‘ಶಾಲೆ ಕುರಿತು ನಾನು ಪ್ರಜಾವಾಣಿಯಲ್ಲಿ ಬರೆದಿದ್ದ ಲೇಖನ ಗಮನಿಸಿದ ಹಾಗೂ ನಂತರ ಸಲ್ಲಿಸಿದ್ದ ಸಮಗ್ರ ವರದಿ ಆಧರಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಅವರು ₹ 1 ಲಕ್ಷ ಅನುದಾನ ನೀಡಿದ್ದರು. ಇದರಲ್ಲಿ 2 ನಲಿ–ಕಲಿ ಕೊಠಡಿಗಳು ಹಾಗೂ ಕಚೇರಿ ಕೊಠಡಿಗೆ ಬೇಕಾದ ಪೀಠೋಪಕರಣಗಳನ್ನು ಖರೀದಿಸಲಾಗಿದೆ. ಪಾಠೋಪಕರಣಗಳು ಕೂಡ ದೊರೆತಿವೆ. ಇದರಿಂದಾಗಿ ನಮ್ಮ ಶಾಲೆ ಸರಿ ಇಲ್ಲ ಎನ್ನುವ ಕೀಳರಿಮೆ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಇಲ್ಲ. ಅವರನ್ನು ಆತ್ಮವಿಶ್ವಾಸವೂ ಮೂಡಿದೆ. ಗುಣಮಟ್ಟದ ಶಿಕ್ಷಣವನ್ನೂ ಕಲ್ಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

*
ನಮ್ಮ ಸರ್ಕಾರಿ ಶಾಲೆಯನ್ನು, ಎಲ್ಲರ ನೆರವಿನಿಂದಾಗಿ ಖಾಸಗಿ ಶಾಲೆಗಿಂತಲೂ ಕಡಿಮೆ ಇಲ್ಲದಂತೆ ರೂಪಿಸಿದ ಹೆಮ್ಮೆ ಇದೆ.
-ವೀರಣ್ಣ ಮಡಿವಾಳರ, ಪ್ರಭಾರ ಮುಖ್ಯಶಿಕ್ಷಕ


ಶಾಲೆಯ ಕಚೇರಿಯಲ್ಲೂ ಪೀಠೋಪಕರಣ ಹಾಕಲಾಗಿದೆ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !