ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದ್‌ ಚಪ್ಪಲಿ ಪುರಾಣ!

Last Updated 4 ಮೇ 2018, 21:30 IST
ಅಕ್ಷರ ಗಾತ್ರ

ಚಪ್ಪಲಿ ಹಾಕ್ಕೊಂಡ್‌ ಇನ್ನೇನ್‌ ಬಾಗಿಲ್ ಹೊರಗ್‌ ಕಾಲ್‌ ಇಡಬೇಕು ಅನ್ನುವಷ್ಟರಲ್ಲಿ, ‘ರೀ... ಬಜಾರ್‌ಗೆ ಹೊಂಟಿರೇನ್‌. ಮಸಾಲಿ ಸಾಮಾನ್‌ ತಗೊಂಡ್‌ ಬರ್‍ರೀ...’ ಅಂತ ಅರ್ಧಾಂಗಿ ಅಡಿಗಿ ಮನೆಯಿಂದಲೇ ಕೂಗು ಹಾಕಿದ್ಲು.

‘ಈಗ್ಯಾಕ್‌ ಮಸಾಲಿ ನೆನಪಾಯ್ತ ಮಾರಾಯ್ತಿ’ ಎಂದೆ. ‘ಅಯ್ಯ, ಕುರಿ ಕೇಳಿ ಮಸಾಲೆ ಅರಿತಾರೇನ್ರಿ’ ಅಂದ್ಲು. ಅದರ ಬೆನ್ನ ಹಿಂದನ ಕಿಸಕ್ಕನ ನಕ್ಕಿದ್ದೂ ಕೇಳಿಸ್ತು. ಅದ್ನ ಕಿವಿಮ್ಯಾಗ್‌ ಹಾಕ್ಕೊಳ್ದ, ‘ಲೇ, ಅದು ಹಳೆ ಗಾದೆ ಮಾತು. ಮಾಧ್ಯಮದವರನ್ನ ಕೇಳಿ ಮಸಾಲೆ ಹೇಳಿಕೆ ಕೊಡಬೇಕೇನ್‌ ಅನ್ನೋದು ಬಿಜೆಪಿಯವರ ಹೊಸ ಗಾದೆ. ಪೇಪರ್ನೋರು, ಟಿ.ವಿ.ಯವರ ಬಾಯಿಗೆ ಆಹಾರ ಆಗಬ್ಯಾಡ್ರಿ ಅಂತ ಮೋದಿ ಸಾಹೇಬ್ರು ತಮ್ಮ ಪಕ್ಷದವರಿಗೆ ಬುದ್ಧಿ ಹೇಳ್ಯಾರ್‌ ಗೊತ್ತದ ಇಲ್ಲ’ ಎಂದೆ.

‘ಊಟದಾಗ್ ಉಪ್ಪು– ಖಾರ ಕಡಿಮೆ ಬಿದ್ರ, ಎಗರಾಡ್ತೀರಾ. ಅಡಿಗಿ ಮಾಡುವಾಗ ಗ್ಯಾನ ಎಲ್ಲಿತ್ತು. ಯಾವ ಧಾರಾವಾಹಿ ನೋಡಾಕತ್ತಿದ್ದಿ, ಯಾರ‍್ದ್ ಸ್ಟೇಟಸ್‌ ಅಪ್‌ಡೇಟ್‌ ಆಗೇತಿ ಅಂತ ನೋಡತಿದ್ದಿ ಅಂತ ಬೈತಿರಲ್ಲ. ಈಗ ಮನ್ಯಾಗ್‌ ಮಸಾಲಿ ಸಾಮಾನ್‌ ಮುಗ್ದಾವ್‌, ಬಜಾರ್‌ನಿಂದ ಬರುಮುಂದ ಮರೀಲಾರ್ದ ತಗೊಂಡ್‌ ಬರ್‍ರಿ’ ಅಂತ ಮತ್ತೊಮ್ಮೆ ಜೋರ್‌ ಮಾಡಿದ್ಳು.

‘ರಾಜಕಾರಣಿಗಳ ಮಸಾಲೆ ಮಾತಿಗೂ, ಅಡಿಗಿ ಮಸಾಲೆಗೂ ತಳಕ್‌ ಹಾಕಬ್ಯಾಡ ಮಾರಾಯ್ತಿ’ ಎಂದೆ. ಇಷ್ಟ ನೆಪ ಸಿಕ್ಕಿದ್ದ ಭಾಷ್ನಾ ಬಿಗ್ಯಾಕ್‌ ಸುರು ಮಾಡಿದ್ಳು.

‘ನೀವ್‌ ಏನ್‌ ಕಮ್ಮಿ ಅದೀರಿ. ಪುಢಾರಿಗಳ ಬಾಯಿ ಬಿಡ್ಸಾಕ್‌ ಅಡ್ಡಡ್ಡ ಪ್ರಶ್ನೆ ಕೇಳ್ತೀರಿ. ಆ ದಪ್ಪ ಚರ್ಚದ ರಾಜಕಾರಣಿಗಳು ತಮ್ಮ ಮನಸ್ಯಾಗಿನ ಮಾತನ್ನ ಎಡಬಿಡಂಗಿ ಥರಾ ಹೇಳಿಬಿಡ್ತಾವ್‌. ಆಮ್ಯಾಲ್‌ ಬಾಯಿ ಬಾಯಿ ಬಡ್ಕೊತಾವ್‌. ಟಿ.ವಿ.ಯವ್ರಿಗೆ, ನಿಮ್ಗ ಅಷ್ಟ ಸಾಕಾಗ್ತೈತಿ. ಮುಂಜಾನೆಯಿಂದ ಸಂಜೀತನಕ ಅದ್ನ ಹಿಡ್ದು ಜಡ್ದು, ಹಿಂಡಿ ಹಿಪ್ಪಿ ಮಾಡಿ ಮಸಾಲೆಯ ಸ್ವಾದ ಮರೆಯೋಹಂಗ ಮಾಡಿಬಿಡ್ತೀರಿ.

ಅವ್ಕು ಮೈಕ್‌ ಸಿಕ್ರ, ಕ್ಯಾಮೆರಾ ಕಂಡ್ರ ಸಾಕು. ಮೈಯ್ಯಾಗ್‌ ದೆವ್ವ ಹೊಕ್ಕಂಗ್‌ ಮನಸಿಗೆ ಬಂದ್ಹಂಗ್‌ ಮಾತಾಡ್ತಾವ್. ಜನಾ, ಪಾರ್ಟಿಯವ್ರು ಬೈಯ್ಯಾಕ್‌ ಸುರು ಮಾಡ್ತಿದ್ಹಂಗ್‌... ಜನಾ ಉಗಿದಿದ್ದನ್ನು ನಾಚ್ಕಿ– ಗೀಚ್ಕಿ ಬದಿಗಿಟ್ಟು ಹೆಗಲ ಮೇಲಿನ ಶಲ್ಯೆಯಿಂದ ಒರೆಸಿಕೊಳ್ಳುತ್ತಲೇ ‘ನಾ ಹಂಗ್‌ ಹೇಳೇ ಇಲ್ರಿ. ಪತ್ರಕರ್ತರು ಅದ್ನ ತಿರುಚ್ಯಾರ್‌’ ಅಂತ ಕಿರ್ಚಾಕ್‌ ಚಾಲು ಮಾಡ್ತಾರ್‌. ಇನ್ನೂ ಕೆಲವರು ಟಾವೆಲ್‌ನ್ಯಾಗ್‌ನಲ್ಲಿ ಇರುವ ಅಮೃತಾಂಜನ್‌ದಿಂದ ಕಣ್ಣು ಒರೆಸಿಕೊಳ್ಳುತ್ತ, ಮೊಸಳೆ ಕಣ್ಣೀರ್‌ ಹಾಕುತ್ತ ನನ್ನ ಕೈಬಿಡಬೇಡಿ ಅಂತ ಅಳ್ತಾರ’ ಎಂದು ಹೇಳುತ್ತಲೇ ರಾಜಕಾರಣಿಗಳ, ಪತ್ರಕರ್ತರ ಜನ್ಮ ಜಾಲಾಡತೊಡಗಿದಳು.

‘ನೀ ಪತ್ರಕರ್ತನ ಹೆಂಡ್ತಿ ಆಗಿದ್ದಕ್ಕೂ ಸಾರ್ಥಕ ಆಯ್ತ ಬಿಡು ಮಾರಾಯ್ತಿ’ ಅಂತ ಹೇಳುತ್ತ, ಎಂಜಿನ್‌ ಇಲ್ಲದೇ ಓಡುವ ಆಕೆಯ ಮಾತಿನ ರೈಲಿಗೆ ಬ್ರೇಕ್‌ ಹಾಕಾಕ್‌ ನೋಡ್ದೆ.

ಈ ಮಾತಿನ ಭರದಾಗ್‌, ಒಗ್ಗರಣೆಗೆ ಮಸಾಲೆ ಹಾಕೋದನ್ನ ಮರೆತಿದ್ದ ಅರ್ಧಾಂಗಿ, ಅಡಿಗಿ ಮನಿಗೆ ಓಡುತ್ತಿದ್ದಂತೆ ನಾನು ಮನೆಯಿಂದ ಹೊರಬಿದ್ದೆ. ಒಗ್ಗರಣೆ ವಾಸ್ನೆ ಹಿಂದನs ಅಡುಗೆ ಮನೆಯಿಂದಲೇ ಮತ್ತೊಂದು ಅಪ್ಪಣೆ ಕೇಳಿ ಬಂದಿತು.

‘ಚಪ್ಪಲಿ ಹಾಕ್ಕೊಂಡ್‌ ಹೋಗಬ್ಯಾಡ್ರಿ. ನೀತಿ ಸಂಹಿತೆ ಉಲ್ಲಂಘನೆ ಹೆಸರ್‌ನ್ಯಾಗ್‌ ಮತ್‌s ಆಯೋಗದ ಅನುಮತಿ ಇಲ್ದ ಚಪ್ಪಲಿ ಮೆಟ್ಟಿದ್ದಕ್ಕ ಪ್ರತಿಪಕ್ಷದವರು ನಿಮ್ಮ ಕಾಲಾನ ಚಪ್ಪಲಿ ಕಿತ್ಕೊಂಡಾರ್‌ ಹುಷಾರ್‌’ ಅಂದ್ಳು.

‘ಏಯ್‌ ಅವ್ರೆಲ್ಲ ನೋಟು ವಶಪಡಿಸಿಕೊಳ್ಳುವುದರ ಕಡೆ ದೃಷ್ಟಿ ನೆಟ್ಟಾರ್‌. ಚಪ್ಪಲಿ ಮುಖಾ ಯಾರ್ ನೋಡ್ತಾರ್‌ ಬಿಡೆ’ ಅಂದೆ.

ಕಿತ್ತೋಗಿರುವ ಚಪ್ಪಲಿ ನನ್ನ ನೋಡಿ ನಕ್ಕಂಗ್‌ ಆತು. ಕಿಲಕಿಲಾಂತ ನಕ್ಕೋತ್‌ ಹೊರ ಬಂದ ಅರ್ಧಾಂಗಿ, ‘ಆ ಹುಚ್‌ ವೆಂಕಟ್‌ಗೆ ರಾಜರಾಜೇಶ್ವರಿ ಮತಕ್ಷೇತ್ರದಾಗ್‌ ಚಪ್ಪಲಿ ಚಿಹ್ನೆ ಸಿಕ್ಕದs. ಅವ್ನ ಕೇಳಿ ತಗೊಂಡಾನ. ನೀವ್‌ ಚಪ್ಪಲಿ ಹಾಕ್ಕೊಂಡ್ ಹೋದ್ರ ವೆಂಕಟ್‌ ಎದುರಾಳಿ ‘ಮನಿರತ್ನ’ ಮುನಿಸಿಕೊಂಡು ನಿಮ್ಮ ಕಾಲಾಗಿನ ಚಪ್ಪಲಿ ಕಿತ್ಕೊಳಾದ್ಹಂಗ್‌ ನೋಡ್ಕೊಳ್ಳಿ’ ಅಂತ ಅಮೂಲ್ಯ ಸಲಹೆ ನೀಡಿದಳು. ‘ಥೂ ಈ ಎಲೆಕ್ಷನ್‌ದಾಗ ಚಪ್ಪಲಿ ಹಾಕ್ಕೊಂಡ್‌ ತಿರುಗೋಕ್ಕೂ ಅನುಮತಿ ಬೇಕಾಯ್ತಲ್ಲ’ ಅಂದೆ.

ಜನ, ನಾಯಕರಿಗೆ ಕ್ರೇನ್‌ನಿಂದ ಸೇಬು ಹಣ್ಣಿನ ಹಾರ, ಕೈಯಲ್ಲಿ ಲಿಂಬೆ ಹಣ್ಣು ಹಿಡಿದುಕೊಂಡು ತಿರುಗುವವರಿಗೆ ನಿಂಬೆ ಹಣ್ಣಿನ ಹಾರ ಹಾಕುವ ದಿನಗಳಲ್ಲಿ ಮತದಾರರಿಗೆ ಮೋಸ ಮಾಡಿದ ಧಗಾಕೋರರಿಗೆ ಚಪ್ಪಲಿ ಹಾರ ಹಾಕುವ ಸೌಭಾಗ್ಯ ಇದ್ದಿದ್ರ ನನ್ನ ಹಳೆ ಚಪ್ಪಲಿನೂ ತಗೊಂಡು ಹೋಗಿ ‘ಸನ್ಮಾನ’ ಮಾಡಬಹುದಾಗಿತ್ತು. ಬಂದದ್ದು ಬರ್‍ಲಿ ಚುನಾವಣಾ ಆಯೋಗದ ದಯೆ ಒಂದಿರಲಿ ಎಂದು ಮನಸ್ಸಿನಲ್ಲೇ ಅಂದುಕೊಂಡು ಹಳೆ ಚಪ್ಪಲಿಯನ್ನೇ ಮೆಟ್ಟಿಕೊಂಡು ಹೊರ ಬೀಳುತ್ತಿದ್ದಂತೆ ದಾರ‍್ಯಾಗ್‌ ಪ್ರಭ್ಯಾ ಎದುರಾದ.

‘ಏನಪಾ. ಎಲ್ಲಿಗೆ ಹೊಂಟಿ. ಭಾಳ್‌ ಅವ್ಸರದಾಗ್‌ ಇದ್ಹಂಗ್‌ ಕಾಣ್ತೈತಿ’ ಎಂದೆ.

‘ಶಾಸ್ತ್ರಾ ಕೇಳಾಕ್‌ ಶಾಸ್ತ್ರಿಗಳ ಮನಿ ಕಡೆ ಹೊಂಟೀನಿ’ ಅಂದ.

‘ಇಂಥಾ ಮಟ ಮಟ ಮಧ್ಯಾಹ್ನದಾಗ್ ಏನ್‌ ಅಂತಾ ಘನಂದಾರಿ ಮುಹೂರ್ತ ನೋಡೋದು ಐತಪಾ’ ಎಂದೆ.

‘ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳು, ಭಾವಿ ‘ಮುಮ’ ಆಗಾಕ್‌ ಮುಹೂರ್ತ ನಿಗದಿ ಮಾಡ್ಯಾರಲ್ಲೋ. ಅದ್ಕ ನಾನೂ ಒಂದ್‌ ಕೈ ನೋಡ್ಬೇಕ್‌ ಅಂದ್ಕೊಂಡೀನಿ’ ಅಂದ.

‘ನೀ ಯಾವ್‌ ಸೀಮೆ ಮಹಾನಾಯಕಲೇ, ಮುಹೂರ್ತ ಫಿಕ್ಸ್‌ ಮಾಡಾಕ್‌.  ಕರ್ನಾಟಕಕ್ಕ ದೇವೇಗೌಡ್ರ ಮಹಾನಾಯಕ ಅಂತ ಮೋದಿ ಸಾಹೇಬ್ರು ಭಾರಿ ಲೆಕ್ಕಾಚಾರ ಹಾಕಿ ಹೇಳ್ಯಾರಲ್ಲ. ನೆನಪದ ಇಲ್ಲ. ಜನಾ ಇನ್ನs ವೋಟ್‌s ಹಾಕಿಲ್ಲ. ಅದ್ಕೂ ಮೊದ್ಲ ಈ ಮೂರೂ ಬಿಟ್ಟ ಮೂವರೂ ಮುಹೂರ್ತ ನಿಗದಿ ಮಾಡಿದ್ದು ನೋಡಿ, ಮತದಾರ ಬಿದ್‌ ಬಿದ್‌ ನಗಾಕತ್ತಾನ್‌. 12ಕ್ಕ ನನ್ನ ಮುಹೂರ್ತ ಅದ. ಅವತ್‌ ಇವ್ಕ ಒಂದ್‌ ಗತಿ ಕಾಣಿಸ್ತೀನಿ ಅಂತ ಲೆಕ್ಕ ಹಾಕ್ಯಾನ್‌’ ಎಂದೆ.

ನನ್ನ ಮಾತಿಗೆ ಕ್ಯಾರೇ ಅನ್ನದೇ, ‘ಇದೇನೋ ಕಾಲಾಗ್‌ ಹರ್ಕ ಚಪ್ಲಿ ಹಾಕ್ಕೊಂಡ್‌ ಹೊಂಟಿಯಲ್ಲ ಹುಚ್ಚಗಿಚ್‌ ಹಿಡ್ದದ ಏನ್‌’ ಅಂದ.

‘ಏಯ್‌ ನಾಲ್ಗಿ ಬಿಗಿ ಹಿಡ್ದ ಮಾತಾಡ್‌ ಮಗ್ನ. ಯಡ್ಡಿ ಹುಟ್ಟಿದಾಗ ಬಾಯಿನ ತೊಳೆದಿಲ್ಲಂತ ಖರ್ಗೆ ಸಾಹೇಬ್ರು ಹೇಳ್ದಂಗ್‌, ನಿಂಗೂ ಬಾಯಿ ತೊಳೆದಿಲ್ಲೇನ್‌. ಗೋಮೂತ್ರ ಹಾಕಿ ತೊಳದ್ರ ಬಾಯಿ, ನಾಲಿಗಿ ಸ್ವಚ್ಛ ಆಗ್ತದ್‌ ನೋಡ್‌’ ಎಂದು ಕಿಚಾಯಿಸಿದೆ.

‘ವ್ಯಾಳೆ ಬಂದಾಗ್‌ ತೊಳಿ ಅಂತಿ, ಈಗ ಚಪ್ಪಲಿ ಬಗ್ಗೆ ಬಾಯ್ಬಿಡು ಹರಕ್‌ ಬಾಯಾವ್ನ’ ಎಂದು ಪ್ರಭ್ಯಾ ತಿರುಗೇಟು ಕೊಟ್ಟ.

ಮನ್ಯಾಗ ನಡೆದ ಹುಚ್‌ ವೆಂಕಟನ ಚಪ್ಪಲಿ ಪುರಾಣವನ್ನ ಅಂವ್ಗ ಬಿಡಿಸಿ ಹೇಳಿದೆ.

‘ಖರೇ ಅಂದ್ರ ಚುನಾವಣಾ ಆಯೋಗಕ್ಕ ಏನಾದ್ರೂ ಆಗಿರಬೇಕಲೇ. ಗಾಂಧಿ ಟೋಪಿ ಧರಿಸಿದ ಅಭ್ಯರ್ಥಿ ಫೋಟೊ ಹಾಕಾಕ್‌ ಹರಾಕಿರಿ ಮಾಡೊ ಆಯೋಗ, ಚಪ್ಪಲಿಗೆ ಹೆಂಗ್ ಅನುಮತಿ ಕೊಟ್ಟದ’ ಅಂದ. ‘ಏಯ್‌ ಹಂಗೆಲ್ಲ ಹೇಳಬ್ಯಾಡೊ, ನೀತಿ ಸಂಹಿತೆ ಉಲ್ಲಂಘನೆ ಹೆಸರ್‌ನ್ಯಾಗ್‌ ಒಳಗ್ ಹಾಕ್ಯಾರ–ಗಿಕ್ಯಾರ್‌ ಹುಷಾರ್‌’ ಎಂದೆ.

‘ಮತಗಟ್ಟೆ ಆಸುಪಾಸಿನ್ಯಾಗ್‌ ಯಾವ್ದರ ಪಕ್ಷದ ಚಿಹ್ನೆ ಇರ್ತಾವೇನ್‌. ಆದ್ರ ವೆಂಕಟ್‌ನ ಚಿಹ್ನೆ ವೋಟ್‌ ಹಾಕುವಾಗ್ಲೂ ಕಾಲಾಗ್‌s ಇರ್ತದ. ಯಾವ್ನರ ಕ್ಯಾತೆ ತಗದ್ರ, ಗುಡಿ ಒಳಗೆ ಹೋಗು ಮೊದ್ಲ ಹೊರಗs ಚಪ್ಪಲಿ ಬಿಟ್ಟು ಹೋಗು ಹಂಗ, ವೋಟ್‌ ಹಾಕಾಕ್‌ ಚಪ್ಪಲಿ ಬಿಟ್‌ ಹೋಗಬೇಕಾಕ್ತೈತಿ’ ನೋಡ್‌ ಅಂದ.

‘ಖರೆ ನೋಡಲೇ ಪ್ರಭ್ಯಾ. ವೆಂಕಟ್‌ ಹುಚ್ ಅಲ್ಲಲೇ ಭಾರಿ ಶಾಣ್ಯಾ ಅದಾನ ನೋಡ್‌, ರಾಮನ ಪಾದುಕೆಗಳು ಅಂದುಕೊಂಡು ಮುಗ್ಧ ಭಕ್ತರು ಚಪ್ಪಲಿಗೆ ವೋಟ್‌ ಹಾಕಲೂಬಹುದು’ ಎಂದೆ. ಅದೇ ಹೊತ್ತಿಗೆ ನನ್ನ ಚಪ್ಪಲಿ ಕಿತ್ಕೊಂಡು ಕೈಗೇ ಬಂತು.

‘ಸಂಕಟ ಬಂದಾಗ ವೆಂಕಟರಮಣ ಅನ್ನು ಹಂಗ, ನೀ ಈಗ ಸೀದಾ ಹುಚ್‌ ವೆಂಕಟ್‌ ಹತ್ರಾ ಹೋಗಿ ಹೊಸ ಚಪ್ಪಲಿ ಕೇಳ್‌, ಒಂದೆರಡು ಜೋಡ್‌ ಸಿಗಬಹುದು’ ಎಂದು ಪ್ರಭ್ಯಾ ಕೆಣಕಿದ.

‘ಐನೂರು, ಎರಡ್‌ ಸಾವಿರಕ್ಕ ವೋಟ್‌ ಮಾರಿಕೊಳ್ಳೋರು ನನ್ ಎಕ್ಕಡದ ಸಮಾನ ಎಂದು ಹುಚ್ಚ ವೆಂಕಟ್‌ ಹೇಳ್ಯಾನ್‌. ದುಡ್ಡು ತಗೊಂಡ್‌ ವೋಟ್‌ ಹಾಕವ್ರಿಗೆ ಚಪ್ಪಲಿ ಪೂಜೆ ಮಾಡಾಕ್‌ ಕಾಲ್ಮರಿ ಚಿಹ್ನೆ ತಗೊಂಡವ್ನ ಹತ್ರ ಹೋಗಿ ಹೊಸ ಚಪ್ಪಲಿ ಕೇಳಿದ್ರ, ಅವ್ನ ಹುಚ್‌ ಹೆಚ್ಚಾಗಿ ಚಪ್ಪಲಿಯಿಂದಲೇ ಹಣೆ ಚಚ್ಚಿಕೊಳ್ಳಬಹುದು ಇಲ್ಲಾ ನಂಗ್‌ ಚಚ್ಚಾಕ್‌ ಬರಬಹುದು. ಅವ್ನ ಚಪ್ಪಲಿ ಉಸಾಬರಿ ಬ್ಯಾಡೊ ಮಾರಾಯಾ’ ಎಂದು ಹೇಳುತ್ತ ಕೈಯ್ಯಾಗ ಹಿಡಕೊಂಡs, ಚಪ್ಪಲಿ ಹೊಲಿಯುವ ಅಂಗಡಿ ಕಡೆ ಬರಿಗಾಲಲ್ಲೇ ಹೆಜ್ಜೆ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT