ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಭವನದ ಬದಲು ಛತ್ರ!

ಕಾರ್ಯಕ್ರಮಗಳಿಗೆ ನೀಡಿದ ದುಡ್ಡು ಪೂಜೆಗೆ ಬಳಕೆ ಮಾಡಿದ ರಾಜ್ಯ ಸರ್ಕಾರ: ಆಕ್ಷೇಪ
Last Updated 12 ಅಕ್ಟೋಬರ್ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರವು ಸಾಂಸ್ಕೃತಿಕ ಭವನ ಕಟ್ಟಲು ನೀಡಿದ್ದ ಅನುದಾನದಲ್ಲಿ ಮದುವೆ ಛತ್ರ, ವಸತಿಗೃಹ, ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

2018ರ ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ವರ್ಷದ ಸಾಮಾನ್ಯ ಮತ್ತು ಸಾಮಾಜಿಕ ವಲಯ ಕುರಿತ ಭಾರತೀಯ ಮಹಾಲೇಖಪಾಲರ ವರದಿಯಲ್ಲಿ, ಸರ್ಕಾರದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉತ್ತೇಜಿಸುವುದಕ್ಕಾಗಿ ಸಾಂಸ್ಕೃತಿಕ ಭವನ ನಿರ್ಮಿಸುವ ಯೋಜನೆಯನ್ನು ಸರ್ಕಾರ ರೂಪಿಸಿತ್ತು. 2011ರಿಂದ 2018ರ ಅವಧಿಯಲ್ಲಿ 1094 ಸಂಸ್ಥೆಗಳಿಗೆ ₹131 ಕೋಟಿ ಅನುದಾನ ನೀಡಲಾಗಿತ್ತು.

ಯೋಜನೆಯ ಮಾರ್ಗದರ್ಶಿ ಸೂತ್ರಗಳ ಅನ್ವಯ ಸಾಂಸ್ಕೃತಿಕ ಚಟುವಟಿಕೆಗಳಲ್ಲದೇ ಯೋಗ, ಧ್ಯಾನ, ಶಿಕ್ಷಣ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಈ ಯೋಜನೆಯಡಿ ಅನುದಾನ ನೀಡುವಂತಿಲ್ಲ. ಆದರೆ 53 ಪ್ರಕರಣಗಳಲ್ಲಿ ಯೋಗ, ಶಿಕ್ಷಣ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ₹13.33 ಕೋಟಿ ಅನುದಾನ ನೀಡಲಾಗಿದೆ. ಜಮೀನು ಸ್ವಾಧೀನ ಪತ್ರ, ಕಟ್ಟಡ ನಕ್ಷೆಯಂತಹ ದಾಖಲೆಗಳನ್ನು ಸಲ್ಲಿಸದೇ ಇದ್ದರೂ 28 ಪ್ರಕರಣಗಳಲ್ಲಿ ₹9.97 ಕೋಟಿ ಅನುದಾನ ನೀಡಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.

ಪೂಜೆಗೂ ದುಡ್ಡು ಬಳಕೆ:2013ರಿಂದ 2018ರ ಅವಧಿಯಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು 3,738 ಸಂಸ್ಥೆಗಳಿಗೆ ₹65.54 ಕೋಟಿ ಅನುದಾನವನ್ನು ಸರ್ಕಾರ ನೀಡಿತ್ತು. ಈ ಪೈಕಿ 10 ಜಿಲ್ಲೆಗಳಲ್ಲಿನ 1,982 ಸಂಸ್ಥೆಗಳಿಗೆ ನೀಡಿರುವ ₹39.94 ಕೋಟಿ ಅನುದಾನದ ಬಗ್ಗೆ ಸಿಎಜಿ ಪರಿಶೀಲನೆ ನಡೆಸಿದೆ.

ಸಾಂಸ್ಕೃತಿಕ ಹಾಗೂ ಕಲೆಗೆ ಸಂಬಂಧಿಸಿದ ಚಟುವಟಿಕೆಗೆ ಮಾತ್ರ ಹಣ ಬಳಸಬೇಕು ಎಂಬುದು ನಿಯಮ. ಆದರೆ, 54 ಪ್ರಕರಣಗಳಲ್ಲಿ ಶಿಕ್ಷಣ ಸಂಸ್ಥೆಗಳು, ಮಾಧ್ಯಮ, ಸಾಮಾಜಿಕ ಭದ್ರತಾ ಪಿಂಚಣಿಯ ವಿವರಣೆ, ಗ್ರಾಮೀಣಾಭಿವೃದ್ಧಿ ಕೆಲಸ ಮಾಡುವ ಸಂಸ್ಥೆಗಳಿಗೆ ಅನುದಾನ ನೀಡಿ ದುರ್ಬಳಕೆ ಮಾಡಲಾಗಿದೆ.‍ಮೂರು ಸಂಸ್ಥೆಗಳು ನೀಡಿರುವ ದೃಢೀಕೃತ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ಪೂಜಾ ಕಾರ್ಯ, ಕೃಷಿ ಚಟುವಟಿಕೆ, ಕ್ರೀಡಾಕೂಟಕ್ಕೆ ಹಣ ಬಳಕೆ ಮಾಡಿರುವುದು ಬಯಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

*32 ಸಾಂಸ್ಕೃತಿಕ ಭವನಗಳಿಗೆ ₹3.49 ಕೋಟಿ ಬಿಡುಗಡೆ

* ಸಾಂಸ್ಕೃತಿಕ ಭವನದ ಬದಲು ₹60.33 ಲಕ್ಷದಲ್ಲಿ ಎಂಟು ವಸತಿಗೃಹ

*₹60 ಲಕ್ಷದಲ್ಲಿ ಮೂರು ಮದುವೆ ಛತ್ರ ನಿರ್ಮಾಣ

*₹74 ಲಕ್ಷದಲ್ಲಿ 4 ಒಳಾಂಗಣ ಕ್ರೀಡಾಂಗಣ, ವಾಣಿಜ್ಯ ಉದ್ದೇಶದ ಕಟ್ಟಡ

*₹1.55 ಕೋಟಿ ವೆಚ್ಚದಲ್ಲಿ ಉಗ್ರಾಣ ಕೊಠಡಿ, ಕಚೇರಿ ಕೊಠಡಿ

*48 ಸಾಂಸ್ಕೃತಿಕ ಭವನಗಳನ್ನು ಧಾರ್ಮಿಕ ಸಂಸ್ಥೆಗಳ ಆವರಣದಲ್ಲಿ ನಿರ್ಮಿಸಲಾಗಿದೆ

₹2.34 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 8 ಸಾಂಸ್ಕೃತಿಕ ಭವನಗಳು ಪಾಳು ಬಿದ್ದಿವೆ

ಸಾಂಸ್ಕೃತಿಕ ನೀತಿಗೆ ಸರ್ಕಾರದ ನಿರ್ಲಕ್ಷ್ಯ

ರಾಜ್ಯಕ್ಕಾಗಿ ಸಾಂಸ್ಕೃತಿಕ ನೀತಿಯನ್ನು ರೂಪಿಸುವ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಸಿಎಜಿ ವರದಿ ಆಕ್ಷೇಪಿಸಿದೆ.

ಸಾಂಸ್ಕೃತಿಕ ನೀತಿ ರಚಿಸಲು 2012ರಲ್ಲಿ ಕರಡು ಸಮೀಕ್ಷಾ ಸಮಿತಿಯನ್ನು ಸರ್ಕಾರ ರಚಿಸಿತಲ್ಲದೇ, ಅದನ್ನು 2013ರಲ್ಲಿ ಪುನರ್ ರಚಿಸಿತು. ಈ ಸಮಿತಿಯು 2014ರಲ್ಲಿ ಸಮಗ್ರ ವರದಿ ಸಲ್ಲಿಸಿದ್ದು, ಪರಿಶೀಲನೆ ಬಳಿಕ 2017ರಲ್ಲಿ ಸರ್ಕಾರ ಅನುಮೋದಿಸಿತು. ನೀತಿಯಲ್ಲಿನ ಕೆಲವು ಶಿಫಾರಸುಗಳನ್ನು ಇನ್ನೂ ಕೂಡ ಅನುಷ್ಠಾನ ಮಾಡಿಲ್ಲ ಎಂದು ವರದಿ ಹೇಳಿದೆ.

ಓದುಗರ ತಲುಪದ ಪುಸ್ತಕ

ಪುಸ್ತಕ ಪ್ರಾಧಿಕಾರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮುದ್ರಿಸಿದ ಪುಸ್ತಕಗಳನ್ನು ಬಾಡಿಗೆ ಮನೆಯೊಂದರಲ್ಲಿ ರಾಶಿ ಹಾಕಿದ್ದು, ಅವು ಓದುಗರನ್ನು ತಲುಪಿಯೇ ಇಲ್ಲ.

ಮಂಡ್ಯ ಜಿಲ್ಲೆಯಲ್ಲಿ ಬಾಡಿಗೆ ಮನೆ ಪಡೆದು ₹12.91 ಲಕ್ಷ ಮೌಲ್ಯದ 5,108 ಋಗ್ವೇದ ಪುಸ್ತಕಗಳು, ₹5.76 ಲಕ್ಷ ಮೌಲ್ಯದ ಕುಮಾರವ್ಯಾಸ ಭಾರತದ 320 ಪ್ರತಿಗಳು ಹಾಗೂ ₹7.50 ಲಕ್ಷ ಮೌಲ್ಯದ ಇತರ ಪುಸ್ತಕಗಳನ್ನು
ಮಾರಾಟ ಮಾಡದೇ ರಾಶಿ ಇಡಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT