ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ಚುನಾವಣೆ: ಸೀರೆ, ಹಣ ಹಂಚಿಕೆ ಜೋರು!

Last Updated 11 ಜೂನ್ 2019, 17:09 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಚುನಾವಣೆ ರಂಗೇರಿದ್ದು, ವಿಧಾನಸಭಾ–ಲೋಕಸಭಾ ಚುನಾವಣೆಯಂತೆಯೇ ಹಣ, ಸೀರೆ ಹಂಚಿಕೆ, ರೆಸಾರ್ಟ್‌ ರಾಜಕಾರಣವೂ ನಡೆಯುತ್ತಿದೆ. ಅದರಲ್ಲಿಯೂ, ಶಿಕ್ಷಣ ಇಲಾಖೆಯಲ್ಲಿ ಚುನಾವಣಾ ಕಾವು ಜೋರಾಗಿದೆ.

ಈಗಾಗಲೇ ತಾಲ್ಲೂಕು ಪದಾಧಿಕಾರಿಗಳು ಆಯ್ಕೆಯಾಗಿದ್ದು, ಸಂಘದ ಜಿಲ್ಲಾ ಮಟ್ಟದ ಚುನಾವಣೆ ಜೂನ್‌ 13ರಂದು ನಡೆಯಲಿದೆ. ಸರ್ಕಾರದ ಎಲ್ಲ ಇಲಾಖೆಗಳ, ಎಲ್ಲ ಹಂತದ ಸದಸ್ಯ ನೌಕರರು ಮತ ಹಕ್ಕು ಹೊಂದಿರುತ್ತಾರೆ.

‘ಸದಸ್ಯರ ಸಂಖ್ಯೆಗನುಗುಣವಾಗಿ ಆಯಾ ಇಲಾಖೆಗಳಿಗೆ ಇಂತಿಷ್ಟು ಹುದ್ದೆ ಮೀಸಲಾಗಿರುತ್ತದೆ. ಶಿಕ್ಷಣ ಇಲಾಖೆಯಲ್ಲಿ ಹೆಚ್ಚು ಸದಸ್ಯರಿರುವುದರಿಂದ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪಾಲಿಟೆಕ್ನಿಕ್‌, ಜೂನಿಯರ್‌ ಕಾಲೇಜಿಗೆ ಒಂದೊಂದರಂತೆ ಒಟ್ಟು ಐದು ಹುದ್ದೆಗಳನ್ನು ಮೀಸಲಿಡಲಾಗಿದೆ. ಹೀಗಾಗಿ, ಶಿಕ್ಷಕರಲ್ಲಿ ಪೈಪೋಟಿ ಹೆಚ್ಚಾಗಿರುತ್ತದೆ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಏಕಿಷ್ಟು ಪೈಪೋಟಿ ?:‘ಸಂಘದ ನಿರ್ದೇಶಕ ಅಥವಾ ಪದಾಧಿಕಾರಿಯಾಗಿ ಆಯ್ಕೆಯಾದರೆ ವರ್ಗಾವಣೆಯಿಂದ ವಿನಾಯ್ತಿ ಸಿಗುತ್ತದೆ. ಇದನ್ನು ಜೀವನಪರ್ಯಂತ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದರು. ಪದಾಧಿಕಾರಿಯಾಗಿ ಆಯ್ಕೆಯಾದ ಒಂದು ಅವಧಿಗೆ ಮಾತ್ರ ಈ ವಿನಾಯ್ತಿ ಬಳಸಿಕೊಳ್ಳಬಹುದು. ಪದೆಪದೇ ಇದನ್ನು ತೋರಿಸಿ ವಿನಾಯ್ತಿ ನೀಡುವಂತಿಲ್ಲ ಎಂದು ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿದೆ. ನಗರ ಪ್ರದೇಶದಲ್ಲಿ ಇರುವ ನೌಕರರು ಸಂಘದ ಅಸ್ತ್ರವನ್ನು ಬಳಸಿಕೊಳ್ಳಲು ಚುನಾವಣೆಯನ್ನು ದಾರಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮುಖ್ಯಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಘದ ಪದಾಧಿಕಾರಿಯಾದವರು ಮುಂದೆ ರಾಜಕಾರಣಿಯಂತೆಯೇ ವರ್ತಿಸುತ್ತಾರೆ. ಶಿಕ್ಷಣಾಧಿಕಾರಿಗಳು ಇಂಥವರಿಗೆ ಯಾವುದೇ ಸೂಚನೆ ನೀಡಲು ಹಿಂಜರಿಯುವಂತಹ ಪರಿಸ್ಥಿತಿ ಸೃಷ್ಟಿಸುತ್ತಾರೆ’ ಎಂದು ದೂರಿದರು.

ಹೇಗಿರುತ್ತೆ ರಾಜಕಾರಣ?: ‘ಲೋಕೋಪಯೋಗಿ ಅಥವಾ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವಂಥ ನೌಕರರು ಅಧ್ಯಕ್ಷರಾಗಬೇಕು ಎಂದು ಬಯಸಿದ್ದರೆ, ಶಿಕ್ಷಣ ಇಲಾಖೆಯಲ್ಲಿ ಅಧ್ಯಕ್ಷ ಹುದ್ದೆಗೆ ಬರುವ ನಿರೀಕ್ಷೆಯಿರುವಂತಹ ಅಭ್ಯರ್ಥಿಗಳನ್ನು ಪರಾಭವಗೊಳಿಸಲು ದುಡ್ಡು ಚೆಲ್ಲುತ್ತಾರೆ. ಅವರ ಬೆಂಬಲಿಗ ಶಿಕ್ಷಕ–ಶಿಕ್ಷಕಿಯರಿಗೆ ಆಮಿಷ ಒಡ್ಡಿ ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಸೀರೆ, ಉಡುಗೊರೆ ಹಂಚುತ್ತಾರೆ. ರಾಜಕೀಯದಂತೆ ಇಲ್ಲಿಯೂ ರೆಸಾರ್ಟ್‌ ರಾಜಕಾರಣ ನಡೆಯುತ್ತದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT