ಆಂಧ್ರ ಮುಖ್ಯಮಂತ್ರಿ ದುಬಾರಿ ‘ಬಿಲ್’: ವಿಚಾರಣೆ ಸಾಧ್ಯತೆ

7
ಎಚ್‌ಡಿಕೆ ಪ್ರಮಾಣವಚನಕ್ಕೆ ಬಂದಿದ್ದ ಗಣ್ಯರ ಆತಿಥ್ಯ ವೆಚ್ಚ ತಕರಾರು

ಆಂಧ್ರ ಮುಖ್ಯಮಂತ್ರಿ ದುಬಾರಿ ‘ಬಿಲ್’: ವಿಚಾರಣೆ ಸಾಧ್ಯತೆ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಜಕೀಯ ಗಣ್ಯರ ಹೋಟೆಲ್‌ ಬಿಲ್‌ ಕುರಿತು ವಿವಾದ ಸೃಷ್ಟಿಯಾಗಿದ್ದು, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಂಗಿದ್ದ ಸ್ಯೂಟ್‌ ಬಿಲ್‌ ಸಾಚಾತನ ಕುರಿತು ಆಂಧ್ರ ಸರ್ಕಾರ ಶಂಕೆ ವ್ಯಕ್ತಪಡಿಸಿದೆ.

‘ಬಿಲ್ವಿದ್ಯೆ’ಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ವಿಚಾರಣೆ ನಡೆಸುವ ಕುರಿತು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಬಿಲ್‌ ಸಮಗ್ರ ವಿವರ ನೀಡುವಂತೆ ಆಂಧ್ರ ಸರ್ಕಾರ, ಕರ್ನಾಟಕವನ್ನು ಕೇಳಿದೆ. ಅಲ್ಲದೆ, ‘ನಾಯ್ಡು ಅವರು ಹೋಟೆಲ್‌ನಲ್ಲಿ ತಂಗಿದ್ದು ಕೆಲವೇ ಗಂಟೆ. ಹೀಗಿದ್ದಾಗ ₹ 9 ಲಕ್ಷ ಖರ್ಚಾಗಲು ಹೇಗೆ ಸಾಧ್ಯ. ಇದರಲ್ಲಿ ಅಧಿಕಾರಿಗಳು ಅಕ್ರಮ ಎಸಗಿರುವ ಸಾಧ್ಯತೆಯಿದ್ದು, ವಿಚಾರಣೆ ನಡೆಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. 

ನಾಯ್ಡು ಅವರಿಗೆ ತಾಜ್‌ ವೆಸ್ಟೆಂಡ್‌ ಹೋಟೆಲ್‌ನ ‘ಪ್ರೆಸಿಡೆಂಟ್ ಸ್ಯೂಟ್‌’ ನೀಡಲಾಗಿತ್ತು. ಅವರನ್ನು ಕಾಣಲು ನೆರೆಹೊರೆಯ ಪ್ರದೇಶಗಳಿಂದ ಬಂದಿದ್ದ ಸಚಿವರು ಹಾಗೂ ಮುಖಂಡರಿಗೆ ಬೇರೆ ಬೇರೆ ಕೊಠಡಿ ನೀಡಲಾಗಿತ್ತು ಎಂದು ಆಂಧ್ರ ಸರ್ಕಾರದ ಶಿಷ್ಟಾಚಾರ ವಿಭಾಗದ ನಿರ್ದೇಶಕ ಅಶೋಕ್‌ ಬಾಬು ಹೇಳಿದ್ದಾರೆ.

ಚಂದ್ರಬಾಬು ತಂಗಿದ್ದ ಕೋಣೆಗೆ ದಿನದ ಬಾಡಿಗೆ ₹ 2 ಲಕ್ಷ. ಅಲ್ಲದೆ, ದಿನಕ್ಕೆ ₹ 15,000 ಬಾಡಿಗೆ ಇರುವ ಮೂರು ಕೊಠಡಿಗಳ ಬಿಲ್‌ಗಳನ್ನು ಅವರ ಹೆಸರಿಗೇ ಪಡೆಯಲಾಗಿತ್ತು. ಒಟ್ಟು ಅವರಿಗಾಗಿ ₹ 8.72 ಲಕ್ಷ ಬಿಲ್‌ ಪಾವತಿಸಲಾಗಿತ್ತು ಎಂದು ಆರ್‌ಟಿಐ ಅರ್ಜಿಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರ ಈ ಬಗ್ಗೆ ವಿಚಾರಣೆಗೆ ಆದೇಶಿಸುವ ಸಾಧ್ಯತೆಯಿದೆ. ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ಆಂಧ್ರ ಅಧಿಕಾರಿಗಳು ಮಾತನಾಡಿದ್ದಾರೆ. ಅಲ್ಲದೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಜೊತೆಗೂ ಚರ್ಚಿಸಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆಗೆ ಮುಖ್ಯ ಕಾರ್ಯದರ್ಶಿ ಸಿಗಲಿಲ್ಲ.

ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸರ್ಕಾರದ ಯಾವುದೇ ಸಚಿವರು ಈ ಬಗ್ಗೆ  ಪ್ರತಿಕ್ರಿಯೆ ನೀಡುತ್ತಿಲ್ಲ.

ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಉಳಿದ ನಾಯಕರು ಪ್ರತಿಕ್ರಿಯೆ ನೀಡಿಲ್ಲ. ಸಿಪಿಎಂ ನಾಯಕ ಸೀತಾರಾಂ ಯಚೂರಿ ಮಾತ್ರ, ‘ತಮ್ಮ ವಾಸ್ತವ್ಯಕ್ಕೆ ₹ 64,000 ಖರ್ಚು ಮಾಡಿರುವುದರಿಂದ ಶಾಕ್‌ ಆಗಿದೆ. ಕೊಠಡಿ ಬಿಟ್ಟು ಮತ್ಯಾವ ಸೌಲಭ್ಯವನ್ನು ತಾವು ಬಳಸಿಲ್ಲ’ ಎಂದಿದ್ದಾರೆ.

ಬಿಎಸ್‌‍ಪಿ ನಾಯಕಿ ಮಾಯಾವತಿ ₹ 1,04,550, ಚಿತ್ರ ನಟ ಕಮಲಹಾಸನ್‌ ₹ 40,000, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ₹ 25,000, ಬಿಎಸ್‌ಪಿ ರಾಜ್ಯಸಭಾ ಸದಸ್ಯ ಅಶೋಕ್‌ ಸಿದ್ಧಾರ್ಥ ₹ 9,500 ಹಾಗೂ ಉಳಿದ ಗಣ್ಯರನ್ನು ₹ 15,000 ಬಾಡಿಗೆ ಇರುವ ಕೊಠಡಿಗಳಲ್ಲಿ ಉಳಿಸಲಾಗಿತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲ ಅತಿಥಿಗಳ ಹೋಟೆಲ್‌ ಬಿಲ್‌ ₹ 42 ಲಕ್ಷ ಆಗಿತ್ತು.

ಜೆಡಿಎಸ್‌ ವತಿಯಿಂದ ಹೋಟೆಲ್‌ ಕಾದಿರಿಸಲಾಗಿತ್ತು. ರಾಜ್ಯ ಸರ್ಕಾರ ಬಿಲ್‌ ಪಾವತಿಸಿತ್ತು.     

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !