ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬೆನ್ನಲ್ಲೇ ಸರ್ಕಾರಕ್ಕೆ ಸಂಕಟ?

ರಾಜಕೀಯ ವಲಯದಲ್ಲಿ ದಟ್ಟವಾಗಿ ಹಬ್ಬಿದ ವದಂತಿ
Last Updated 22 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆ ಮುನ್ನವೇ ಕಾಂಗ್ರೆಸ್‌ನ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಆರಂಭವಾಗಲಿದೆ ಎಂಬ ವದಂತಿ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

ರಮೇಶ ಜಾರಕಿಹೊಳಿ (ಗೋಕಾಕ), ಮಹೇಶ್‌ ಕುಮಠಳ್ಳಿ (ಅಥಣಿ), ಬಿ.ನಾಗೇಂದ್ರ (ಬಳ್ಳಾರಿ) ಹಾಗೂ ಉಮೇಶ ಜಾಧವ (ಚಿಂಚೋಳಿ) ಅವರು ಒಂದು ತಿಂಗಳು ಮುಂಬೈಯ ಅಡಗುತಾಣದಲ್ಲಿದ್ದರು. ‘ಆಪರೇಷನ್‌ ಕಮಲ’ದ ಭಾಗವಾಗಿ ಅವರನ್ನು ಅಲ್ಲಿ ಬಿಜೆಪಿ ಇರಿಸಿತ್ತು ಎಂಬ ಸುದ್ದಿ ಹರಡಿತ್ತು. ಮೈತ್ರಿ ಸರ್ಕಾರದ ಬಜೆಟ್‌ ಅಧಿವೇಶನದ ಕೊನೆಯಲ್ಲಿ ಅವರು ರಾಜ್ಯಕ್ಕೆ ಮರಳಿದ್ದರು.

ಬಿ.ನಾಗೇಂದ್ರ ಹಾಗೂ ಮಹೇಶ ಕುಮಠಳ್ಳಿ ಅವರು ಕಾಂಗ್ರೆಸ್‌ ಅಭ್ಯರ್ಥಿಗಳ ಪರ ನೆಪ ಮಾತ್ರಕ್ಕೆ ಪ್ರಚಾರ ನಡೆಸಿದ್ದಾರೆ. ಒಂದು ತಿಂಗಳಿಂದ ಮೌನಕ್ಕೆ ಶರಣಾಗಿದ್ದ ರಮೇಶ ಜಾರಕಿಹೊಳಿ ಅವರು ಮೂರು ದಿನಗಳ ಹಿಂದೆ ಬೆಂಬಲಿಗರ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುವಂತೆ ಸೂಚಿಸಿದ್ದಾರೆ. ‘ರಮೇಶ ಈಗಾಗಲೇ ಪಕ್ಷದಿಂದ ಸಾಕಷ್ಟು ದೂರ ಸರಿದಿದ್ದಾರೆ. ನಮ್ಮ ಪಾಲಿಗೆ ಲೋಕಸಭಾ ಚುನಾವಣೆ ಸೆಮಿಫೈನಲ್‌. ಆರು ತಿಂಗಳಲ್ಲಿ ನಡೆ ಯುವ ಗೋಕಾಕ ಉಪಚುನಾವಣೆ ಫೈನಲ್‌’ ಎಂದು ಅವರ ಸಹೋದರ ಹಾಗೂ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಕಳೆದ ವಾರ ರಾಜ್ಯಕ್ಕೆ ಬಂದಿದ್ದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ರಮೇಶ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ‘ಮತದಾನ ಮುಗಿದ ಕೆಲವೇ ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನ್ನ ಜತೆಗೆ ಕನಿಷ್ಠ ನಾಲ್ವರು ಶಾಸಕರು ಕೈಜೋಡಿಸಲಿದ್ದಾರೆ’ ಎಂದು ರಮೇಶ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

‘ರಮೇಶ, ಉಮೇಶ, ಮಹೇಶ ಹಾಗೂ ನಾಗೇಂದ್ರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರಿಗೆ ದೂರು ಸಲ್ಲಿಸಿದ್ದರು. ಈ ಪೈಕಿ ಉಮೇಶ ಜಾಧವ ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಸಭಾಧ್ಯಕ್ಷರು ಅಂಗೀಕರಿಸಿದ್ದಾರೆ. ‘ಇದೇ ರೀತಿ, ಅತೃಪ್ತ ಶಾಸಕರು ರಾಜೀನಾಮೆ ನೀಡಿದರೆ ಸಭಾಧ್ಯಕ್ಷರು ಅಂಗೀಕರಿಸುವ ವಿಶ್ವಾಸ ಇದೆ’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

‘ಅತೃಪ್ತ ಶಾಸಕರು ಫಲಿತಾಂಶ ಬರುವ ತನಕ ಕಾಯಲು ಸಿದ್ಧರಿಲ್ಲ. ಒಂದೇ ಸಲ ನಾಲ್ಕೈದು ಜನರು ರಾಜೀನಾಮೆ ನೀಡಿದರೆ ಅವರ ಹಾದಿಯನ್ನು ತುಳಿಯಲು ಮತ್ತಷ್ಟು ಶಾಸಕರು ಧೈರ್ಯ ತೋರುತ್ತಾರೆ. ಮತ್ತೆ ನಾಲ್ಕೈದು ಶಾಸಕರಿಂದ ರಾಜೀನಾಮೆ ಕೊಡಿಸಿದರೆ ಸಾಕು. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನವಾಗಲಿದೆ’ ಎಂದು ರಾಜ್ಯ ನಾಯಕರೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

‘ಲೋಕಸಭಾ ಚುನಾವಣೆಗೆ ಮುನ್ನ ಆಪರೇಷನ್‌ ಕಮಲ ಕಾರ್ಯಾಚರಣೆಗೆ ರಾಷ್ಟ್ರೀಯ ನಾಯಕರು ಹೆಚ್ಚಿನ ಉತ್ತೇಜನ ನೀಡಿರಲಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಬಹುದು ಹಾಗೂ ಮೈತ್ರಿ ನಾಯಕರು ಇದನ್ನೇ ಅಸ್ತ್ರವನ್ನಾಗಿ ಬಳಸಬಹುದು ಎಂಬ ಆತಂಕ ಕಾಡಿತ್ತು. ಶಾಸಕರ ಸೆಳೆಯುವ ಕಾರ್ಯಾಚರಣೆಗೆ ರಾಷ್ಟ್ರೀಯ ನಾಯಕರು ಹಸಿರು ನಿಶಾನೆ ತೋರಿದ್ದಾರೆ’ ಎಂದು ಅವರು ಹೇಳಿದರು.

ಏನಾಗಬಹುದು?

ಒಂದು ವೇಳೆ ಚಿಂಚೋಳಿ ಹಾಗೂ ಕುಂದಗೋಳದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಕಮಲ ಪಕ್ಷದ ಸದಸ್ಯರ ಸಂಖ್ಯೆ 106ಕ್ಕೆ ಏರಲಿದೆ. ಮೈತ್ರಿಕೂಟದ ಸಂಖ್ಯೆ 116 ಇರಲಿದೆ.

ಬ್ಯಾಟರಾಯನಪುರದ ಶಾಸಕ ಕೃಷ್ಣ ಬೈರೇಗೌಡ ಬೆಂಗಳೂರು ಉತ್ತರದಲ್ಲಿ ಹಾಗೂ ಬಾಲ್ಕಿ ಶಾಸಕ ಈಶ್ವರ ಖಂಡ್ರೆ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮೈತ್ರಿಕೂಟದ ಬಲ 114ಕ್ಕೆ ಇಳಿಯಲಿದೆ. ಆಗ ಈ ಕ್ಷೇತ್ರಗಳಿಗೆ ಆರು ತಿಂಗಳಲ್ಲಿ ಉಪಚುನಾವಣೆ ನಡೆಸಬೇಕಾಗುತ್ತದೆ.

ಐವರು ಅತೃಪ್ತ ಕಾಂಗ್ರೆಸ್‌ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರೆ ಮೈತ್ರಿಕೂಟದ ಸಂಖ್ಯೆ 109ಕ್ಕೆ ಕುಗ್ಗಲಿದೆ. ಆಗ ವಿಧಾನಸಭೆಯ ಸದಸ್ಯರ ಸಂಖ್ಯೆ 215ಕ್ಕೆ ಇಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT