ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸ್‌ ವಿರುದ್ಧ ಕ್ರಮಕ್ಕೆ ನಿರಾಸಕ್ತಿ?

ನೈಸ್‌ ಗುತ್ತಿಗೆ ರದ್ದುಪಡಿಸಲು ಕಾನೂನಿನಲ್ಲಿ ಅವಕಾಶ: ಹಿಂದಿನ ಎ.ಜಿ ಸಲಹೆ
Last Updated 14 ಅಕ್ಟೋಬರ್ 2018, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆ’ (ಬಿಎಂಐಸಿ) ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ‘ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌’ (ನೈಸ್‌) ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರಾಸಕ್ತಿ ತೋರುತ್ತಿದೆ.

ರಾಜ್ಯ ಸರ್ಕಾರ ಮತ್ತು ನೈಸ್‌ ನಡುವೆ ಏರ್ಪಟ್ಟಿರುವ ಒಪ್ಪಂದದಂತೆ ನಿಗದಿತ ಕಾಲಮಿತಿಯೊಳಗೆ ಕಾಂಕ್ರಿಟ್ ರಸ್ತೆ ನಿರ್ಮಿಸದೆ, ಏಕಪಕ್ಷೀಯವಾಗಿ ಟೋಲ್‌ ಶುಲ್ಕ ಏರಿಸಿದ ನೈಸ್‌ ಕಂಪನಿಯ ಗುತ್ತಿಗೆ ರದ್ದುಪಡಿಸಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಈ ಹಿಂದಿನ ಅಡ್ವೊಕೇಟ್‌ ಜನರಲ್‌ (ಎ.ಜಿ) ಮಧುಸೂದನ ಆರ್‌. ನಾಯಕ್‌ ಸರ್ಕಾರಕ್ಕೆ ಸಲಹೆ ನೀಡಿದ್ದರು.

‘ಬಿಎಂಐಸಿ’ ಯೋಜನೆ ಜಾರಿಗೆ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ನಿರ್ದೇಶನಗಳ ಹಿನ್ನೆಲೆಯಲ್ಲೇ, ವಾಸ್ತವಾಂಶವನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿ, ತಾನೇ ಯೋಜನೆ ಮುಂದುವರಿಸಲು ಅಥವಾ ಬೇರೆ ಕಂಪನಿಗಳೊಂದಿಗೆ ಹೊಸ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲು ಅನುಮತಿ ಕೇಳಬಹುದು ಎಂದು ನಾಯಕ್‌ ಅಭಿಪ್ರಾಯ ಕೊಟ್ಟಿದ್ದರು.

ಅಡ್ವೊಕೇಟ್‌ ಜನರಲ್‌ ಕಚೇರಿಯಿಂದ ಕಳೆದ ಮೇ 14ರಂದು ರವಾನೆಯಾಗಿರುವ ಕಡತ 5 ತಿಂಗಳಿಂದ ಲೋಕೋಪಯೋಗಿ ಇಲಾಖೆಯಲ್ಲಿ ದೂಳು ಹಿಡಿಯುತ್ತಿದೆ. ಇದೊಂದೇ ಅಲ್ಲ, ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿ ನೀಡಿರುವ ವರದಿ, ಬಿಎಂಐಸಿಗೆ ಸಂಬಂಧಿಸಿದ ಕಡತಗಳಿಗೂ ಇದೇ ಸ್ಥಿತಿ ಬಂದೊದಗಿದೆ!

ಏನಿದು ವಿವಾದ: 2017ರ ಜುಲೈ 1ರಿಂದ ಅನಧಿಕೃತವಾಗಿ ಟೋಲ್‌ ಶುಲ್ಕ ಏರಿಸಿರುವ ನೈಸ್‌ ಕ್ರಮ ಪ್ರಶ್ನಿಸಿ ಲೋಕೋ ಪಯೋಗಿ ಇಲಾಖೆ ಅದೇ ತಿಂಗಳ 7ರಂದು ನೋಟಿಸ್‌ ನೀಡಿತ್ತು. ಇದಕ್ಕೆ ನೈಸ್‌ ವಾರದಲ್ಲಿ ಉತ್ತರಿಸಿತ್ತು. ಈ ಬಗ್ಗೆ ಸರ್ಕಾರ (ಪಿಡಬ್ಲ್ಯುಡಿ 50 ಸಿಆರ್‌ಎಂ 2017) ಎ.ಜಿ ಸಲಹೆ ಕೇಳಿತ್ತು.

ಸರ್ಕಾರ ಮತ್ತು ನೈಸ್‌ ಮಧ್ಯೆ 1997ರ ಏಪ್ರಿಲ್‌ 3ರಂದು ಆಗಿರುವ ಒಪ್ಪಂದದಂತೆ ಮೊದಲೆರಡು ಹಂತದ ಟೋಲ್‌ ರಸ್ತೆ ಕಾಮಗಾರಿ ಆರಂಭಿಕ ಹಣ ಹೂಡಿಕೆಯ 8 ವರ್ಷದೊಳಗೇ ಮುಗಿಯಬೇಕಿತ್ತು. 2002ರ ಜೂನ್‌ 4ರಂದು ಸರ್ಕಾರಕ್ಕೆ ಪತ್ರ ಬರೆದ ನೈಸ್‌, 24 ತಿಂಗಳಲ್ಲಿ ಎರಡು ಲೇನ್‌ ಡಾಂಬರ್‌ ರಸ್ತೆ ನಿರ್ಮಿಸಿ, ಟೋಲ್‌ ಸಂಗ್ರಹಣೆಗೆ ಒಪ್ಪಿಗೆ ಕೇಳಿತ್ತು. ಈ ರಸ್ತೆಯನ್ನು ಕಾಲಮಿತಿಗೆ ಮುನ್ನವೇ ನಾಲ್ಕು ಲೇನ್‌ ಕಾಂಕ್ರಿಟ್‌ ರಸ್ತೆಯಾಗಿ ಪರಿವರ್ತಿಸುವುದಾಗಿ ಭರವಸೆ ನೀಡಿತ್ತು. ಅದಕ್ಕೆ ಸರ್ಕಾರ ಸಮ್ಮತಿಸಿತ್ತು.

ಅದರಂತೆ, ‘ಎ’ ವಿಭಾಗದಲ್ಲಿ 62 ಕಿ.ಮೀ. ಉದ್ದದ ನಾಲ್ಕು ಲೇನ್‌ ಕಾಂಕ್ರಿಟ್‌ ರಸ್ತೆ ನಿರ್ಮಾಣ 2012ರ ಮಾರ್ಚ್‌ ಅಂತ್ಯಕ್ಕೆ ಮುಗಿಯಬೇಕಿತ್ತು. ಇದುವರೆಗೆ ಕಂಪನಿ 54.75 ಕಿ.ಮೀ. ಡಾಂಬರ್‌ ರಸ್ತೆ ಮಾತ್ರ ನಿರ್ಮಿಸಿದೆ. ಇದರಲ್ಲಿ 41 ಕಿ.ಮೀ ಪೆರಿಫೆರಲ್‌ ರಸ್ತೆ, 8.75 ಕಿ.ಮೀ. ಸಂಪರ್ಕ ರಸ್ತೆ, 5 ಕಿ.ಮೀ. ಎಕ್ಸ್‌ಪ್ರೆಸ್‌ ರಸ್ತೆ ಸೇರಿದೆ.

ಎಲ್ಲ ಅಂಶಗಳನ್ನು ಪರಿಶೀಲಿಸಿದ ಎ.ಜಿ, ‘ವಿವಾದವನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಮಧ್ಯಸ್ಥಿಕೆಗೂ ಅವಕಾಶವಿದೆ. ಸರ್ಕಾರ ಸಂವಿಧಾನದತ್ತ ಪರಮಾಧಿಕಾರ ಬಳಸಿ, ಯೋಜನೆಯನ್ನು ವಶಪಡಿಸಿಕೊಳ್ಳಲು ಮಸೂದೆ ರೂಪಿಸಬಹುದು. ಈ ಮಸೂದೆಗೆ ರಾಷ್ಟ್ರಪತಿ ಅಂಕಿತ ಬೇಕಾಗುತ್ತದೆ’ ಎಂದಿದ್ದರು. ಇದಕ್ಕೆ ಪೂರಕವಾಗಿ ಸುಪ್ರೀಂಕೋರ್ಟ್‌ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿದ್ದರು.

**

ಮಧ್ಯಸ್ಥಿಕೆ ಎಲ್ಲಿ?

ಬಿಎಂಐಸಿ ಯೋಜನೆ ಸಂಬಂಧದ ಮಧ್ಯಸ್ಥಿಕೆ ಎಲ್ಲಿ ನಡೆಯಬೇಕು ಗೊತ್ತೇ? ಲಂಡನ್‌ನಲ್ಲಿ! ಅದೂ ನ್ಯೂಯಾರ್ಕ್‌ ಕನ್ವೆಷನ್‌ 1998 ಪ್ರಕಾರ!

ರಾಜ್ಯ ಸರ್ಕಾರ ಹಾಗೂ ನೈಸ್‌ ನಡುವೆ ಏರ್ಪಟ್ಟಿರುವ ಒಪ್ಪಂದದಲ್ಲಿ ಈ ಅಂಶ ಅಡಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT