61 ಎಪಿಪಿಗಳ ವಿಚಾರಣೆಗೆ ಅಸ್ತು?

7
ಅಡ್ಡದಾರಿ ಮೂಲಕ ನೇಮಕಗೊಂಡ ಆರೋಪ

61 ಎಪಿಪಿಗಳ ವಿಚಾರಣೆಗೆ ಅಸ್ತು?

Published:
Updated:
Deccan Herald

ಬೆಂಗಳೂರು: ಅಡ್ಡದಾರಿ ಮೂಲಕ ನೇಮಕಗೊಂಡ ಆರೋಪಕ್ಕೆ ಒಳಗಾಗಿರುವ 61 ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ (ಎಪಿಪಿ) ವಿಚಾರಣೆಗೆ ಒಪ್ಪಿಗೆ ನೀಡಬಹುದು ಎಂದು ಕಾನೂನು ಇಲಾಖೆ ಸಲಹೆ ನೀಡಿದೆ. ಇದರಿಂದಾಗಿ ಲೋಕಾಯುಕ್ತ ವಿಚಾರಣೆ ನಡೆಯುವುದು ನಿಶ್ಚಿತವಾಗಿದೆ.

ಅಕ್ರಮವಾಗಿ ನೇಮಕವಾಗಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ಎಪಿಪಿಗಳ ವಿಚಾರಣೆಗೆ ಅನುಮತಿ ನೀಡುವಂತೆ ಆಗಸ್ಟ್‌ನಲ್ಲಿ ಉಪ ಲೋಕಾಯುಕ್ತ ಎನ್‌.ಆನಂದ್‌, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್‌ ಗೋಯಲ್‌ಗೆ ಪತ್ರ ಬರೆದಿದ್ದರು. ಈ ಬಗ್ಗೆ ಕಾನೂನು ಇಲಾಖೆಯ ಸಲಹೆ ಕೇಳಲಾಗಿತ್ತು. ಒಂದೆರಡು ದಿನಗಳಲ್ಲಿ ಲೋಕಾಯುಕ್ತಕ್ಕೆ ಅಧಿಕೃತ ಪತ್ರ ರವಾನೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಪ್ರಾಸಿಕ್ಯೂಷನ್‌ ನಿರ್ದೇಶನಾಲಯದ ನಿವೃತ್ತ ನಿರ್ದೇಶಕ ಚಂದ್ರಶೇಖರ ಹಿರೇಮಠ, ಆಡಳಿತಾಧಿಕಾರಿ ನಾರಾಯಣಸ್ವಾಮಿ ವಿಚಾರಣೆಗೂ ಗೃಹ ಇಲಾಖೆ ಕಳೆದ ತಿಂಗಳು ಒಪ್ಪಿಗೆ ನೀಡಿದೆ.

ಎಡಿಜಿಪಿ ಪತ್ರಕ್ಕೆ ಸಿಗದ ಕಿಮ್ಮತ್ತು: 2013– 14ನೇ ಸಾಲಿನ ಎಪಿಪಿ ನೇಮಕಾತಿ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ವಿಶೇಷ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ‘ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಳಿಕ ಅಂಕಗಳನ್ನು ತಿದ್ದಲಾಗಿದೆ’ ಎಂದು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ದೃಢಪಡಿಸಿತ್ತು.

ಈ ಅಂಶಗಳನ್ನು ಉಲ್ಲೇಖಿಸಿ, ಲೋಕಾಯುಕ್ತ ಎಡಿಜಿಪಿ ಸಂಜಯ್‌ ಸಹಾಯ್‌, ಮಾರ್ಚ್‌ 27ರಿಂದ ಒಂದರ ಹಿಂದೆ ಇನ್ನೊಂದರಂತೆ ನಾಲ್ಕು ಪತ್ರಗಳನ್ನು ಗೃಹ ಇಲಾಖೆಗೆ ಬರೆದಿದ್ದರು. ‘ಪರೀಕ್ಷೆಗಳಲ್ಲಿ ಅಕ್ರಮವೆಸಗಿ ನೇಮಕವಾದವರ ವಿರುದ್ಧ ಶಿಸ್ತುಕ್ರಮ ಕೈಗೊಂಡು ಕ್ರಿಮಿನಲ್‌ ದಾವೆ ಹೂಡುವುದಕ್ಕೆ ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮ 20ರಲ್ಲಿ ಅವಕಾಶವಿದೆ’ ಎಂದು ಹೇಳಿದ್ದರು. ಅವರ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿರಲಿಲ್ಲ.

‘ವಿವಿಧ ನ್ಯಾಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಎಪಿಪಿಗಳನ್ನು ಸಸ್ಪೆಂಡ್‌ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮ 10ರ ಅಡಿ ಅಮಾನತಿಗೆ ಅವಕಾಶವಿಲ್ಲ’ ಎಂದು ಹೇಳಿ ಸರ್ಕಾರ ಹೊಣೆಯಿಂದ ನುಣುಚಿಕೊಂಡಿತ್ತು. ಆನಂತರ, ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರೇ ಗೃಹ ಇಲಾಖೆಗೆ ಪತ್ರ ಬರೆದಿದ್ದರು. 

2012ರಲ್ಲಿ 197 ಎಪಿಪಿಗಳ ನೇಮಕಾತಿಗೆ ಅರ್ಜಿಗಳನ್ನು ಕರೆಯಲಾಗಿತ್ತು. ಇದರಲ್ಲಿ ಅಕ್ರಮ ನಡೆದಿವೆ ಎಂದು ದೂರಿ ತೀರ್ಥಹಳ್ಳಿ ವಕೀಲ ಎಚ್‌.ಟಿ. ರವಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ದೂರು ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತ್ತು.

ಒಟ್ಟು 63 ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. 

‘ತಿದ್ದಿರುವ ಅಂಕಗಳು!’

ಎಪಿಪಿಗಳಾಗಿ ನೇಮಕಗೊಂಡವರು ಬರೆದಿರುವ ಉತ್ತರಗಳು ಅಚ್ಚರಿ ಹುಟ್ಟಿಸುತ್ತವೆ. ದಾವೆ ಕರಡು ಸಿದ್ಧಪಡಿಸುವಂತೆ ಕೇಳಿರುವ ಪ್ರಶ್ನೆಗೆ, ಕೇವಲ ಕೋರ್ಟ್‌ ಹೆಸರು, ಅರ್ಜಿದಾರರು ಮತ್ತು ಪ್ರತಿವಾದಿಗಳ ಹೆಸರನ್ನಷ್ಟೇ ಬರೆದವರಿಗೂ 8 ಅಂಕ ನೀಡಲಾಗಿದೆ!

ಉತ್ತರಗಳಿಗೆ ನೀಡಿರುವ ಅಂಕಗಳನ್ನು ತಿದ್ದಲಾಗಿದೆ. ಎರಡೂವರೆಯನ್ನು ತಿದ್ದಿ ನಾಲ್ಕೂವರೆ ಮಾಡಲಾಗಿದೆ. ಇನ್ನೊಂದೆಡೆ ಎರಡನ್ನು ತಿದ್ದಿ ಏಳೂವರೆ ಮಾಡಲಾಗಿದೆ. ಬಹಳಷ್ಟು ಉತ್ತರ ಪತ್ರಿಕೆಗಳ ಅಂಕಗಳನ್ನು ಇದೇ ರೀತಿ ತಿದ್ದಲಾಗಿದೆ.

ವಿಚಾರಣೆ ಹೇಗೆ ನಡೆಯುತ್ತದೆ?

ಲೋಕಾಯುಕ್ತರು ಎಪಿಪಿಗಳ ವಿಚಾರಣೆಗೆ ಉಪ ರಿಜಿಸ್ಟ್ರಾರ್‌ಗಳನ್ನು ನಿಯೋಜಿಸುತ್ತಾರೆ. ವಿಚಾರಣೆ ನಡೆಸಿ ಅವರು ವರದಿ ಕೊಡುತ್ತಾರೆ. ವರದಿಯನ್ನು ಲೋಕಾಯುಕ್ತರು ಒಪ್ಪಬಹುದು ಅಥವಾ ತಿರಸ್ಕರಿಸಬಹುದು.ವರದಿಯನ್ನು ಲೋಕಾಯುಕ್ತರು ಒಪ್ಪಿಕೊಂಡರೆ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಬಹುದು. ಈ ಶಿಫಾರಸ್ಸನ್ನು ಸರ್ಕಾರ ಒಪ್ಪಬಹುದು ಇಲ್ಲವೆ ತಿರಸ್ಕರಿಸಬಹುದು. ಅಕಸ್ಮಾತ್‌ ತಿರಸ್ಕರಿಸಿದರೆ ರಾಜ್ಯಪಾಲರಿಗೆ ವರದಿ ಕಳುಹಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೇಳಬಹುದು.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !