ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ‘ಹೊಸ ರೂಪ’ ನೀಡಿದ ಶಿಕ್ಷಕ

ನಿಡಗುಂದಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ವಂತ ಖರ್ಚಿನಲ್ಲಿ ಕಾಂಪೌಂಡ್ ನಿರ್ಮಾಣ, ಉದ್ಯಾನ ಅಭಿವೃದ್ಧಿ
Last Updated 15 ಅಕ್ಟೋಬರ್ 2018, 19:16 IST
ಅಕ್ಷರ ಗಾತ್ರ

ಬೆಳಗಾವಿ: ಶಿಕ್ಷಕರು ಮನಸ್ಸು ಮಾಡಿದರೆ ಶಾಲೆಗೆ ಹೊಸ ರೂಪ ನೀಡಬಹುದು, ವಿದ್ಯಾರ್ಥಿಗಳನ್ನು ಆಕರ್ಷಿಸಬಹುದು ಎನ್ನುವುದಕ್ಕೆ ಜಿಲ್ಲೆಯ ರಾಯಬಾಗ ತಾಲ್ಲೂಕು ನಿಡಗುಂದಿಯ ಅಂಬೇಡ್ಕರ್‌ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉದಾಹರಣೆಯಾಗಿದೆ.

ಪ್ರಭಾರ ಮುಖ್ಯ ಶಿಕ್ಷಕ, ಕವಿ ವೀರಣ್ಣ ಮಡಿವಾಳರ ಶಾಲೆಗೆ ಆಕರ್ಷಕ ‘ಬಣ್ಣ’ಗಳನ್ನು ತುಂಬುತ್ತಿದ್ದಾರೆ. ದಸರಾ ರಜೆಯಲ್ಲೂ ಶಾಲೆಯ ಅಂದ ವೃದ್ಧಿಸಲು ಶ್ರಮಿಸುತ್ತಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಅವರು ಸ್ವತಃ ಬಣ್ಣ ಬಳಿದು, ಚಿತ್ರ ಬಿಡಿಸಿ ಶ್ರಮದಾನ ಮಾಡುತ್ತಿದ್ದಾರೆ. ಕಾಂಪೌಂಡ್‌ನ ಗೋಡೆಗಳನ್ನು ಚಿತ್ರಗಳಿಂದ ಅಲಂಕರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು ಸಕಾರಾತ್ಮಕ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ.ಈ ಮೂಲಕ ಊರಿನವರ ಹಾಗೂ ಇಲಾಖೆಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮನವಿಗೆ ಸ್ಪಂದನೆ: ಶಾಲೆ ಅಭಿವೃದ್ಧಿಗೆ ಸಹಕರಿಸುವಂತೆ ಫೇಸ್‌ಬುಕ್‌ನಲ್ಲಿ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಹಲವರು ಕನ್ನಡ ಶಾಲೆಯ ಬೆಳವಣಿಗೆಗೆ ಸಹಕರಿಸಿದ್ದಾರೆ. ಸ್ನೇಹಿತರಾದ ಕೆನಡಾದಲ್ಲಿರುವ ನಾರಾಯಣ ಕೆಂಚರೆಡ್ಡಿ, ದುಬೈನಲ್ಲಿರುವ ರಾಜೇಶ್‌ ಹುಲಗೂರು, ಪೊಲೀಸ್‌ ಇನ್‌ಸ್ಪೆಕ್ಟರ್‌ ರಾಜೇಶ್ ಬಟಗುರ್ಕಿ ತಲಾ ₹ 5 ಸಾವಿರ ಕೊಟ್ಟಿದ್ದಾರೆ. ಇದಲ್ಲದೇ, ಜ್ಯೋತಿ ಗುರುಪ್ರಸಾದ್ ₹ 5,000,ಕವಯಿತ್ರಿ ರೂಪ ಹಾಸನ ₹ 2 ಸಾವಿರ, ಚಂದ್ರಶೇಖರ ವಸ್ತ್ರದ₹ 500, ಭೀಮಣ್ಣ ಹುಣಸೀಕಟ್ಟಿ₹ 300, ಮಹೇಂದ್ರ ಎಸ್. ತೆಳಗರಹಳ್ಳಿ ₹1,000 ಕೊಟ್ಟಿದ್ದಾರೆ. ಅವರೆಲ್ಲರ ಹೆಸರುಗಳನ್ನೂ ಫೇಸ್‌ಬುಕ್‌ನಲ್ಲಿ ಹಾಕಿ ಧನ್ಯವಾದ ತಿಳಿಸಿದ್ದಾರೆ.

ಸುಧಾರಣೆಯ ಹಾದಿ: ‘ನಾನು ಇಲ್ಲಿಗೆ ಬಂದಾಗ ಆವರಣ ಖಾಲಿ ಇತ್ತು. ಅದನ್ನು ಸದ್ಬಳಕೆ ಮಾಡಿಕೊಳ್ಳಲು ನಿರ್ಧರಿಸಿದೆ. ವೈಯಕ್ತಿಕವಾಗಿ ₹ 70 ಸಾವಿರ ಖರ್ಚು ಮಾಡಿ, ಕಾಂಪೌಂಡ್‌ ನಿರ್ಮಿಸಿದೆ; ಉದ್ಯಾನ ಅಭಿವೃದ್ಧಿಪಡಿಸಿದೆ. ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದವರು ಸಹಕರಿಸಿದರು. ಇದರಿಂದಾಗಿ ಶಾಲೆಯಲ್ಲಿ ಕೈತೋಟ ಮೈದಳೆದು ಆಕರ್ಷಿಸುತ್ತಿದೆ. ಶಾಲೆಯು ಮಕ್ಕಳಿಗೆ ಅಕ್ಷರ ಅರಿವಿನ ಜೊತೆಗೆ ಬಾಲ್ಯದ ಸಮೃದ್ಧ ಅನುಭವಗಳನ್ನ ನೀಡಬೇಕು ಎನ್ನುವುದು ನನ್ನ ನಂಬಿಕೆ ಮತ್ತು ಕನಸು. ಇದಕ್ಕಾಗಿ ಶ್ರಮಿಸುತ್ತಿದ್ದೇನೆ’ ಎಂದು ವೀರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಡಗುಂದಿ ಸಿಆರ್‌ಪಿ ಬಿ.ಎನ್. ಹಾದಿಮನಿ ತಮ್ಮ ಮನೆಯ ಕೈತೋಟದಿಂದ ಕೆಲವು ಗಿಡಗಳ ತುಂಡುಗಳನ್ನು ತಂದುಕೊಟ್ಟರು. ಮಕ್ಕಳ ನೆರವಿನೊಂದಿಗೆ ಅವುಗಳನ್ನೂ ನೆಡಲಾಗಿದ್ದು, ನಳನಳಿಸುತ್ತಿವೆ. ಶಾಲೆಯಲ್ಲಿ ನಾವೀನ್ಯತೆಯ ವಾತಾವರಣ ಇದ್ದರೆ ಕಲಿಕೆ ಸುಗಮ ಎನ್ನುವುದು ನನ್ನ ನಂಬಿಕೆ. ಇದಕ್ಕಾಗಿ ಶಾಲೆಯನ್ನು ಮತ್ತಷ್ಟು ಆಕರ್ಷಣೀಯಗೊಳಿಸುವ ಮೂಲಕ ಅರಿವಿನ ಅಕ್ಷಯ ಪಾತ್ರೆಯಾಗಿಸುವ ಆಕಾಂಕ್ಷೆಯೊಂದಿಗೆ ಕೆಲಸ ಪ್ರಾರಂಭಿಸಿದ್ದೇವೆ’ ಎನ್ನುತ್ತಾರೆ ಅವರು.

ಮಕ್ಕಳ ಸಂಖ್ಯೆ ಹೆಚ್ಚಳ: ‘1ರಿಂದ 5ನೇ ತರಗತಿ ಹೊಂದಿರುವ ಇಲ್ಲಿ 2 ವರ್ಷಗಳ ಹಿಂದೆ 76 ಮಕ್ಕಳಿದ್ದರು. ಈಗ, ಮಕ್ಕಳ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಕೆಲವು ಪೋಷಕರು ಮಕ್ಕಳನ್ನು ಕಾನ್ವೆಂಟ್‌ನಿಂದ ಬಿಡಿಸಿ ಇಲ್ಲಿಗೆ ಸೇರಿಸಿದ್ದಾರೆ. ಸುತ್ತಲಿನ ಎಲ್ಲ ಶಾಲೆಗಳಿಗೂ ಈ ಶಾಲೆ ಪೈಪೋಟಿ ನೀಡುತ್ತಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇಲಾಖೆಯಿಂದ ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆ ಇದೆ. ಅದನ್ನೂ ಬಳಸಿಕೊಂಡು ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಪಾಠದ ಹೊರತಾದ ಕೆಲಸಗಳನ್ನು ಆತ್ಮತೃಪ್ತಿಗಾಗಿ ಮಾಡುತ್ತಿದ್ದೇನೆ’ ಎಂದು ಹೇಳಿದರು. ಮೊ:99721 20570.

ನನ್ನ ಪುಸ್ತಕಗಳಿಗೆ ಬಂದ ಪ್ರಶಸ್ತಿ, ಬಹುಮಾನದ ಹಣವನ್ನು ಇಂಥ ಸೇವಾ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದೇನೆ. ಇದು ನನ್ನನ್ನು ಆಂತರಿಕವಾಗಿ ಗಟ್ಟಿಗೊಳಿಸುತ್ತದೆ.
-ವೀರಣ್ಣ ಮಡಿವಾಳರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT