ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಉಳಿಸಿಕೊಳ್ಳಲು ಗೌಡರ ಸಲಹೆ

ಜೆಡಿಎಸ್ ಪಾಳಯದಲ್ಲಿ ಮೂಡಿದ ನಿರುತ್ಸಾಹ
Last Updated 14 ಜುಲೈ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿಸರ್ಕಾರ ಉಳಿಸಿಕೊಳ್ಳಲು ಕೊನೆಯ ಹಂತದವರೆಗೂ ಸಾಧ್ಯವಾದಷ್ಟುಪ್ರಯತ್ನ ಮುಂದುವರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸಲಹೆ ಮಾಡಿದ್ದಾರೆ.

ಪದ್ಮನಾಭನಗರದಲ್ಲಿ ಇರುವ ಗೌಡರ ಮನೆಯಲ್ಲಿ ಭಾನುವಾರ ಸತತ ಮೂರು ಗಂಟೆಗಳ ಕಾಲ ಇಬ್ಬರೂ ಚರ್ಚೆ ನಡೆಸಿದರು. ಸರ್ಕಾರ ಉಳಿಸಲು ಕಾಂಗ್ರೆಸ್ ನಾಯಕರು ನೀಡುತ್ತಿರುವ ಸಹಕಾರ ಸಹ ಪ್ರಮುಖವಾಗಿ ಪ್ರಸ್ತಾಪವಾಗಿದೆ. ಸರ್ಕಾರ ರಕ್ಷಣೆಗೆ ಪಕ್ಷದ ಎಲ್ಲ ನಾಯಕರು ಪ್ರಯತ್ನ ನಡೆಸುತ್ತಿರುವುದರಿಂದ ಅದೇ ದಾರಿಯಲ್ಲಿ ಸಾಗುವಂತೆ ತಿಳಿಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ರಾಜಕೀಯ ಬೆಳವಣಿಗೆ, ವಿಧಾನ ಸಭಾಧ್ಯಕ್ಷರು ಕೈಗೊಳ್ಳಬಹುದಾದ ನಿರ್ಧಾರ, ಸುಪ್ರೀಂಕೋರ್ಟ್‌ನಲ್ಲಿ ಏನೆಲ್ಲ ಆಗಬಹುದು ಎಂಬ ವಿಚಾರಗಳು ಚರ್ಚೆಗೆ ಬಂದಿವೆ. ಕಾಂಗ್ರೆಸ್ ನಾಯಕರ ಸಹಕಾರ ಸ್ಮರಿಸೋಣ. ಒಂದು ವೇಳೆ ಸರ್ಕಾರ ಉಳಿಸಿಕೊಳ್ಳಲು ಆಗದಿದ್ದರೆ ಗೌರವಯುತವಾಗಿ ಹೊರಗೆ ಬರುವಂತೆ ಸಲಹೆ ನೀಡಿದರು ಎನ್ನಲಾಗಿದೆ.

ಇದಕ್ಕೂ ಮುನ್ನ ಗೌಡರ ಜತೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಮಾತುಕತೆ ನಡೆಸಿದರು. ಮನವೊಲಿಸುತ್ತಿದ್ದರೂ ರಾಜೀನಾಮೆ ನೀಡಿರುವ ಶಾಸಕರು ವಾಪಸ್ ಬಾರದಿರುವುದು, ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ಮುಂದುವರಿಸಿರುವುದು, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ತಿಳಿಸಿದ್ದಾರೆ.

ತಗ್ಗಿದ ಉತ್ಸಾಹ: ಜೆಡಿಎಸ್‌ ಶಾಸಕರಲ್ಲಿ ಶನಿವಾರ ಮೂಡಿದ್ದ ಉತ್ಸಾಹ ಭಾನುವಾರ ಕಾಣಲಿಲ್ಲ. ನಂದಿ ಬೆಟ್ಟಕ್ಕೆ ತೆರಳಲು ಸಿದ್ಧರಾಗಿದ್ದವರು, ಕೊನೆಗೆ ರೆಸಾರ್ಟ್‌ನಲ್ಲೇ ಉಳಿದರು.

ಎಂ.ಟಿ.ಬಿ.ನಾಗರಾಜ್ ಮುಂಬೈಗೆ ತೆರಳಿದ್ದು, ಹೋಟೆಲ್‌ನಲ್ಲಿ ತಂಗಿರುವ 12 ಮಂದಿ ಅತೃಪ್ತ ಶಾಸಕರಿಂದ ಒಗ್ಗಟ್ಟು ಪ್ರದರ್ಶನ, ರಾಮಲಿಂಗಾರೆಡ್ಡಿ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿಜೆಡಿಎಸ್ ಪಾಳಯದಲ್ಲಿ ಆತಂಕ ಮನೆಮಾಡಿತ್ತು. ಕ್ಷಣಕ್ಷಣಕ್ಕೂ ರಾಜಕೀಯ ಚಿತ್ರಣ ಬದಲಾಗುತ್ತಿದ್ದು, ಮುಂದೇನಾಗುವುದೊ ಎಂಬ ಲೆಕ್ಕಾಚಾರ ಬಿಟ್ಟರೆ ಬೇರೇನೂ ಕಾಣಲಿಲ್ಲ.

ದೇವೇಗೌಡ ಅವರು ಸಹ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಕುಮಾರಸ್ವಾಮಿಗೆ ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT