ಕೈಕೊಟ್ಟ ಕಳಾಸ್ಕರ್, ಕಂಗಾಲಾದ ಕಾಳೆ!

7
ಮೊದಲ ಬೇಟೆ ಬಳಿಕ ಶುರುವಾಯ್ತು ಆತಂಕ l ರಾತ್ರೋರಾತ್ರಿ ಸತಾರಕ್ಕೆ ಶಸ್ತ್ರಾಸ್ತ್ರ ಸಾಗಣೆ

ಕೈಕೊಟ್ಟ ಕಳಾಸ್ಕರ್, ಕಂಗಾಲಾದ ಕಾಳೆ!

Published:
Updated:

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಮೊದಲ ಬೇಟೆಯಾಡುತ್ತಿದ್ದಂತೆಯೇ ಗಾಬರಿಗೆ ಬಿದ್ದ ಜಾಲದ ಮುಖಂಡರು, ಬೆಳಗಾವಿಯಲ್ಲಿದ್ದ ಪಿಸ್ತೂಲ್ ಹಾಗೂ ಬಾಂಬ್‌ಗಳ ಮೂಟೆಯನ್ನು ಅದೇ ರಾತ್ರಿ ಮಹಾರಾಷ್ಟ್ರಕ್ಕೆ ಸ್ಥಳಾಂತರಿಸುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಗದ್ದೆ ಕೆಲಸದ ನೆಪವೊಡ್ಡಿ ಶರದ್ ಕಳಾಸ್ಕರ್ ಈ ಕೆಲಸದಿಂದ ಹಿಂದೆ ಸರಿದಿದ್ದರಿಂದ ಅಮೋಲ್ ಕಾಳೆಯೇ ರಾತ್ರೋರಾತ್ರಿ ಅವುಗಳನ್ನು ಸತಾರಕ್ಕೆ ಸಾಗಿಸಿದ್ದ..!

ಆರೋಪಿ ಕಳಾಸ್ಕರ್‌ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಈ ಅಂಶಗಳಿದ್ದು, ಹೇಳಿಕೆಯ ಪ್ರತಿ ‘ಪ್ರಜಾವಾಣಿ’ಗೆ ಸಿಕ್ಕಿದೆ. ಬೆಳಗಾವಿಯಿಂದ ಸಾಗಣೆಯಾದ ಶಸ್ತ್ರಾಸ್ತ್ರಗಳು, ‘ಹಿಂದೂ ಗೋವಂಶ್‌ ರಕ್ಷಾ ಸಮಿತಿ’ಯ ವೈಭವ್‌ ರಾವತ್‌ನ ಮನೆಯನ್ನು ಹೇಗೆ ತಲುಪಿದವು ಎಂಬ ವಿವರಗಳೂ ಅದರಲ್ಲಿವೆ. 

ಸತಾರಕ್ಕೆ ಕರೆಸಿಕೊಂಡು ಬೈದರು..: ‘ಕಾಳೆ ಸೂಚನೆಯಂತೆ 2018ರ ಫೆಬ್ರುವರಿಯಲ್ಲಿ ಕೊಲ್ಲಾಪುರಕ್ಕೆ ತೆರಳಿ, ಸುಧಾಕರ್ ಸುತಾರ್ ಎಂಬುವರ ವರ್ಕ್‌ ಶಾಪ್‌ನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಬ್ಯಾರಲ್, ಟ್ರಿಗರ್, ಇನ್‌ಸೈಡ್ ಲಾಕಿಂಗ್‌ ಸೇರಿದಂತೆ ಪಿಸ್ತೂಲಿನ ಬಿಡಿಭಾಗಗಳನ್ನು ಆ ವರ್ಕ್‌ಶಾ‍ಪ್‌ನಲ್ಲೇ ತಯಾರಿಸುತ್ತಿದ್ದೆ. 15 ದಿನಗಳ ಬಳಿಕ ಕೆಲಸ ತೊರೆದು ತವರೂರಾದ ಕೇಶ್ವಾಪುರಿಗೆ ಮರಳಿದೆ. ಈ ಸಂದರ್ಭದಲ್ಲಿ ಪೊಲೀಸರು ನವೀನ್‌ನನ್ನು ಬಂಧಿಸಿರುವ ವಿಚಾರ ಕಿವಿಗೆ ಬಿತ್ತು’ ಎಂದು ಕಳಾಸ್ಕರ್ ವಿವರಿಸಿದ್ದಾನೆ.

‘ನಂತರ ನನಗೆ ಕರೆ ಮಾಡಿದ ಅಮೋಲ್ ಕಾಳೆ, ‘ಬೆಳಗಾವಿಯ ರೂಂನಲ್ಲಿ ಇಡಲಾಗಿರುವ ಶಸ್ತ್ರಾಸ್ತ್ರಗಳಿರುವ ಚೀಲವನ್ನು ಸತಾರಕ್ಕೆ ಶಿಫ್ಟ್ ಮಾಡಬೇಕು ತಕ್ಷಣ ಹೊರಟು ಬಾ’ ಎಂದರು. ನಮ್ಮ ಹೊಲದಲ್ಲಿ ನೀರಾವರಿ ಪೈಪ್ ಹಾಕಿಸುತ್ತಿರುವ ಕಾರಣ ಬರಲು ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದೆ. ಕೊನೆಗೆ, ಕಾಳೆಯೇ ಸುಧನ್ವ ಗೊಂಧಾಳೇ
ಕರ್ ಹಾಗೂ ಮುರಳಿ ಜತೆ ಬೆಳಗಾವಿಗೆ ಹೋಗಿ ರಾತ್ರೋರಾತ್ರಿ ಆ ಚೀಲವನ್ನು ಕೊಂಡೊಯ್ದಿದ್ದರು.
8 ಪಿಸ್ತೂಲ್‌ಗಳು, 50 ಗುಂಡುಗಳು, 4 ಏರ್‌ ಪಿಸ್ತೂಲ್‌ಗಳು ಹಾಗೂ ನಾನೇ ತಯಾರಿಸಿದ್ದ ಬಾಂಬ್‌ಗಳು ಆ ಚೀಲದಲ್ಲಿದ್ದವು.’

‘ಕೆಲ ದಿನಗಳ ನಂತರ ‌ನನ್ನನ್ನು ಸತಾರಕ್ಕೆ ಕರೆಸಿಕೊಂಡ ಕಾಳೆ, ಶಸ್ತ್ರಾಸ್ತ್ರಗಳ ಸ್ಥಳಾಂತರಕ್ಕೆ ಹೋಗದ ವಿಚಾರ ಪ್ರಸ್ತಾಪಿಸಿ ಬೈದರು. ಅಲ್ಲದೇ, ‘ನೀನು ಹೆಚ್ಚು ಧ್ಯಾನ ಮಾಡುವ ಅಗತ್ಯವಿದೆ. ಸ್ವಲ್ಪ ದಿನ ಇಲ್ಲೇ ಇರು’ ಎಂದು ಸತಾರದಲ್ಲೇ ಉಳಿಸಿಕೊಂಡರು. ಅಲ್ಲಿನ ಮನೆಯೊಂದರಲ್ಲೇ ಪಿಸ್ತೂಲ್‌ಗಳ ಸರ್ವಿಸ್ ಮಾಡುತ್ತಿದ್ದೆ.’

‘ಹೀಗಿರುವಾಗ, ಕರ್ನಾಟಕ ಪೊಲೀಸರು ಒಂದೆರಡು ಬಾರಿ ಸತಾರಕ್ಕೂ ಬಂದು ಹೋದರು. ಮತ್ತೆ ಭಯ ಶುರುವಾಯಿತು. ಇದರಿಂದಾಗಿ ಶಸ್ತ್ರಾಸ್ತ್ರಗಳ ಚೀಲವನ್ನು ಸುಧನ್ವನ ಸ್ನೇಹಿತನಾದ ಓಂಕಾರ್ ಡೋಂಗ್ರೆಯ ಮನೆಗೆ ಸಾಗಿಸಿ ಊರಿಗೆ ಮರಳಿದೆ. ಇದರ ಬೆನ್ನಲ್ಲೇ ಕಾಳೆ ಹಾಗೂ ಅಮಿತ್ ದೆಗ್ವೇಕರ್ ಸಹ ಪೊಲೀಸರಿಗೆ ಸಿಕ್ಕಿಬಿದ್ದರು. ಆನಂತರ ನನ್ನ ಮೊಬೈಲ್‌ಗಳು ಹಾಗೂ ಮೂರು ಡೈರಿಗಳನ್ನು ಊರಿನಲ್ಲೇ ಸುಟ್ಟು ಹಾಕಿದೆ.’

‘2018ರ ಜೂನ್‌ನಲ್ಲಿ ಮುಂಬೈಗೆ ತೆರಳಿ ವೈಭವ್ ರಾವತ್ ಅವರೊಟ್ಟಿಗೆ ಸೇರಿದೆ. ಪಿಸ್ತೂಲ್ ಹಾಗೂ ಬಾಂಬ್‌ಗಳನ್ನೂ ನಾಶ ಮಾಡುವಂತೆ ಅಲ್ಲಿನ ವಕೀಲರೊಬ್ಬರು ಸಲಹೆ ಕೊಟ್ಟರು. ಈ ವಿಚಾರವಾಗಿ ಜುಲೈ 23ರಂದು ಚರ್ಚೆ ನಡೆಸಿದೆವು. ಕೃತ್ಯಗಳಿಗೆ ಬಳಸಿರುವ ಪಿಸ್ತೂಲ್‌ಗಳ ಸ್ಲೈಡ್ ಹಾಗೂ ಬ್ಯಾರಲ್‌ಗಳನ್ನು ಪ್ರತ್ಯೇಕಿಸಿ, ಅವುಗಳನ್ನು ಮಾತ್ರ ನಾಶ ಮಾಡೋಣ ಎಂಬ ತೀರ್ಮಾನಕ್ಕೆ ಬಂದೆವು. ಅಂತೆಯೇ ಸ್ಲೈಡ್ ಹಾಗೂ ಬ್ಯಾರಲ್ ಬೇರ್ಪಡಿಸಿದ ಪಿಸ್ತೂಲ್‌ಗಳನ್ನು ನದಿಗೆ ಎಸೆದು, ಉಳಿದವುಗಳನ್ನು ವೈಭವ್ ರಾವತ್ ತೆಗೆದುಕೊಂಡು ಹೋಗಿದ್ದರು’ ಎಂದು ಕಳಾಸ್ಕರ್ ಹೇಳಿದ್ದಾನೆ.

 

ಚೀಟಿಯಲ್ಲಿತ್ತು ಸಂಚಿನ ವಿವರ

‘ಆ.9ರಂದು ನನ್ನನ್ನು ಬಂಧಿಸಿದ್ದ ಮುಂಬೈ ಎಟಿಎಸ್ ಅಧಿಕಾರಿಗಳಿಗೆ, ಜೇಬಿನಲ್ಲಿ ಚೀಟಿ ಸಿಕ್ಕಿತ್ತು. ‘ಸನ್‌ಬರ್ನ್’ ಪಾಶ್ಚಿಮಾತ್ಯ ಕಾರ್ಯಕ್ರಮದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ವಿವರಗಳನ್ನು ಅದರಲ್ಲಿ ಬರೆದಿಟ್ಟಿದ್ದೆ. ಆ ಮಾಹಿತಿಯಿಂದಲೇ ರಾವತ್, ಸುಧನ್ವ ಅವರ ಮನೆಗಳ ಮೇಲೂ ದಾಳಿ ನಡೆಸಿ ಎಲ್ಲ ಶಸ್ತ್ರಾಸ್ತ್ರಗಳನ್ನೂ ಜಪ್ತಿ ಮಾಡಿದರು’ ಎಂದು ಕಳಾಸ್ಕರ್ ಹೇಳಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !