‘ಇನ್ನೂ ನಿಯಮ ರೂಪಿಸಿಲ್ಲ’

7
ಗ್ರಾ.ಪಂ ಅಧ್ಯಕ್ಷ–ಉಪಾಧ್ಯಕ್ಷ ವಿರುದ್ಧದ ಅವಿಶ್ವಾಸ ನಿರ್ಣಯ

‘ಇನ್ನೂ ನಿಯಮ ರೂಪಿಸಿಲ್ಲ’

Published:
Updated:
Deccan Herald

ಬೆಂಗಳೂರು: ‘ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅಕ್ರಮಗಳ ಆರೋಪಗಳಿದ್ದರೆ ಯಾವುದೇ ಸಮಯದಲ್ಲಾದರೂ ಅವಿಶ್ವಾಸ ನಿರ್ಣಯ ಮಂಡಿಸಬಹುದು ಎಂಬ ಅಂಶಕ್ಕೆ ಸಂಬಂಧಿಸಿದಂತೆ, ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸರ್ಕಾರ ಇನ್ನೂ ನಿಯಮ ರೂಪಿಸಿಲ್ಲ. ಹೀಗಾಗಿ ಸದಸ್ಯರು ಸದ್ಯಕ್ಕೆ ಈ ರೀತಿಯ ಅವಿಶ್ವಾಸ ನಿರ್ಣಯಗಳನ್ನು ಮಂಡಿಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

‘ನನ್ನ ವಿರುದ್ಧ ಸಲ್ಲಿಸಲಾಗಿರುವ ಅವಿಶ್ವಾಸ ನಿರ್ಣಯ ಮಂಡನೆ ಸಂಬಂಧ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ನನಗೆ ನೀಡಿರುವ ನೋಟಿಸ್‌ ರದ್ದುಗೊಳಿಸಬೇಕು’ ಎಂದು ಕೋರಿ ಆಲ್ದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪೂರ್ಣಿಮಾ ಸುಧಿನ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ಮಾನ್ಯ ಮಾಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಚಂದ್ರಕಾಂತ ಆರ್. ಗೌಳೆ, ‘30 ತಿಂಗಳ ಅಧಿಕಾರವಧಿ ಒಳಗೆ ಅಧ್ಯಕ್ಷ– ಉಪಾಧ್ಯಕ್ಷರ ವಿರುದ್ಧ ಕೇಳಿಬರುವ ಭ್ರಷ್ಟಾಚಾರ, ಅಧಿಕಾರ ದುರುಪಯೋಗದ ಆರೋಪಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993ರ ಕಲಂ 49 ಉಪ ನಿಯಮ (2)ರ ಅನುಸಾರ ಅವಿಶ್ವಾಸ ಗೊತ್ತುವಳಿ ಮಂಡಿಸಬಹುದು ಎಂಬುದೇನೊ ಸರಿ. ಆದರೆ, ಈ ಕುರಿತಂತೆ ಯಾವ ರೀತಿ ಮುಂದಿನ ಕ್ರಮ ಜರುಗಿಸಬಹುದು ಎಂಬ ಬಗ್ಗೆ ಸರ್ಕಾರ ಇನ್ನೂ ಸೂಕ್ತ ನಿಯಮಗಳನ್ನು ರೂಪಿಸಿಲ್ಲ. ಹೀಗಾಗಿ ನೋಟಿಸ್‌ ಕಾನೂನು ಬಾಹಿರವಾಗಿದೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ, ‘ಅವಿಶ್ವಾಸ ನಿರ್ಣಯ ಕೋರಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿ ನೋಟಿಸ್ ನೀಡಿ ಸಭೆ ಕರೆಯಬೇಕು ಮತ್ತು ಅದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕು. ಸದಸ್ಯರ ಈ ರೀತಿಯ ಕೋರಿಕೆಯನ್ನು ಕ್ರಮ ಜರುಗಿಸದೇ ಕೈಬಿಡಲು ಸಾಧ್ಯವಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ರಾಜ್ಯ  ಸರ್ಕಾರ ಇನ್ನೂ ನಿಯಮಗಳನ್ನು ರೂಪಿಸಿದೇ ಇರುವ ಕಾರಣ ಉಪವಿಭಾಗಾಧಿಕಾರಿ ನೀಡಿರುವ ನೋಟಿಸ್ ಊರ್ಜಿತವಾಗುವುದಿಲ್ಲ. ಅಂತೆಯೇ, ‘30 ತಿಂಗಳ ಅವಧಿ ಪೂರೈಸಿದ ಅಧ್ಯಕ್ಷ–ಉಪಾಧ್ಯಕ್ಷರ ವಿರುದ್ಧ ಮಂಡಿಸುವ ನಿರ್ಣಯದ ಕುರಿತಂತೆ ನೋಟಿಸ್ ನೀಡಲು ಉಪವಿಭಾಗಾಧಿಕಾರಿ ಸ್ವತಂತ್ರರಿದ್ದಾರೆ’ ಎಂಬ ಅಭಿಪ್ರಾಯದೊಂದಿಗೆ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ನೀಡಿದ್ದ ನೋಟಿಸ್ ವಜಾಗೊಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !