ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ ತಾಲ್ಲೂಕಿನ ಬೊಮ್ಮನಕಟ್ಟೆ ಬಳಿ ಕಲ್ಲು ಕ್ವಾರಿಯಲ್ಲಿ ಉಕ್ಕಿದ ಅಂತರ್ಜಲ!

ಪ್ರವಾಸಿ ತಾಣವಾದ ಗಣಿಗಾರಿಕೆಯ ಸ್ಥಳ, ಗುಂಡಿಯಲ್ಲಿ 30 ಅಡಿ ನೀರು ಸಂಗ್ರಹ
Last Updated 27 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಸ್ಫಟಿಕದಂತೆ ಕಾಣುವ ಜಲರಾಶಿ. ತಳದಲ್ಲಿರುವ ಕಲ್ಲುಗಳೂ ಕಾಣುವಷ್ಟು ತಿಳಿನೀರು. ನೀರಿನ ಸುತ್ತ ಮುಗಿಲೆತ್ತರದ ಕಲ್ಲಿನ ಬೆಟ್ಟ ಸಾಲು. ಚಿಕ್ಕದೊಂದು ಸರೋವರದ ದೃಶ್ಯ ನೆನಪಿಸುವ ಸುಂದರ ತಾಣ..’

-ತಾಲ್ಲೂಕಿನ ಬೊಮ್ಮನಕಟ್ಟೆ ಸಮೀಪದ ಬೆಟ್ಟದಲ್ಲಿರುವ ಕಲ್ಲುಕ್ವಾರಿಯ ನಯನಮನೋಹರ ದೃಶ್ಯವಿದು.

ಬೆಟ್ಟದ ಸಮೀಪ ಹತ್ತಾರು ವರ್ಷಗಳಿಂದ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಬೃಹತ್ ಬಂಡೆಗಳನ್ನು ಪುಡಿ ಮಾಡಲಾಗಿದೆ. ಸ್ಫೋಟಿಸಿದ ಜಾಗದಲ್ಲಿ ಬೃಹತ್ ಕಂದಕ ನಿರ್ಮಾಣವಾಗಿದ್ದು, ಅಂತರ್ಜಲ ಉಕ್ಕಿ ಸುಮಾರು 30 ಅಡಿ ನೀರು ಸಂಗ್ರಹ ಆಗಿದೆ. ಬೃಹತ್ ಕಂದಕದಲ್ಲಿ ಸಂಗ್ರಹವಾಗಿರುವ ಶುಭ್ರ ನೀರು ಎಲ್ಲರನ್ನು ಆಕರ್ಷಿಸುತ್ತಿದ್ದು, ಸುಂದರ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

‘ಪಟ್ಟಣದಿಂದ ಕೇವಲ 4 ಕಿ.ಮೀ. ದೂರದ ಈ ತಾಣ ಹೆಚ್ಚು ಜನರಿಗೆ ಪರಿಚಯವಾಗಿಲ್ಲ. ನನ್ನ ಸ್ನೇಹಿತರಿಂದ ಮಾಹಿತಿ ಪಡೆದು ಇಲ್ಲಿಗೆ ಬಂದಿದ್ದೇವೆ. ಇಲ್ಲಿನ ಪ್ರಕೃತಿ ಸೌಂದರ್ಯ ನೋಡಿ ಮನಸೋತಿದ್ದೇವೆ. ಇಲ್ಲಿರುವ ನೀರು ಈಜುಕೊಳದ ನೀರಿನಷ್ಟೇ ಶುಭ್ರವಾಗಿದೆ. ಸ್ನೇಹಿತರೊಂದಿಗೆ ಸಂಜೆಯವರೆಗೂ ಈಜಾಡುತ್ತೇವೆ. ರಾತ್ರಿ ಫೈರ್ ಕ್ಯಾಂಪ್ ಮಾಡಿ ಹೋಗುತ್ತೇವೆ’ ಎನ್ನುತ್ತಾರೆ ಸಯದ್ ಮುಸದ್ದಿಕ್, ಸಲೀಂ, ಇಮ್ರಾನ್ ಬೇಗ್, ಮೆಹ್ತಾಬ್ ಉಲ್ಲಾ ಬೇಗ್.

‘ಈ ಸ್ಥಳದ ವಿಭಿನ್ನ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದೆ. ಅವುಗಳನ್ನು ನೋಡಿದ ನನ್ನ ನಾಲ್ವರು ಸ್ನೇಹಿತರು ದಾವಣಗೆರೆಯಿಂದ ಇಲ್ಲಿಗೆ ಬಂದು ನೋಡಿಕೊಂಡು ಹೋದರು. ಮುಂದೆ ಮತ್ತಷ್ಟು ಸ್ನೇಹಿತರೊಂದಿಗೆ ಬರುವ ಇಚ್ಛೆ ವ್ಯಕ್ತಪಡಿಸಿದರು’ ಎಂದು ಪಟ್ಟಣದ ಯೂಸೂಫ್ ಬೇಗ್, ಹುಸೇನ್ ಬೇಗ್ ಹೇಳುತ್ತಾರೆ.

‘ಕಂದಕದಲ್ಲಿ ಸಂಗ್ರಹವಾಗಿರುವ ನೀರು ಹೊರಗಿನಿಂದ ಹರಿದುಬಂದಿಲ್ಲ. 200 ಅಡಿ ಆಳದವರೆಗೆ ಗಣಿಗಾರಿಕೆ ನಡೆಸಿದ್ದರಿಂದ ಅಂತರ್ಜಲ ಉಕ್ಕಿದೆ. ಭೂಮಿಯಿಂದ ಬಂದಿರುವುದರಿಂದ ನೀರು ಹೆಚ್ಚು ಶುಭ್ರವಾಗಿದೆ. ಇಡೀ ಪ್ರದೇಶ ಕಲ್ಲಿನಿಂದ ಆವರಿಸಿರುವುದರಿಂದ ಎಷ್ಟೇ ಜನ ಈಜಿದರೂ ನೀರು ಮಣ್ಣು ಮಿಶ್ರಿತವಾಗುವುದಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಕರಿಯಾ ನಾಯ್ಕ.

‘ಈ ತಾಣ ಪಟ್ಟಣಕ್ಕೆ ಸಮೀಪವೇ ಇದ್ದು, ರಸ್ತೆ ಸಂಪರ್ಕವೂ ಇದೆ. ಹೊಸದುರ್ಗ ಮಾರ್ಗದಲ್ಲಿ 4 ಕಿ.ಮೀ.ಕ್ರಮಿಸಿದ ನಂತರ ಮುಖ್ಯರಸ್ತೆಯ ಪಕ್ಕದಲ್ಲೇ ಸಿದ್ದರಾಮ ನಗರ ಎಂಬ ನಾಮಫಲಕ ಕಾಣಿಸುತ್ತದೆ. ಅಲ್ಲಿಂದ ಎಡಕ್ಕೆ ತಿರುಗಿ ಗುಡ್ಡದ ಕಡೆ 1 ಕಿ.ಮೀ. ಸಾಗಿದರೆ ಈ ಸ್ಥಳ ತಲುಪಬಹುದು. ತಿಂಡಿ ಪೊಟ್ಟಣಗಳು, ಕವರ್, ನೀರಿನ ಬಾಟೆಲ್‌ಗಳನ್ನು ಎಸೆದು ನೀರನ್ನು ಮಲಿನ ಮಾಡಬಾರದು’ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಹೆಚ್ಚು ಅಪಾಯಕಾರಿ ಸ್ಥಳ !

‘ಈ ಸ್ಥಳ ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಅಪಾಯಕಾರಿಯೂ ಆಗಿದೆ. ಕಂದಕದ ಒಳಗೆ ಸಂಚರಿಸುವಾಗ ಎಚ್ಚರ ವಹಿಸಬೇಕು. ಕಾಲುದಾರಿಯ ಅಂಚಿನಲ್ಲೇ ಆಳವಾದ ನೀರಿದ್ದು, ಜಾರಿ ಬೀಳುವ ಸಾಧ್ಯತೆ ಇದೆ. ಬೈಕ್, ಕಾರುಗಳನ್ನು ಕಂದಕದ ಒಳಗೆ ಚಲಾಯಿಸುವುದೂ ಅಪಾಯಕಾರಿ’ ಎನ್ನುತ್ತಾರೆ ಸ್ಥಳೀಯರು.

‘ಮಕ್ಕಳನ್ನು ನೀರಿನಿಂದ ದೂರದಲ್ಲಿರುವಂತೆ ನೋಡಿಕೊಳ್ಳಬೇಕು. ಪ್ರಪಾತದ ಹತ್ತಿರ ನಿಂತು ಬಗ್ಗಿ ನೋಡಬಾರದು. ನೀರಿನ ತಳದಲ್ಲಿ ಚೂಪಾದ ಕಲ್ಲುಗಳಿದ್ದು, ಈಜುಗಾರರು ಜಾಗರೂಕರಾಗಿರಬೇಕು. ಎತ್ತರದ ಸ್ಥಳದಿಂದ ನೆಗೆಯುವುದು ಅಪಾಯಕಾರಿ’ ಎಂದು ಎಚ್ಚರಿಸುತ್ತಾರೆ

‘ಸಿಡಿಮದ್ದಿನಿಂದ ಸ್ಫೋಟಿಸಿರುವ ಬಂಡೆಗಳು ಸಡಿಲಗೊಂಡಿದ್ದು, ಹತ್ತಿರ ಹೋಗಬಾರದು. ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕಿದೆ. ಕಂದಕದ ಪ್ರವೇಶದ್ವಾರಕ್ಕೆ ಗೇಟ್ ಅಳವಡಿಸಿ, ಸಂಜೆ 6ರ ನಂತರ ಒಳಗೆ ಪ್ರವೇಶಿಸದಂತೆ ನಿರ್ಬಂಧಿಸಬೇಕು’ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಅಂತರ್ಜಲಕ್ಕಿಂತ ಮೇಲ್ಜಲ ಸಂಗ್ರಹ

‘ಚಿತ್ರದುರ್ಗ ಜಿಲ್ಲೆ ಕಲ್ಲುಗುಡ್ಡಗಳ ಪ್ರದೇಶವಾಗಿದ್ದು, ಟೊಳ್ಳುಪದರಗಳನ್ನು ಒಳಗೊಂಡಿದೆ. ನಮ್ಮಲ್ಲಿಅಂತರ್ಜಲಕ್ಕಿಂತ ಮೇಲ್ಜಲ ಸಂಗ್ರಹ ಹೆಚ್ಚಿದೆ. ಈ ಪ್ರದೇಶದ ಪಕ್ಕದ ಗುಡ್ಡದಲ್ಲಿ ಮೇಲ್ಜಲದ ಸಂಗ್ರಹವಿದ್ದು, ಆಳದ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿರುವಾಗ ನೀರು ಒಸರಿರಬಹುದು, ಇಲ್ಲವೇ ಚಿಮ್ಮಿರಬಹುದು’ ಎನ್ನುತ್ತಾರೆ ಜಲತಜ್ಞ ದೇವರಾಜ ರೆಡ್ಡಿ.

ಇಲ್ಲಿ ಸಂಗ್ರಹವಾಗಿರುವ ನೀರು ಪರಿಶುದ್ಧವಾಗಿದ್ದು, ಕುಡಿಯುವ ನೀರಿಗೆ ಬಳಸಬಹುದು. ಗಣಿಗಾರಿಕೆಯನ್ನು ನಿಲ್ಲಿಸಿ ಶಾಶ್ವತ ನೀರಿನ ಮೂಲ ಮಾಡಿಕೊಳ್ಳಬಹುದು. ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎನ್ನುತ್ತಾರೆ ಅವರು.

* ರಜಾ ದಿನಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಇಲ್ಲಿಗೆ ಬಂದು ಹೆಚ್ಚು ಆನಂದಿಸಬಹುದು.

-ಮಹಮದ್ ಜವಾದ್, ಪ್ರವಾಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT