ವಣಿಕ ಸಮುದಾಯಕ್ಕೆ ವರವಾದ ತೆರಿಗೆ ವ್ಯವಸ್ಥೆ

7
ಸಣ್ಣ ಪುಟ್ಟ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ವಾಣಿಜ್ಯೋದ್ಯಮಿಗಳ ವಿಶ್ವಾಸ

ವಣಿಕ ಸಮುದಾಯಕ್ಕೆ ವರವಾದ ತೆರಿಗೆ ವ್ಯವಸ್ಥೆ

Published:
Updated:

ಬೆಂಗಳೂರು: ಅದೇನೇ ಆಗಿರಲಿ. ಹೊಸತು ಎಂದಾಕ್ಷಣ ತುಸು ಆತಂಕ ಇದ್ದೇ ಇರುತ್ತದೆ. ಒಂದು ಸಣ್ಣ ಕಲ್ಲು ಎತ್ತೋಕೆ ಹಿಂದುಮುಂದು ನೋಡುವವನಿಗೆ ಏಕಾಏಕಿ ಬಂಡೆ ಹೊರಲು ಹೇಳಿದರೆ ಹೇಗಾಗಬೇಡ ಹೇಳಿ? ಜಿಎಸ್‌ಟಿ ವಿಷಯದಲ್ಲಿ ಉದ್ಯಮಿಗಳು, ವರ್ತಕರಿಗೆ ಆಗಿದ್ದೂ ಹಾಗೆಯೇ. ವರ್ಷಗಟ್ಟಲೆ ಪುಸ್ತಕ ರೂಪದಲ್ಲಿ ಲೆಕ್ಕಪತ್ರಗಳನ್ನು ಇಡುತ್ತಿದ್ದವರಿಗೆ ಏಕಾಏಕಿ ಎಲ್ಲವೂ ಆನ್‌ಲೈನ್‌ ಎಂದಾಗ ಏನು, ಎತ್ತ ಎಂದು ತಲೆಬುಡವೇ ಅರ್ಥವಾಗಿರಲಿಲ್ಲ.

ದಿನನಿತ್ಯದ ವ್ಯಾಪಾರದ ಕಡೆಗೆ ಗಮನ ನೀಡಬೇಕೆ ಅಥವಾ ರಿಟರ್ನ್‌ ಸಲ್ಲಿಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಕೆ ಎಂದು ಆರಂಭದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದ ಉದ್ಯಮಿಗಳು, ವರ್ತಕರು ಇದೀಗ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ನೋಡುವುದಾದರೆ ವಹಿವಾಟು ನಡೆಸುವುದು ಮೊದಲಿಗಿಂತಲೂ ಹೆಚ್ಚು ಸರಳವಾಗಿದೆ ಎನ್ನುತ್ತಿದ್ದಾರೆ. ಎಲ್ಲವನ್ನೂ ಅರ್ಥಮಾಡಿಕೊಂಡು ಮುನ್ನಡೆಯಲು ಇನ್ನೂ ಎರಡು ವರ್ಷವಾದರೂ ಬೇಕು ಎನ್ನುವುದು ವಾಣಿಜ್ಯೋದ್ಯಮಿಗಳ ಒಟ್ಟಭಿಪ್ರಾಯವಾಗಿದೆ.

‘ಜಿಎಸ್‌ಟಿ ಬಂದಾಗ ಒಂದು ರೀತಿಯಲ್ಲಿ ಬೆಂಕಿ ಬಿದ್ದ ಅನುಭವ. ಶೇ 12, ಶೇ 15, ಶೇ  28ರ ತೆರಿಗೆ ದರಗಳಲ್ಲಿ ಹೆಚ್ಚಿನ ಸರಕುಗಳಿದ್ದವು. ಕ್ರಮೇಣ ತೆರಿಗೆ ದರಗಳನ್ನು ತಗ್ಗಿಸಲಾಗುತ್ತಿದೆ. ಆರಂಭದಲ್ಲಿನ ನಾಲ್ಕೈದು ತಿಂಗಳಿನಲ್ಲಿ ಇದ್ದಷ್ಟು ಸಮಸ್ಯೆಗಳು ಈಗಿಲ್ಲ. ಹೊಸ ತೆರಿಗೆ ವ್ಯವಸ್ಥೆಯು ವ್ಯಾಪಾರಿ ಸಮೂಹಕ್ಕೆ ವರವಾಗಿ ಪರಿಣಮಿಸುತ್ತಿದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಎಫ್‌ಕೆಸಿಸಿಐ) ಅಧ್ಯಕ್ಷ ಸುಧಾಕರ ಶೆಟ್ಟಿ ಅವರು ಹೇಳುತ್ತಾರೆ.

‘17ಕ್ಕೂ ಅಧಿಕ ತೆರಿಗೆಗಳನ್ನು ವಿಲೀನಗೊಳಿಸಿ ಒಂದು ತೆರಿಗೆ ಜಾರಿಗೊಳಿಸಲಾಗಿದೆ. ಇದರಿಂದಾಗಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಈ ಹಿಂದೆ ಆಗುತ್ತಿದ್ದ ಮಾನಸಿಕ ಕಿರುಕುಳ ತಪ್ಪಿದೆ. ಎಲ್ಲವೂ ಆನ್‌ಲೈನ್‌ ಮೂಲಕ ನಡೆಯುತ್ತಿರುವುದರಿಂದ ಯಾರೊಬ್ಬರೂ ಗ್ರಾಹಕರಿಗೆ ಮೋಸ ಮಾಡಲು ಸಾಧ್ಯವಾವುದಿಲ್ಲ’ ಎಂದೂ ಅವರು ಹೇಳುತ್ತಾರೆ.

‘ಜಿಎಸ್‌ಟಿಯಿಂದ ಉತ್ಪಾದನಾ ಚಟುವಟಿಕೆ ಹೆಚ್ಚಾಗಲಿದ್ದು, ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕ್ರಮಬದ್ಧಗೊಳಿಸಲು ಸಾಧ್ಯವಾಗಿದೆ’ ಎಂದು ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಯ (ಬಿಸಿಐಸಿ) ಪರೋಕ್ಷ ತೆರಿಗೆ ತಜ್ಞರ ಸಮಿತಿ ಅಧ್ಯಕ್ಷ ಪಿ.ವಿ. ಶ್ರೀನಿವಾಸನ್‌ ಅಭಿಪ್ರಾಯಪಟ್ಟಿದ್ದಾರೆ.

‘ಹೊಸ ತೆರಿಗೆ ವ್ಯವಸ್ಥೆ ಸ್ಥಿರವಾಗಲು ಇನ್ನೂ ಕೆಲವು ಸಮಯ ಬೇಕಾಗಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹೂಡುವಳಿ ತೆರಿಗೆ ಜಮೆ (ಇಟಿಸಿ), ಮರುಪಾವತಿ ಮತ್ತು ರಿಟರ್ನ್‌ ಸಲ್ಲಿಕೆಯಲ್ಲಿ ಇರುವ ಸಮಸ್ಯೆಗಳು ಶೀಘ್ರವೇ ಬಗೆಹರಿಯುವ ವಿಶ್ವಾಸವಿದೆ’ ಎಂದಿದ್ದಾರೆ. 

‘ಈ ವ್ಯವಸ್ಥೆಯಿಂದ ಸರಕುಗಳ ತಯಾರಕರಿಗೆ ಹೆಚ್ಚಿನ ಅನುಕೂಲವಾಗಿದೆ. ಮರುಪಾವತಿ, ರಿಟರ್ನ್‌ಗೆ ಸಂಬಂಧಿಸಿದಂತೆ ಇನ್ನೂ ಕೆಲವು ಸಮಸ್ಯೆಗಳಿವೆ. ಅವುಗಳು ನಿಧಾನವಾಗಿ ಬರೆಹರಿಯುತ್ತಿವೆ. ಒಟ್ಟಾರೆಯಾಗಿ ಈ ತೆರಿಗೆ ವ್ಯವಸ್ಥೆಯು ಉದ್ಯಮದ ಬೆಳವಣಿಗೆಗೆ ಪೂರಕವಾಗಿದೆ’ ಎಂದು  ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ತೆರಿಗೆ ಸಮಿತಿ ಅಧ್ಯಕ್ಷ ಟಿ.ಎಸ್‌. ಉಮಾಶಂಕರ್‌ ಹೇಳುತ್ತಾರೆ.

‘ಇ–ವೇ ಬಿಲ್‌ಗೆ ಸಂಬಂಧಿಸಿದಂತೆ ಜಾಬ್‌ ವರ್ಕರ್‌ಗೆ ಸಮಸ್ಯೆ ಆಗುತ್ತಿದೆ. ಅವರಿಗೆ ಬಿಲ್‌ ನೀಡುವ ಶಕ್ತಿ ಇರುವುದಿಲ್ಲ. ಹೀಗಾಗಿ ಪೂರೈಕೆದಾರನೇ ಬಿಲ್‌ ಸೃಷ್ಟಿಸುವ ಅವಕಾಶ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ್ದೇವೆ. ಜಿಎಸ್‌ಟಿ ಮಂಡಳಿ ಮತ್ತು ಕೇಂದ್ರ ಸರ್ಕಾರ ಇದಕ್ಕೆ ಹೇಗೆ ಸ್ಪಂದಿಸಲಿದೆ ಎನ್ನುವುದನ್ನು ಎದುರು ನೋಡುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !