ಗಡಿಯಲ್ಲಿ ನಿಲ್ಲಲ್ಲ; ದಾಖಲೆ ಕಿರಿಕಿರಿ ಈಗಿಲ್ಲ!

7
ಚೆಕ್‌ಪೋಸ್ಟ್‌ಗಳೆಲ್ಲ ಈಗ ಮಂಗಮಾಯ – ಕಾಯುವ ತಾಪತ್ರಯ ತಪ್ಪಿದ ಖುಷಿಯಲ್ಲಿ ಚಾಲಕರು

ಗಡಿಯಲ್ಲಿ ನಿಲ್ಲಲ್ಲ; ದಾಖಲೆ ಕಿರಿಕಿರಿ ಈಗಿಲ್ಲ!

Published:
Updated:

ಬೆಂಗಳೂರು: ರಾಜ್ಯದ ಗಡಿಭಾಗಗಳ ಹೆದ್ದಾರಿಗಳಲ್ಲಿ ವರ್ಷದ ಹಿಂದಿನವರೆಗೂ ಕಾಣಸಿಗುತ್ತಿದ್ದ ಲಾರಿಗಳ ಉದ್ದನೆ ಸರದಿ ಈಗಿಲ್ಲ. ಅವುಗಳ ಚಾಲಕರು ಕಾಗದ ಪತ್ರ ಹೊಂದಿಸಿಕೊಂಡು ದಿನಗಟ್ಟಲೆ ಆತಂಕದಿಂದ ಕಾಯುತ್ತಾ ಕೂರುವ ಅಗತ್ಯವೂ ಉಳಿದಿಲ್ಲ. ಏಕೆಂದರೆ, ಹಾಗೆ ಸತಾಯಿಸುತ್ತಿದ್ದ ವಾಣಿಜ್ಯ ತೆರಿಗೆ ಚೆಕ್‌ ಪೋಸ್ಟ್‌ಗಳೇ ಈಗಿಲ್ಲ!

ಚೆಕ್‌ಪೋಸ್ಟ್‌ಗಳೆಲ್ಲ ಛಿದ್ರಗೊಂಡಿದ್ದರಿಂದ ಹೊರಭಾಗದಿಂದ ಸರಕು ಹೊತ್ತು ಬರುವ ಲಾರಿಗಳು ಗಮ್ಯಸ್ಥಾನದತ್ತ ಮುಕ್ತವಾಗಿ ಚಲಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಗಡಿಭಾಗಗಳಲ್ಲಿ ಮಾತಿಗೆ ಸಿಕ್ಕ ಲಾರಿಗಳ ಚಾಲಕರು, ‘ಚೆಕ್‌ಪೋಸ್ಟ್‌ಗಳಲ್ಲಿ ಅನುಭವಿಸುತ್ತಿದ್ದ ಚಿತ್ರಹಿಂಸೆ ವರ್ಷದ ಹಿಂದೆಯೇ ಕೊನೆಗೊಂಡಿದೆ’ ಎಂದು ಹರ್ಷಚಿತ್ತರಾಗಿ ಹೇಳಿದರು. ‘ಕಸ್ಟಮರ್‌ಗಳಿಗೆ ಕೊಟ್ಟ ಟೈಮ್‌ನಲ್ಲೇ ಸರಕು ಸಿಗುತ್ತಿದೆ’ ಎಂದು ಹೆಮ್ಮೆಯಿಂದಲೇ ಹೇಳಿಕೊಂಡರು.

ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಅನುಷ್ಠಾನಕ್ಕೆ ಬಂದಮೇಲೆ ಸರಕು ಸಾಗಾಟದ ಸ್ಥಿತಿ ಹೇಗಿದೆ, ಹಿಂದೆ ಚೆಕ್‌ಪೋಸ್ಟ್‌ಗಳು ಇದ್ದ ಪ್ರದೇಶಗಳಲ್ಲಿ ಈಗಲೂ ಲಾರಿಗಳ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆಯೇ ಎಂಬುದನ್ನು ‘ಪ್ರಜಾವಾಣಿ’ ಖುದ್ದು ಪರಿಶೀಲಿಸಿತು.

ಮಹಾರಾಷ್ಟ್ರ ಗಡಿಯಲ್ಲಿರುವ ನಿಪ್ಪಾಣಿ ತಾಲ್ಲೂಕಿನ ಕೊಗನೋಳಿಯಲ್ಲಿದ್ದ ಅಂತರರಾಜ್ಯ ವಾಣಿಜ್ಯ ತಪಾಸಣಾ ಕೇಂದ್ರ ಪಾಳು ಬಿದ್ದಿದೆ. ಈ ಮಾರ್ಗದಲ್ಲಿ ಈಗಲೂ ನಿತ್ಯ 2,500ಕ್ಕೂ ಹೆಚ್ಚು ಸರಕು ವಾಹನಗಳು ಸಂಚರಿಸುತ್ತವೆ. ಆದರೆ, ಹನುಮನ ಬಾಲದಂತಹ ಉದ್ದನೆಯ ಸಾಲು ಈಗಿಲ್ಲ.

ಅಥಣಿ, ಕಣಕುಂಬಿ, ನಿಪ್ಪಾಣಿ, ಸಿಂದಗಿ, ಸಾವಳಗಿ, ಇಂಡಿ, ಧೂಳಖೇಡ, ಕಾಗವಾಡ, ಬೋರಗಾಂವ, ಯಕ್ಸಂಬಾ‌, ಗದ್ದನಕೇರಿ ಮಾರ್ಗದ ಹೆದ್ದಾರಿಯಲ್ಲಿ ವಿಚಕ್ಷಣಾ ದಳಗಳು ನಿಗಾ ವಹಿಸುತ್ತವೆ. ಲ್ಯಾಪ್‌ಟಾಪ್‌, ಮೊಬೈಲ್‌ ಮೂಲಕ ಇ–ವೇ ಬಿಲ್‌ಗಳ ಪರಿಶೀಲನೆ ನಡೆಯುತ್ತದೆ. ‘ಇಂತಹ ಪರಿಶೀಲನೆಗಳಲ್ಲಿ ಒಂದಿಷ್ಟು ಮಾಮೂಲಿ ಕೊಡುವುದು ಅನಿವಾರ್ಯವಲ್ಲವೇ ಸರ್‌’ ಎಂದು ಕೆಲವು ಚಾಲಕರು ಮರುಪ್ರಶ್ನೆ ಹಾಕಿದರು.

ಕೇರಳಕ್ಕೆ ತೆರಳುವ ಕೊಣನೂರು– ಮಾಕುಟ್ಟ ರಾಜ್ಯ ಹೆದ್ದಾರಿ ಕುಸಿದಿರುವ ಕಾರಣ ಸರಕು ಸಾಗಣೆ ಲಾರಿಗಳ ಸಂಚಾರ ನಿಷೇಧಿಸಲಾಗಿದೆ. ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪರ್ಯಾಯ ಮಾರ್ಗ ಕಲ್ಪಿಸಲಾಗಿದ್ದು, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ ಮಾರ್ಗವಾಗಿ ಕೇರಳಕ್ಕೆ ತೆರಳಬೇಕು.

ಮೈಸೂರಿನಿಂದ ಕೇರಳಕ್ಕೆ ತೆರಳಲು ಒಟ್ಟು ನಾಲ್ಕು ಚೆಕ್‌ಪೋಸ್ಟ್‌ಗಳಿವೆ. ಇಲ್ಲೆಲ್ಲ ಮಾಮೂಲಿ ಕೊಡದಿದ್ದರೆ ಮುಂದಕ್ಕೆ
ಬಿಡುವುದಿಲ್ಲ. ‘ಮಾಮೂಲಿ ಕೊಟ್ಟು ಸಾಕಾಗಿದೆ’ ಎಂದು ಕೇರಳಕ್ಕೆ ಅಕ್ಕಿ ಸಾಗಣೆ ಮಾಡುತ್ತಿದ್ದ ಚಾಲಕ ಅಬೂಬಕರ್ ನೋವು ತೋಡಿಕೊಂಡರು.

ಚಾಮರಾಜನಗರ ತಾಲ್ಲೂಕಿನ ಪುಣಜನೂರು ಮತ್ತು ಗುಂಡ್ಲುಪೇಟೆಯಲ್ಲಿ ಇದ್ದ ಚೆಕ್‌ ಪೋಸ್ಟ್‌ಗಳನ್ನು ಈಗ ತೆರವುಗೊಳಿಸಲಾಗಿದೆ. ‘ತೆರಿಗೆಗೆ ಸಂಬಂಧಿಸಿದ ತಪಾಸಣೆಯ ಕಿರುಕುಳ ಈಗ ಇಲ್ಲ’ ಎಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ. ನಾರಾಯಣ ಪ್ರಸಾದ್ ಹೇಳಿದರು.

ಗೋವಾ ಗಡಿಭಾಗದ ಮಜಲಿ (ಕಾರವಾರ) ಮೂಲಕ ಸರಕು ಸಾಗಿಸುವ ಲಾರಿಗಳ ಚಾಲಕರು ಸಹ ಖುಷಿಯಾಗಿದ್ದಾರೆ.

ಮಿನಿ ಲಾರಿಯ ಚಾಲಕ ನಾಗೇಂದ್ರ, ‘ಅಧಿಕಾರಿಗಳು ಮೊದಲಿನ ಹಾಗೆ ಕಂಡಕಂಡಲ್ಲಿ ವಾಹನವನ್ನು ತಡೆದು ನಿಲ್ಲಿಸುತ್ತಿಲ್ಲ’ ಎಂದು ಹೇಳಿದರು. ಮಡಗಾಂವದಿಂದ ಕಾರವಾರಕ್ಕೆ ಮರದ ಮಂಚ ಹಾಗೂ ಹಾಸಿಗೆಗಳನ್ನು ಸಾಗಿಸುವ ಅವರು, ವಾರದಲ್ಲಿ ಒಂದೆರಡು ಬಾರಿ ರಾಜ್ಯದ ಗಡಿ ದಾಟಿ ಪ್ರಯಾಣಿಸುತ್ತಿರುತ್ತಾರೆ.

ಕೇಂದ್ರ ತೆರಿಗೆ ಮತ್ತು ಅಬಕಾರಿ ಇಲಾಖೆಯ ಕುಮಟಾ ಕಚೇರಿಯ ಸಹಾಯಕ ಆಯುಕ್ತ ಭರತೇಶ್, ‘ಜಿಎಸ್‌ಟಿ ಜಾರಿಯಾದ ಮೇಲೆ ತೆರಿಗೆ ಸಂಗ್ರಹದ ಪ್ರಮಾಣ ಹೆಚ್ಚಿದೆ. ವ್ಯಾಟ್ ಇದ್ದಾಗ ಕುಮಟಾ ವಿಭಾಗದಲ್ಲಿ ತಿಂಗಳಿಗೆ ₹ 1.2 ಕೋಟಿ ಸಂಗ್ರಹವಾಗುತ್ತಿತ್ತು. ಆದರೆ, ಈಗ ಸುಮಾರು ₹2.25 ಕೋಟಿಗೆ ಏರಿಕೆಯಾಗಿದೆ’ ಎಂದು ವಿವರಿಸಿದರು.

ಹೈದರಾಬಾದ್ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಲಿಂಗಸುಗೂರು, ಕಲಬುರ್ಗಿಯ ಆಳಂದ ಮತ್ತು ಹುಮನಾಬಾದ್ ರಸ್ತೆಗಳಲ್ಲಿದ್ದ ಮೂರು ಚೆಕ್‌ ಪೋಸ್ಟ್‌ಗಳನ್ನು ಜಿಎಸ್‌ಟಿ ಜಾರಿಗೂ ಮುನ್ನವೇ ರದ್ದುಪಡಿಸಲಾಗಿದೆ.

‘ವರ್ಷದ ಹಿಂದೆ ರಾಯಚೂರು ಹೊರವಲಯದ ಸಾತ್‌ಮೈಲಿ ಕ್ರಾಸ್‌ನಲ್ಲಿ ಲಾರಿಗಳು ಸರದಿಯಲ್ಲಿ ನಿಂತುಕೊಳ್ಳುತ್ತಿದ್ದವು. ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿ ಪ್ರತಿ ಲಾರಿಯನ್ನು ತಪಾಸಣೆ ಮಾಡಿ ಸರಕು ಮತ್ತು ಬಿಲ್‌ಗಳನ್ನು ಪರಿಶೀಲಿಸುತ್ತಿದ್ದರು. ದಾಖಲೆಗಳಿಲ್ಲದೆ ಸರಕುಗಳನ್ನು ಸಾಗಿಸಿದರೆ ದಂಡ ವಿಧಿಸುತ್ತಿದ್ದರು. ಕೆಲವು ಸಿಬ್ಬಂದಿ ಲಂಚ ಪಡೆಯುತ್ತಿದ್ದರು. ಈಗ ಚಿತ್ರಣ ಸಂಪೂರ್ಣ ಬದಲಾಗಿದೆ’ ಎಂದು ಗದ್ವಾಲ್‌ ಲಾರಿ ಚಾಲಕ ಮುರುಗನ್‌ ಹೇಳಿದರು.

ಮಾಹಿತಿ: ಕೆ.ನರಸಿಂಹಮೂರ್ತಿ, ಮಂಜುನಾಥ ಹೆಬ್ಬಾರ್‌, ಎಂ.ಮಹೇಶ್‌, ಡಿ.ಬಿ. ನಾಗರಾಜು, ಸೂರ್ಯನಾರಾಯಣ ವಿ., ಆದಿತ್ಯ ಕೆ.ಎ., ಸುಭಾಸ ಮಂಗಳೂರ, ಚಿದಂಬರಪ್ರಸಾದ್‌, ಎಂ.ಎಸ್‌. ಸದಾಶಿವ

1. ಕೊಗನೋಳಿ
2. ಧೂಳಖೇಡ
4. ಹುಮ್ನಾಬಾದ್‌
5. ಆಳಂದ ರಸ್ತೆ
6. ಲಿಂಗಸುಗೂರು ರಸ್ತೆ
7. ಬಳ್ಳಾರಿ
8. ದೇವನಹಳ್ಳಿ (ವಿಜಯಪುರ ಕ್ರಾಸ್‌)
9. ಕಟ್ಟಂನಲ್ಲೂರ್‌ ಗೇಟ್‌
10. ವಡ್ಡರಹಳ್ಳಿ
11. ರೈಲ್ವೆ ಗೂಡ್ಸ್‌ಶೆಡ್‌
12. ಅತ್ತಿಬೆಲೆ
13. ವಿಮಾನ ನಿಲ್ದಾಣ
14. ಪುಣಜೂರು
15. ಗುಂಡ್ಲುಪೇಟೆ
16. ಪೆರಂಬಾಡಿ
17. ತೊಕ್ಕೊಟ್ಟು
18. ಮಜಲಿ

ಗಡಿ ರಾಜ್ಯಗಳು
ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ಕೇರಳ

ಇ–ವೇ ಬಿಲ್‌ ಒಂದೇ ಸಾಕು
ಸರಕು ಮತ್ತು ಸೇವೆಗಳ ಮುಕ್ತ ಚಲನೆಗೆ ಈಗ ಅವಕಾಶ ಮಾಡಿಕೊಡಲಾಗಿದೆ. ಸಿ, ಎಚ್‌, ಎಫ್‌, ಇ–1, ಇ–2 ಹೀಗೆ ಶಾಸನಬದ್ಧ ನಮೂನೆಗಳನ್ನು ಹೊಂದಿಸಿಕೊಳ್ಳುವ ಸಂಕಟವನ್ನು ‘ಇ–ವೇ’ ಬಿಲ್‌ ನೀಗಿಸಿದೆ ಎನ್ನುವುದು ಲಾರಿ ಚಾಲಕರ ಅಭಿಮತ. ಇ–ವೇ ಬಿಲ್‌ ಸಂಖ್ಯೆಯಿದ್ದರೂ ಸಾಕು, ಮೊಬೈಲ್‌ ಆ್ಯಪ್‌ ಮೂಲಕ ಪರಿಶೀಲನೆ ಮಾಡಬಹುದು. ಹೀಗಾಗಿ ಕಾಗದಪತ್ರ ಹೊಂದಿಸಿಕೊಂಡು ಹೋಗುವ ಕಿರಿಕಿರಿ ಇಲ್ಲ ಎಂಬ ಖುಷಿ ಅವರಲ್ಲಿದೆ.

ಆಗ ಚೆಕ್‌ಪೋಸ್ಟ್‌; ಈಗ ಪಶು ಚಿಕಿತ್ಸಾಲಯ
ಮಂಗಳೂರಿನ ತಲಪಾಡಿ (ಕೇರಳದ ಗಡಿ) ಸಮೀಪದ ಕೋಟೆಕಾರ್‌ ಬೀರಿಯಲ್ಲಿದ್ದ ಚೆಕ್‌ಪೋಸ್ಟ್‌ ಮುಚ್ಚಿ, ಅಲ್ಲೀಗ ಪಶು ಚಿಕಿತ್ಸಾಲಯ ತೆರೆಯಲಾಗಿದೆ. ಈ ಹಿಂದೆ ಇಲ್ಲಿ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹತ್ತು ಜನ ಸಿಬ್ಬಂದಿಯನ್ನು ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾಯಿಸಲಾಗಿದೆ.

ಕೋಟೆಕಾರ್‌ ಬೀರಿ ಚೆಕ್‌ಪೋಸ್ಟ್‌ನಲ್ಲಿ ನಿತ್ಯ ಸರಾಸರಿ 2 ಸಾವಿರ ಸರಕು ಸಾಗಣೆ ವಾಹನಗಳು ದಾಖಲೆ ಪತ್ರಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿತ್ತು.

‘ಇದುವರೆಗೆ ನಮಗೆ ಯಾವುದೇ ಲೋಪ ಕಂಡು ಬಂದಿಲ್ಲ. ಅದಾಗ್ಯೂ ಕೆಲವು ಬಾರಿ ದೂರುಗಳು ಬಂದಾಗ ಸಂಚಾರ ಜಾಗೃತ ದಳದ ಮೂಲಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ. ಅಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ಜಿಎಸ್‌ಟಿ ಜಾಗೃತದಳದ ಅಧಿಕಾರಿ ಡಿ.ಎಂ.ಸೂರಿ ತಿಳಿಸಿದ್ದಾರೆ.

***

ನಮ್ಮ ಚೆಕ್‌ಪೋಸ್ಟ್‌ಗಳು ಈಗಿಲ್ಲ. ಆರ್‌ಟಿಒ ಹಾಗೂ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಗಳೇ ಬೇರೆ. ಅವುಗಳಿಗೂ ನಮಗೂ ಸಂಬಂಧ ಇಲ್ಲ
– ಸಿ.ಎನ್‌.ಶಿವಪ್ರಕಾಶ್‌, ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ

***

ಮೊದಲು ಎಲ್ಲ ದಾಖಲೆಗಳಿದ್ದರೂ, ವಿನಾಕಾರಣ ಗಂಟೆಗಟ್ಟಲೆ ಕಾಯುವಂತಹ ಸ್ಥಿತಿ ಇತ್ತು. ಇದೀಗ ನಿರಾಳವಾಗಿ ಸಾಗುತ್ತಿದ್ದೇವೆ
–ಶರ್ಫುದ್ದೀನ್‌, ಲಾರಿ ಚಾಲಕ

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !