ಶನಿವಾರ, ಅಕ್ಟೋಬರ್ 19, 2019
27 °C

ಅಭಿವೃದ್ಧಿಗೆ ಪೂರಕವಾಗದ ಜಿಎಸ್‌ಟಿ: ಸಿದ್ದರಾಮಯ್ಯ ಟೀಕೆ

Published:
Updated:
Prajavani

ರಾಯಚೂರು: ‘ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಆರ್ಥಿಕ ಅಭಿವೃದ್ಧಿಗೆ ಪೂರಕವಾಗದೆ ಮಾರಕವಾಗಿದೆ ಎಂಬುದನ್ನು ಉದ್ಯಮಿಗಳು ಹೇಳುತ್ತಿದ್ದಾರೆ. ದೇಶದ ಆರ್ಥಿಕ ಕುಸಿತ ಸರಿಪಡಿಸಲು ಕ್ರಮ ಕೈಗೊಳ್ಳುವ ಪೂರ್ವ ಕೈಗಾರಿಕೋದ್ಯಮಿಗಳ, ವ್ಯಾಪಾರಿಗಳ ಅಭಿಪ್ರಾಯ ಪಡೆಯುವ ಕೆಲಸ ಸರ್ಕಾರ ಮಾಡುತ್ತಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ನೀತಿಗಳನ್ನು ಟೀಕಿಸಿದರು.

ನಗರದ ಎಪಿಎಂಸಿ ಗಂಜ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ 'ಪ್ರಸ್ತುತ ತೆರಿಗೆ ಪದ್ಧತಿ ಹಾಗೂ ವ್ಯಾಪಾರಸ್ಥರ ಮುಂದಿರುವ ಸವಾಲುಗಳು' ಕುರಿತು ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದರು.

‘ಜಿಎಸ್‌ಟಿ ಜಾರಿಗೆ ಆರಂಭದಲ್ಲಿ ಯೋಜಿಸುವಾಗ ಗರಿಷ್ಠ ತೆರಿಗೆ ಮಿತಿ ಶೇ 18 ಇರಬೇಕು ಎಂದಾಗಿತ್ತು. ಸದ್ಯ ಗರಿಷ್ಠ ತೆರಿಗೆ ಮಿತಿ ಶೇ 28 ರವರೆಗೂ ಏರಿಕೆ ಆಗಿದೆ. ಯಾವುದಕ್ಕೆ ತೆರಿಗೆ ಹಾಕಬೇಕು, ಯಾವುದಕ್ಕೆ ಹಾಕಬಾರದು ಎನ್ನುವ ಸಾಮಾನ್ಯಜ್ಞಾನ ಅನ್ವಯ ಮಾಡಿಲ್ಲ. ಅವೈಜ್ಞಾನಿಕ ನಿರ್ಧಾರ ಕೈಗೊಂಡಿದ್ದರಿಂದ ಹಣದುಬ್ಬರ ಹೆಚ್ಚಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಆರ್ಥಿಕ ಸ್ಥಿತಿ ಹದಗೆಡುತ್ತಿದ್ದು, ಕೇಂದ್ರದ ನಾಯಕರು ಆರ್ಥಿಕ ತಜ್ಞರ ಸಲಹೆಗೆ ಮನ್ನಣೆ ಕೊಡುತ್ತಿಲ್ಲ. ಈ ಕಾರಣದಿಂದ ಆರ್‌ಬಿಐ ಇಬ್ಬರು ಗೌರ‍್ನರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೋಗಿದ್ದಾರೆ. ಬ್ಯಾಂಕಿಂಗ್‌ ವ್ಯವಸ್ಥೆ ಅಧೋಗತಿಗೆ ಹೋಗುತ್ತಿದೆ’ ಎಂದರು.

Post Comments (+)