ಬುಧವಾರ, ಡಿಸೆಂಬರ್ 8, 2021
18 °C

ಸ್ವಚ್ಛವಾಯಿತು ವ್ಯವಹಾರ, ಕುಸಿಯಿತು ವ್ಯಾಪಾರ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೂರೂವರೆ ಸಾವಿರ ರೂಪಾಯಿಯ ಬಟ್ಟೆ ಖರೀದಿಸಿದೆ. ಇದಕ್ಕೆ ₹ 420 ರೂಪಾಯಿ ತೆರಿಗೆ ವಿಧಿಸಿದ್ದಾರೆ. ಅಷ್ಟು ಮೊತ್ತದಲ್ಲಿ ನಾವು ಮತ್ತೊಂದು ಜೊತೆ ಬಟ್ಟೆಯನ್ನೇ ಖರೀದಿಸಬಹುದು...’

ನಗರದ ಗಾಂಧಿನಗರದ ಬಟ್ಟೆ ಮಳಿಗೆಯೊಂದರಲ್ಲಿ ಸಿದ್ಧ ಉಡುಪು ಖರೀದಿಸಿದ ಮಹಿಳೆಯೊಬ್ಬರ ಪ್ರತಿಕ್ರಿಯೆ ಇದು. ಜಿಎಸ್‌ಟಿ ಬಗ್ಗೆ ಗೊಣಗುತ್ತಲೇ ಅವರು ಅಂಗಡಿಯಿಂದ ಹೊರ ನಡೆದರು.

‘ನಾವು ಹಿಂದೆ ಗ್ರಾಹಕರಿಗೆ ನೀಡುತ್ತಿದ್ದ ಬಿಲ್‌ನಲ್ಲಿ ತೆರಿಗೆಯ ಮೊತ್ತವನ್ನು ನಮೂದಿಸುತ್ತಿರಲಿಲ್ಲ. ಈಗ ಒಟ್ಟು ಬಿಲ್‌ನಲ್ಲಿ ತೆರಿಗೆಯ ಮೊತ್ತವನ್ನು ನಮೂದಿಸುತ್ತೇವೆ. ಹಾಗಾಗಿ ಗ್ರಾಹಕರು ತಗಾದೆ ತೆಗೆಯುತ್ತಾರೆ. ಅವರನ್ನು ಸಮಾಧಾನಪಡಿಸುವಾಗ ಹೈರಾಣಾಗುತ್ತೇವೆ. ತುಂಬಾ ಗಲಾಟೆ ಮಾಡಿದರೆ ನಾವು ತೆರಿಗೆ ಮೊತ್ತವನ್ನು ಬಿಟ್ಟು ಉಳಿದ ಹಣವನ್ನು ಪಡೆಯುತ್ತೇವೆ. ಇಲ್ಲದಿದ್ದರೆ ಕಾಯಂ ಗಿರಾಕಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಮೆಜೆಸ್ಟಿಕ್‌ ಬಳಿಯ ಬಟ್ಟೆ ಮಳಿಗೆಯೊಂದರ ವ್ಯವಸ್ಥಾಪಕ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇರೆಯವರ ವಿಚಾರ ಗೊತ್ತಿಲ್ಲ. ನಮಗಂತೂ ವ್ಯಾಪಾರ ಕಡಿಮೆ ಆಗುತ್ತಿದೆ. ಜಿಎಸ್‌ಟಿ ಜಾರಿಗಿಂತಲೂ ಹಿಂದಿನ ದಿನಗಳಿಗೆ ಹೋಲಿಸಿದರೆ ವ್ಯಾಪಾರ ಶೇ 30ರಷ್ಟು ಕಡಿಮೆ ಆಗಿದೆ’ ಎನ್ನುತ್ತಾರೆ ಅವರು.

ಜಿಎಸ್‌ಟಿ ಜಾರಿಯಾದ ಆರಂಭದಲ್ಲಿ ಇದ್ದ ತವಕ ತಲ್ಲಣಗಳೆಲ್ಲ ಈಗ ದೂರವಾಗಿದೆ. ಜಿಎಸ್‌ಟಿ ಜಾರಿಯಿಂದ ವ್ಯಾಪಾರದ ಮೇಲೆ ಸ್ವಲ್ಪಮಟ್ಟಿನ ಹೊಡೆತ ಬಿದ್ದಿರುವುದು ನಿಜ. ಆದರೂ ಸ್ವಚ್ಛ ವ್ಯಾಪಾರ ನಡೆಸುತ್ತಿರುವ ಬಗ್ಗೆ ಸಂತೃಪ್ತಿ ಇದೆ ಎಂದು ಕೆಲವು ವ್ಯಾಪಾರಿಗಳು ಅಭಿಪ್ರಾಯಪಟ್ಟರು.

‘ಜಿಎಸ್‌ಟಿ ಜಾರಿಗೊಳಿಸುತ್ತಾರೆ ಎಂಬ ವಿಚಾರ ತಿಳಿದಾಗ ಹೊಸ ವ್ಯವಸ್ಥೆ ಹೇಗಿರುತ್ತದೋ ಎಂಬ ಆತಂಕಗಳಿದ್ದುದು ನಿಜ. ಆರಂಭದಲ್ಲಿ ಬಟ್ಟೆಗಳ ಮೇಲೆ ಶೇ 18ರಷ್ಟು ತೆರಿಗೆ ವಿಧಿಸಲಾಯಿತು. ಆಗ ವ್ಯಾಪಾರಕ್ಕೆ ಸ್ವಲ್ಪ ಹೊಡೆತ ಬಿತ್ತು. ಬಳಿಕ ಅದನ್ನು ಶೇ 12ಕ್ಕೆ ಇಳಿಸಿದರು. ₹ 1 ಸಾವಿರಕ್ಕಿಂತ ಕಡಿಮೆ ಮೊತ್ತದ ಬಟ್ಟೆ ಖರೀದಿಗೆ ಕೇವಲ ಶೇ 5ರಷ್ಟು ತೆರಿಗೆ ಇದೆ. ಈಗ ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಸರಾಗವಾಗಿ ನಡೆದುಕೊಂಡು ಹೋಗುತ್ತಿದೆ’ ಎನ್ನುತ್ತಾರೆ ಚಿಕ್ಕಪೇಟೆ ಖಾದಿ ಭಂಡಾರದ ಮೋಹನ್‌.

‘ನಾವು ಅಂಗಡಿ ನಡೆಸುವುದರ ಜೊತೆಗೆ ಸಗಟು ವ್ಯಾಪಾರದಲ್ಲೂ ತೊಡಗಿಸಿಕೊಂಡಿದ್ದೇವೆ. ಸಣ್ಣ ಪುಟ್ಟ ಅಂಗಡಿಗಳಿಗೆ ಬಟ್ಟೆ ಪೂರೈಸುತ್ತೇವೆ. ಜಿಎಸ್‌ಟಿ ಜಾರಿಗೆ ಮುನ್ನ ಬಟ್ಟೆಗಳಿಗೆ ಶೇ 4.5ರಷ್ಟು ವಾಣಿಜ್ಯ ತೆರಿಗೆ ವಿಧಿಸಲಾಗುತ್ತಿತ್ತು. ಅಂಗಡಿಗಳಿಗೆ ಪೂರೈಸುವ ಬಟ್ಟೆಗಳ ತೆರಿಗೆಯನ್ನೂ ನಾವೇ ಪಾವತಿಸುತ್ತಿದ್ದೆವು. ಈಗ ರಿಟರ್ನ್ಸ್‌ ಪಡೆಯಲು ಅವಕಾಶವಿದೆ. ಹಾಗಾಗಿ ಸಗಟು ವ್ಯಾಪಾರಿಗಳಿಗೆ ಇದರಿಂದ ಪ್ರಯೊಜನವೇ ಆಗಿದೆ’ ಎನ್ನುತ್ತಾರೆ ಗಾಂಧಿನಗರದ ‘ಹಂಸ್‌ ಸಿಲ್ಕ್ಸ್’ನ ಗೋವಿಂದ್‌. 

‘ಈಗ ನಾವು ಮೂರು ತಿಂಗಳಿಗೊಮ್ಮೆ ಇ–ಫೈಲಿಂಗ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ನಾವು ಸ್ವಚ್ಛ ವ್ಯಾಪಾರ ಮಾಡುತ್ತಿದ್ದೇವೆ ಎಂಬ ಹೆಮ್ಮೆ ನಮ್ಮದು. ಆನ್‌ಲೈನ್‌ ಪಾವತಿ ವ್ಯವಸ್ಥೆಯಿಂದ ತೆರಿಗೆ ಪಾವತಿ ಬಹಳಷ್ಟು ಸುಲಭ ಎಂದೆನಿಸುತ್ತದೆ’ ಎಂದು ಅವರು ತಿಳಿಸಿದರು.

ಜ್ಯುವೆಲ್ಲರಿ ವ್ಯಾಪಾರ:

‘ಜಿಎಸ್‌ಟಿಯಿಂದ ಹೆಚ್ಚಿನ ಬದಲಾವಣೆ ಆಗಿಲ್ಲ. ಮೊದಲು ಒಂದೊಂದು ವಿಧದ ಆಭರಣಕ್ಕೆ ಒಂದೊಂದು ರೀತಿ ತೆರಿಗೆ ಹಾಕುತ್ತಿದ್ದೆವು. ಈಗ ಎಲ್ಲಾ ಚಿನ್ನಾಭರಣಕ್ಕೂ ಶೇ 3ರಷ್ಟು ಜಿಎಸ್‌ಟಿ ಹಾಕಬೇಕು. ಮೊದಲು ಬಿಲ್‌ನಲ್ಲಿ ವ್ಯಾಟ್‌ ಎಂದು ನಮೂದಿಸುತ್ತಿದ್ದ ಜಾಗದಲ್ಲಿ ಈಗ ಜಿಎಸ್‌ಟಿ ಬಂದಿದೆ. ಯಾವ ತೆರಿಗೆಯಾದರೂ ಅದನ್ನು ಗ್ರಾಹಕರೇ ತೆರಬೇಕು’ ಎಂದು ನವರತ್ನ ಜ್ಯುವೆಲ್ಲರಿ ಸಿಬ್ಬಂದಿ ಹೇಳಿದರು.

‘ಶೇ 1ರಷ್ಟು ಇದ್ದ ತೆರಿಗೆ ಶೇ 3ಕ್ಕೆ ಏರಿಕೆಯಾಗಿದೆ. ಎಲ್ಲಾ ರಾಜ್ಯದಲ್ಲೂ ಒಂದೇ ಪ್ರಮಾಣದ ತೆರಿಗೆ ಇರುವುದರಿಂದ ಬೇರೆ ರಾಜ್ಯದವರ ಹಾವಳಿ ಕಡಿಮೆಯಾಗಿದೆ’ ಎಂದು ಅವರು ವಿವರಿಸಿದರು.

ಪೂರಕ ಮಾಹಿತಿ: ಶರತ್‌ ಹೆಗ್ಡೆ, ಮಾನಸ ಬಿ.ಆರ್‌.

***

ಮಧ್ಯಮ ವರ್ಗದವರ ಮೇಲೆ ಹೊರೆ’

ಜಿಎಸ್‌ಟಿ ಜಾರಿ ಆದ ಬಳಿಕ ಉಡುಪುಗಳ ಬೆಲೆ ಹೆಚ್ಚಳವಾಗಿದೆ. ಅಂಗಡಿ ಮಾಲೀಕರು ತೆರಿಗೆಯ ಹೊರೆಯನ್ನೆಲ್ಲ ಗ್ರಾಹಕರ ಮೇಲೆ ವರ್ಗಾಯಿಸುತ್ತಿದ್ದಾರೆ. ₹ 1000 ಬಟ್ಟೆ ಖರೀದಿಸಿದರೆ ನಾವು ₹ 120 ತೆರಿಗೆ ಕಟ್ಟಬೇಕು. 

–ಶ್ರುತಿ, ದೇವರ ಚಿಕ್ಕನಹಳ್ಳಿ

***

ವ್ಯವಹಾರದಲ್ಲಿ ವ್ಯತ್ಯಾಸ ಇಲ್ಲ

ಜಿಎಸ್‌ಟಿ ಪೂರ್ವ ಮತ್ತು ನಂತರದ ವ್ಯವಹಾರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಟ್ಯಾಲಿ ತಂತ್ರಾಂಶದ ನೆರವಿನಲ್ಲಿ ಎಲ್ಲ ವಹಿವಾಟುಗಳನ್ನು ದಾಖಲಿಸುತ್ತೇವೆ. ನಮಗೇನೂ ಸಮಸ್ಯೆ ಆಗಿಲ್ಲ.

– ಸಿ.ವಿ.ಮುರಳಿಕೃಷ್ಣ, ಬಾಲಾಜಿ ಬುಕ್ಸ್‌ ಆ್ಯಂಡ್‌ ಸ್ಟೇಷನರೀಸ್‌

 ತಂತ್ರಾಂಶ ಕರಗತವಾಗಿದೆ

ನಮ್ಮದು ಸೇವಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಜಿಎಸ್‌ಟಿ ಶೇ 18ರಷ್ಟು ಕಟ್ಟುತ್ತಿದ್ದೇವೆ. ಅದನ್ನು ಕಡಿಮೆ ಮಾಡುವ ಭರವಸೆಯೂ ಬಂದಿದೆ. ಪ್ರತಿ ಸೇವೆಯ ಬಿಲ್‌ನಲ್ಲಿ ಜಿಎಸ್‌ಟಿ ಮೊತ್ತ ಸೇರಿಸಿಯೇ ಕೊಡುತ್ತೇವೆ

– ಪ್ರಕಾಶ್‌, ಪ್ರಕಾಶ್‌ ಕಲರ್‌ ಲ್ಯಾಬ್‌

 ಏನೂ ಸಮಸ್ಯೆ ಇಲ್ಲ

ಎಲ್ಲವೂ ಬಿಲ್‌ ವ್ಯವಸ್ಥೆಯೊಳಗೆ ಬರುತ್ತಿದೆ. ನಮ್ಮ ವಹಿವಾಟು ವಾರ್ಷಿಕ ₹ 12 ಲಕ್ಷದ ಒಳಗೆ ಬರುತ್ತಿದೆ. ನಾವು ತೋರಿಸುವ ವಹಿವಾಟಿನ ಮೇಲೆ ಶೇ 1ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ನಮಗೇನೂ ಸಮಸ್ಯೆ ಆಗಿಲ್ಲ.

– ಕುಮಾರ್‌ ಸಿ. ಕ್ರೋನ್‌ ಆಪ್ಟಿಕ್ಸ್‌

ಬಿಲ್‌ ರಹಿತ ವ್ಯವಹಾರವಿಲ್ಲ

ಜಿಎಸ್‌ಟಿ ವ್ಯವಸ್ಥೆಯಿಂದ ಮುಂದಿನ ದಿನಗಳಲ್ಲಿ ದೇಶಕ್ಕೆ ಬಹಳ ಅನುಕೂಲವಿದೆ. ಸದ್ಯ ದೇಶದ ಅರ್ಥ ವ್ಯವಸ್ಥೆಯೇ ಕುಸಿದ ಕಾರಣ ವಹಿವಾಟು ಇಳಿಮುಖವಾಗಿದೆ. ಹಾಗೆಂದು ಇದಕ್ಕೆಲ್ಲಾ ಜಿಎಸ್‌ಟಿ ಕಾರಣ ಅಲ್ಲ.  ಬಿಲ್‌ ರಹಿತ ವಹಿವಾಟು ಸಾಧ್ಯವೇ ಇಲ್ಲ.

– ಪ್ರತಾಪ್‌ ಸಿಂಗ್‌ ಚೌಹಾಣ್‌, ಪ್ರಿನ್ಸ್‌ ಕಲೆಕ್ಷನ್‌ (ಬಟ್ಟೆ ವ್ಯಾಪಾರಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು