ಸ್ವಪಕ್ಷೀಯರ ವಿರುದ್ಧವೇ ಜಿಟಿಡಿ ಮುನಿಸು

ಶುಕ್ರವಾರ, ಏಪ್ರಿಲ್ 19, 2019
27 °C
ಸಚಿವ ಸಾ.ರಾ.ಮಹೇಶ್‌ ವಿರುದ್ಧ ಬಹಿರಂಗ ಅಸಮಾಧಾನ

ಸ್ವಪಕ್ಷೀಯರ ವಿರುದ್ಧವೇ ಜಿಟಿಡಿ ಮುನಿಸು

Published:
Updated:
Prajavani

ಮೈಸೂರು: ಬಯಸಿದ ಖಾತೆ ಸಿಗದಿರುವುದು, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಯಲ್ಲಿ ಮಾತು ನಡೆಯದಿರುವುದು, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಸ್ತಕ್ಷೇಪದಿಂದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಸ್ವಪಕ್ಷ ಜೆಡಿಎಸ್‌ ವಿರುದ್ಧವೇ ಅಸಮಾಧಾನಗೊಂಡಿದ್ದಾರೆ. ಈ ಕೋಪವನ್ನು ಚುನಾವಣೆ ಮೇಲೆ ತೋರಿಸುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅವರು ಮೈಸೂರು– ಕೊಡಗು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ನಾಮಪತ್ರ ಸಲ್ಲಿಸುವಾಗಲೂ ಕಾಣಿಸಿಕೊಂಡಿರಲಿಲ್ಲ. ಆ ಬಳಿಕವೂ ಕ್ಷೇತ್ರದಲ್ಲಿ ಪ್ರಚಾರಕ್ಕೆ ಮುಂದಾಗಿಲ್ಲ.

ತಮ್ಮ ರಾಜಕೀಯ ವಿರೋಧಿ ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಕೋಪ ಪ್ರವಾಸೋದ್ಯಮ ಸಚಿವ, ತಮ್ಮದೇ ಪಕ್ಷದ ಮುಖಂಡ ಸಾ.ರಾ.ಮಹೇಶ್‌ ಮೇಲೆ ಇದ್ದಂತೆ ಕಾಣುತ್ತಿದೆ. ಚುನಾವಣಾ ನೆಪದಲ್ಲಿ ಆ ಸಿಟ್ಟನ್ನು ಬಹಿರಂಗವಾಗಿ ಹೊರಹಾಕಿದ್ದಾರೆ. ವರಿಷ್ಠರ ವಿರುದ್ಧವೂ ಸಿಡಿಮಿಡಿಗೊಂಡಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ), ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಸ್ಥಾನಗಳು ಸಾ.ರಾ.ಮಹೇಶ್ ಆಪ್ತರಿಗೆ ಸಿಕ್ಕಿರುವುದು, ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ತಮ್ಮ ಮಾತು ನಡೆಯದಿರುವುದು, ತಮಗಿಂತ ಮಹೇಶ್ ಮಾತಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಚ್ಚು ಮನ್ನಣೆ ನೀಡುತ್ತಿರುವುದು ಅಸಮಾಧಾನವನ್ನು ಹೆಚ್ಚಿಸಿದೆ.

ಜೊತೆಗೆ ಉನ್ನತ ಶಿಕ್ಷಣ ಖಾತೆ ಬಿಟ್ಟು ಬೇರೊಂದು ಖಾತೆ ನೀಡುವಂತೆ ಕೇಳಿಕೊಂಡರೂ ಸ್ಪಂದಿಸದಿರುವುದು ಈ ಕೋಪಕ್ಕೆ ಕಾರಣ ಎಂಬುದು ಜೆಡಿಎಸ್‌ನ ಸ್ಥಳೀಯ ಮುಖಂಡರ ವಿಶ್ಲೇಷಣೆ. ನಾಮಪತ್ರ ಸಲ್ಲಿಕೆ ಹಾಗೂ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಗಳಲ್ಲಿ ಸಾ.ರಾ.ಮಹೇಶ್‌ ಪಾಲ್ಗೊಂಡಿದ್ದರು. ಆದರೆ, ಚರ್ಚೆಯಾಗಿರುವ ವಿಚಾರಗಳನ್ನು ಅವರು ತಮ್ಮ ಗಮನಕ್ಕೆ ತರುತ್ತಿಲ್ಲ. ಪ್ರಚಾರದ ಭಿತ್ತಿಪತ್ರಗಳಲ್ಲಿ ಭಾವಚಿತ್ರ ಹಾಕಿಲ್ಲ ಎಂಬ ನೋವನ್ನು ಹೊರಹಾಕಿದ್ದಾರೆ.

‘ಮೈತ್ರಿ ಅಭ್ಯರ್ಥಿ ಆಯ್ಕೆ ಸಂಬಂಧ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್‌ ಶಾಸಕರನ್ನು ಸೇರಿಸಿ ಸಭೆ ನಡೆಸಬೇಕಿತ್ತು. ಜೊತೆಗೂಡಿ ಚುನಾವಣಾ ಪ್ರಚಾರ ನಡೆಸುವ ಸಂಬಂಧ ಚರ್ಚಿಸಬೇಕಿತ್ತು. ಆದರೆ, ನನ್ನನ್ನು ಆಹ್ವಾನಿಸಿಯೇ ಇಲ್ಲ. ಸಿದ್ದರಾಮಯ್ಯ– ಸಾ.ರಾ.ಮಹೇಶ್‌ ಏನು ತೀರ್ಮಾನ ಕೈಗೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಸಚಿವರು ನನಗೆ ಮಾಹಿತಿ ನೀಡಿಲ್ಲ’ ಎಂದು ಜಿ.ಟಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಬರುವಂತೆ ಸಾ.ರಾ.ಮಹೇಶ್‌ ದೂರವಾಣಿಯಲ್ಲಿ ಆಹ್ವಾನ ನೀಡಿದ್ದಾರೆ. ‘ನಾಮಪತ್ರ ಸಲ್ಲಿಸುವ ಸಮಯದಲ್ಲಿ ನಾವಿಬ್ಬರೂ ಹಾಜರಿರುವಂತೆ ಎಚ್.ಡಿ.ದೇವೇಗೌಡರು ಸೂಚಿಸಿದ್ದಾರೆ. ತಾವೆಲ್ಲಿದ್ದೀರಿ, ಬನ್ನಿ’ ಎಂದೂ ಕರೆದಿದ್ದಾರೆ. ‘ನನಗೆ ಆಹ್ವಾನ ಇಲ್ಲದಿರುವುದರಿಂದ ಬರುವುದಿಲ್ಲ, ಇಂಥ ಸಂದರ್ಭದಲ್ಲಿ ವರಿಷ್ಠರು ಹೇಳಿದರೂ ಹೋಗಲ್ಲ’ ಎಂದು ಜಿ.ಟಿ.ದೇವೇಗೌಡ ಖಡಕ್‌ ಆಗಿ ಹೇಳಿದ್ದಾರೆ.

ಪ್ರಚಾರಕ್ಕೆ ಬರುವಂತೆ ಸಚಿವರ ನಿವಾಸಕ್ಕೆ ತೆರಳಿ ಮೈತ್ರಿ ಅಭ್ಯರ್ಥಿ ವಿಜಯಶಂಕರ್‌, ಶಾಸಕ ತನ್ವೀರ್‌ ಸೇಠ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌ ಕೂಡ ಆಹ್ವಾನಿಸಿದ್ದಾರೆ. ‘ನೋಡೋಣ’ ಎಂದು ಹೇಳಿ ಕಳುಹಿಸಿದ್ದಾರೆ.

**

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಸಂಬಂಧ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಏನು ಚರ್ಚೆ ನಡೆದಿದೆ ಎಂದು ಸಾ.ರಾ.ಮಹೇಶ್‌ ಕೂಡ ನನಗೆ ಹೇಳಿಲ್ಲ
– ಜಿ.ಟಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ, ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !