ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಯೋಚಿಸಿ ಮಾತನಾಡಲಿ: ಜಿ.ಟಿ.ದೇವೇಗೌಡ

ಕೊನೆ ಕ್ಷಣದಲ್ಲಿ ಸ್ಪರ್ಧಿಸಿದ್ದೂ ಎಚ್.ವಿಶ್ವನಾಥ್ ಸೋಲಿಗೆ ಕಾರಣ ಎಂದ ಜಿಟಿಡಿ
Last Updated 11 ಡಿಸೆಂಬರ್ 2019, 6:39 IST
ಅಕ್ಷರ ಗಾತ್ರ

ಮೈಸೂರು:ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇನ್ನಾದರೂ ಮಾತಿನ ಮೇಲೆ ಹಾಗೂ ಟ್ವೀಟ್ ಮೇಲೆ ನಿಗಾ ವಹಿಸಬೇಕು. ಯೋಚಿಸಿ ಮಾತನಾಡಬೇಕು ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಇಲ್ಲಿನ ಜಯಪುರ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಅವರಿಗಿದ್ದ ಅಭಿಮಾನಿಗಳು ಬೇರೆ ಯಾವ ಮುಖ್ಯಮಂತ್ರಿಗೂ ಇರಲಿಲ್ಲ. ಅವರ ಮಾತುಗಳಿಂದ ಅಭಿಮಾನಿಗಳಿಗೆ ನೋವಾಗಿದೆ. ಯೋಚಿಸಿ ಮಾತನಾಡುವ ಕಾಲ ಈಗ ಒದಗಿ ಬಂದಿದೆ’ ಎಂದು ಹೇಳಿದರು.

ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಹಾಗಾಗಿ ತಟಸ್ಥನಾಗಿರುತ್ತೇನೆ ಎಂದು ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಬಳಿ ಜುಲೈ 23ರಂದೇ ಹೇಳಿದ್ದೆ. ಈ ರೀತಿ ನೇರವಾಗಿ ಹೇಳಿರುವಾಗ ಪಕ್ಷಕ್ಕೆ ದ್ರೋಹ ಬಗೆದಿದ್ದೇನೆ ಎಂದು ಆರೋಪಿಸುವುದು ಸರಿ ಅಲ್ಲ ಎಂದರು.

ನನ್ನ ಪುತ್ರ ಹರೀಶ್ ಗೌಡ ಸ್ವತಂತ್ರ. ಆತ ಯಾವ ಪಕ್ಷಕ್ಕೂ ಸೇರಿಲ್ಲ‌. ಆತ ಕಾಂಗ್ರೆಸ್ ಪರ ಕೆಲಸ ಮಾಡಿರಬಹುದು. ಅದು ತಪ್ಪು ಎಂದು ಹೇಗೆ ಹೇಳುವುದು ಎಂದು ಅವರು ಪ್ರಶ್ನಿಸಿದರು.

ಸಿ‌.ಪಿ‌.ಯೋಗೇಶ್ವರ್ ಪ್ರಚಾರದ ವೇಳೆ ಹೇಳಿದ ಮಾತುಗಳು ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು. ಸ್ಥಳೀಯ ಮುಖಂಡರನ್ನು ಅವಹೇಳನ ಮಾಡಿ ಮಾತನಾಡಿದ್ದು ಜನರನ್ನು ಕೆರಳಿಸಿತು. ವಿಶ್ವನಾಥ್ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

‘ರಾಜ್ಯ ರಾಜಕಾರಣವೇ ಬೇರೆ ಮೈಸೂರಿನ ರಾಜಕಾರಣವೇ ಬೇರೆ’

ರಾಜ್ಯ ರಾಜಕಾರಣವೆ ಬೇರೆ ಮೈಸೂರಿನ ರಾಜಕಾರಣವೇ ಬೇರೆ ಎಂದೂ ಜಿ.ಟಿ.ದೇವೇಗೌಡ ವಿಶ್ಲೇಷಿಸಿದರು. ಸಂಬಂಧವೇ ಇಲ್ಲದ ಕ್ಷೇತ್ರಕ್ಕೆ ಬಂದು ಕುಕ್ಕರ್, ಸೀರೆ ಹಾಗೂ ಒಕ್ಕಲಿಗರ ಸಂಘಕ್ಕೆ ₹ 5ಕೋಟಿ ಆಮಿಷ ತೋರಿಸಿ ಗೆದ್ದುಬಿಡಬಹುದು ಎಂದು ಯೋಚಿಸುವುದು ಭ್ರಮೆ ಎಂದು ಅವರು ಹೇಳಿದರು.

ಬಿಜೆಪಿ‌ ಸೇರುವ ವಿಚಾರವನ್ನು ವಿಶ್ವನಾಥ್ ನನ್ನೊಡನೆ ಚರ್ಚಿಸಿರಲಿಲ್ಲ.‌ ಅವರು ವಿಧಾನ ಪರಿಷತ್ ಸದಸ್ಯರಾಗಿ ಮಂತ್ರಿಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರು. ಇದೂ ಅವರ ಸೋಲಿಗೆ ಕಾರಣವಾಯಿತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT