ಬುಧವಾರ, ಜನವರಿ 29, 2020
30 °C

ಜೆಡಿಎಸ್‌ ಅಭ್ಯರ್ಥಿ ಹಾಕಬಾರದಿತ್ತು: ಜಿ.ಟಿ.ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ವಿರುದ್ಧ ಡಿಎಂಕೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ರೀತಿಯಲ್ಲಿ, ರಾಜ್ಯದಲ್ಲಿ ಈಚೆಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ ಸಹ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಾರದಿತ್ತು ಎಂದು ಪಕ್ಷದ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಇಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೋಗುವವರು ಹೋಗುತ್ತಾರೆ, ಆರಾಮವಾಗಿ ಇರಬೇಕಾಗಿತ್ತು. ಏನೂ ಆಗುತ್ತಿರಲಿಲ್ಲ’ ಎಂದರು.

‘ಸರ್ಕಾರ ಉಳಿಸುವ ಬಗ್ಗೆ ನಮ್ಮ ನಾಯಕರೇ ಹೇಳುತ್ತಿದ್ದರು, ಜನರೂ ಅದರ ಪ್ರಕಾರ ಮತ ಹಾಕಿದ್ದಾರೆ, ರಾಜ್ಯದ ಜನ ಬುದ್ಧಿವಂತರಿದ್ದಾರೆ. ಸುಭದ್ರ ಸರ್ಕಾರ ಬೇಕು ಅಂತ ಬಯಸಿದ್ದಾರೆ. ಯಡಿಯೂರಪ್ಪ ಕೆಲಸ ಮಾಡುತ್ತಾರೆ, ಹೀಗಾಗಿ ಅವರೇ ಮುಂದಿನ ಮೂರೂವರೆ ವರ್ಷ ಅಧಿಕಾರ ನಡೆಸಲಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಎಲ್ಲಾ ಒಂದೇ ಪಕ್ಷ ಮಾಡಿಕೊಂಡರೆ ಅಭಿವೃದ್ಧಿಆಗುವುದಿಲ್ಲ. ಮೂರೂವರೆ ವರ್ಷ ಆಡಳಿತ ಪಕ್ಷಕ್ಕೆ ಬೆಂಬಲ ಕೊಡಬೇಕಿದೆ. ಯಡಿಯೂರಪ್ಪ ಅಭಿವೃದ್ಧಿ ಅಂತಿದ್ದಾರೆ. ಅದು ಈಡೇರಬೇಕಾದರೆ ಆಡಳಿತ–ವಿರೋಧ ಪಕ್ಷ ಒಟ್ಟಾಗಿ ಕೆಲಸ ಮಾಡಬೇಕು’ ಎಂದರು.

ಮೂರು ವರ್ಷದ ನಂತರ ನಿರ್ಧಾರ: ‘ರಾಜ್ಯದಲ್ಲಿ ಮೂರು ವರ್ಷದ ನಂತರ, ಮುಂದಿನ ಚುನಾವಣೆಯಲ್ಲಿ ರಾಜಕೀಯ ಧ್ರುವೀಕರಣ ನಡೆಯಬಹುದು. ಆಗ ಯಾವ ಪಕ್ಷದಲ್ಲಿ ಯಾರು ಇರುತ್ತಾರೆ, ಹೋಗುತ್ತಾರೆ ಎಂಬುದು ಗೊತ್ತಾಗುತ್ತದೆ. ನಾನು ಈಗ ಜೆಡಿಎಸ್‌ನಲ್ಲಿ ಇದ್ದೇನೆ. ಮೂರು ವರ್ಷದ ನಂತರ ರಾಜಕೀಯ ಯಾವ ದಿಕ್ಕಿಗೆ ತಿರುಗುತ್ತದೋ ಆಗ ನಿರ್ಧಾರಕ್ಕೆ ಬರುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದರು.

‘ನನ್ನ ಮಗ ಹರೀಶ್ ಯಾವ ಪಕ್ಷಕ್ಕೂ ಸೇರಿಲ್ಲ. ಸಿ.ಪಿ.ಯೋಗೇಶ್ವರ್‌ ಏಕವಚನದಲ್ಲಿ ಮಾತಾಡಿದ್ದಾರೆ. ಒಕ್ಕಲಿಗರು ಹೆಚ್ಚಾಗಿರುವ ಊರಿಗೆ ಹೋಗಿ ಯಾರವನು ಜಿಟಿಡಿ, ದೇವೇಗೌಡ ಯಾರು ಅಂತ ಮಾತಾಡಿದ್ದಾರೆ. ಅಲ್ಲಿಯ ಜನ ಅವರು ಕೊಟ್ಟ ಸೀರೆ ಬೀದಿಗೆ ಎಸೆದು ಸಿಡಿದೆದ್ದಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು