7

ಗೌರಿ ಹತ್ಯೆ: ಆರೋಪಿ ಜಾಮೀನು ಅರ್ಜಿ ವಜಾ

Published:
Updated:

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ. ನವೀನ್‌ಕುಮಾರ್‌ ಅಲಿಯಾಸ್‌ ಹೊಟ್ಟೆ ಮಂಜ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ 70ನೇ ಸಿಸಿಎಚ್ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.

ಆರೋಪಿ ಪರ ವಕೀಲ ವೇದಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮಲಿಂಗೇಗೌಡ, ಜಾಮೀನು ವಜಾಗೊಳಿಸಿ ಆದೇಶ ಹೊರಡಿಸಿದರು.

ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಂ.ನರೇಂದ್ರ, ‘ಇದೊಂದು ಗಂಭೀರ ಪ್ರಕರಣ. ಇದರಲ್ಲಿ ಆರೋಪಿ ನವೀನ್‌ಕುಮಾರ್‌ ಭಾಗಿಯಾಗಿದ್ದ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳನ್ನು ಎಸ್‌ಐಟಿ ಬಂಧಿಸಬೇಕಿದೆ. ಈಗ ಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ, ಜಾಮೀನು ನೀಡಬಾರದು’ ಎಂದು ಕೋರಿದ್ದರು.‌

ಆಕ್ಷೇಪಣೆ ಸಲ್ಲಿಸುವ ವೇಳೆಯಲ್ಲಿ ಎಸ್‌ಐಟಿಯ ಡಿಸಿಪಿ ಎಂ.ಎನ್. ಅನುಚೇತ್‌ ವಾದ ಮಂಡಿಸಿದ್ದು ವಿಶೇಷವಾಗಿತ್ತು.

ಪಿಸ್ತೂಲ್ ನಾಶ ಶಂಕೆ: ಗೌರಿ ಲಂಕೇಶ್‌ ಹತ್ಯೆಗೆ ಬಳಸಿದ್ದ 7.65 ಎ.ಎಂ ಪಿಸ್ತೂಲ್‌ನ್ನು ಆರೋಪಿಗಳು ನಾಶಪಡಿಸಿರುವ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಅನುಮಾನ ಬಂದಿದೆ.

‘ನಾನೇ ಗುಂಡು ಹಾರಿಸಿದೆ’ ಎಂದು ಆರೋಪಿ ಪರಶುರಾಮ ವಾಘ್ಮೋರೆ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ಹತ್ಯೆಯ ಬಳಿಕ ಪಿಸ್ತೂಲ್‌ನ್ನು ಬೇರೆಯವರಿಗೆ ಕೊಟ್ಟಿರುವುದಾಗಿ ಆತ ಹೇಳುತ್ತಿದ್ದಾನೆ. ಇದುವರೆಗೂ ಆ ಪಿಸ್ತೂಲ್ ಎಲ್ಲಿದೆ ಎಂಬುದು ಗೊತ್ತಾಗಿಲ್ಲ. ಅದನ್ನು ಆರೋಪಿಗಳು ನಾಶಪಡಿಸಿರುವ ಸಾಧ್ಯತೆಗಳು ಹೆಚ್ಚಿವೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !