ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಪ್ರಾಧ್ಯಾಪಕರ ಗೋಳು: 5 ತಿಂಗಳಲ್ಲಿ ಕೇವಲ 18 ದಿನದ ಗೌರವಧನ!

Last Updated 6 ಮೇ 2020, 21:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸುಮಾರು 13 ಸಾವಿರ ಅತಿಥಿ ಪ್ರಾಧ್ಯಾಪಕರಿಗೆ 150 ದಿನಗಳ ಪೈಕಿ ಕೇವಲ 18 ದಿನಗಳ ಗೌರವಧನ ನೀಡಲಾಗಿದೆ.

ತುಮಕೂರು ಜಿಲ್ಲೆಯ ಕಾಲೇಜೊಂದರ ಅತಿಥಿ ಪ್ರಾಧ್ಯಾಪಕರು ಈ ‘ಕೊಡುಗೆ’ಯನ್ನು ತಿರಸ್ಕರಿಸಿದ್ದು,ಕೊಡುವುದಾದರೆ 5 ತಿಂಗಳ ಗೌರವಧನ ಕೊಡಿ, ಇಲ್ಲವಾದರೆ ನೀವೇ ಇಟ್ಟುಕೊಳ್ಳಿ ಎಂದು ಪ್ರಾಂಶುಪಾಲರಿಗೆ ಪತ್ರ ನೀಡಿದ್ದಾರೆ.

‘ನಾವು ಹೇಳಿಕೊಳ್ಳಲು ಪ್ರಾಧ್ಯಾಪಕರು, ಹೊತ್ತಿನ ಗಂಜಿಗೂ ಪರದಾಡುತ್ತಿದ್ದೇವೆ. ಪ್ರಾಧ್ಯಾಪಕರು ಎಂಬ ಕಾರಣಕ್ಕೆ ನಮಗೆ ಬಿಪಿಎಲ್ ಪಡಿತರ ಚೀಟಿ ಸಹ ಸಿಗುತ್ತಿಲ್ಲ. ನಮ್ಮಂತಹ ಸ್ನಾತಕೋತ್ತರ ಪದವೀಧರ ಬಗ್ಗೆ ಯಾರಿಗೂ ಕರುಣೆ ಬಾರದೆ ಹೋಗಿದೆ. ನಾವು ಸಹ ಮತ್ತೊಮ್ಮೆ ಸಾಮೂಹಿಕ ಮುಷ್ಕರ ನಡೆಸುವವರೆಗೆ ಸರ್ಕಾರ ಎಚ್ಚೆತ್ತುಕೊಳ್ಳುವ ಲಕ್ಷಣ ಕಾಣುತ್ತಿಲ್ಲ’ ಎಂದು ಹಲವು ಪ್ರಾಧ್ಯಾಪಕರು ತಿಳಿಸಿದ್ದಾರೆ.

‘ಕೊರೊನಾ ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಒಂದಿಷ್ಟು ಪ್ಯಾಕೇಜ್‌ ಘೋಷಿಸಿದೆ. ಅಂತಹ ಅಸಂಘಟಿತರಿಗಿಂತಲೂ ಶೋಚನೀಯ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದರೂ ಸರ್ಕಾರಿ ನೌಕರರಿಗೆ, ನಮ್ಮ ಕಾಲೇಜಿನ ಇತರ ಪ್ರಾಧ್ಯಾಪಕರಿಗೆ ಸರಿಯಾದ ಸಮಯಕ್ಕೇ ವೇತನ ನೀಡುವ ಸರ್ಕಾರ, ನಾವು ದುಡಿದ 5 ತಿಂಗಳ ಸಂಬಳಕ್ಕೆ ಏಕೆ ಕತ್ತರಿ ಹಾಕಿದೆ?’ ಎಂದು ರಾಜ್ಯದ ಹಲವು ಭಾಗಗಳ ಹತ್ತಾರು ಮಂದಿ ಪ್ರಶ್ನಿಸಿದರು.

ಪ್ರತಿಭಟನೆ ನಡೆದಿತ್ತು: ಅತಿಥಿ ಪ್ರಾಧ್ಯಾಪಕರು ಈ ಹಿಂದೆ ಸಹ ತಮ್ಮ ನ್ಯಾಯೋಚಿತ ಬೇಡಿಕೆಗಾಗಿ ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದರು. ಹುಬ್ಬಳ್ಳಿಯಿಂದ ಧಾರವಾಡದವರೆಗೆ ಪಾದಯಾತ್ರೆ, ಒಂದು ತಿಂಗಳ ಕಾಲ ಜಿಲ್ಲಾಧಿಕಾರಿ ಕಚೇರಿಗಳ ಬಳಿ ಧರಣಿ, ಕೊಪ್ಪಳದಲ್ಲಿ ಭಿಕ್ಷೆ ಎತ್ತಿ ಪ್ರತಿಭಟನೆ, ಹತ್ತಾರು ಮನವಿ ಸಲ್ಲಿಕೆ ಮಾಡಿದ್ದರು. ಗೌರವಧನವನ್ನು ಹಲವು ರಾಜ್ಯಗಳಲ್ಲಿ ಇರುವಂತೆ ಕನಿಷ್ಠ ₹25 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ ಅವರಿಗೆ ಗೌರವಧನವನ್ನು ₹11 ಸಾವಿರ ಮತ್ತು ₹13 ಸಾವಿರಕ್ಕಿಂತ ಹೆಚ್ಚಿಸಿಯೇ ಇಲ್ಲ.

**

ಸಮಸ್ಯೆಯ ಅರಿವಿದೆ. ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ. ಹೊಸ ಬಜೆಟ್‌ನಲ್ಲಿ ಗೌರವಧನವನ್ನು ಪೂರ್ತಿ ನೀಡುವ ವ್ಯವಸ್ಥೆ ಮಾಡುತ್ತಿದ್ದು, ಶೀಘ್ರ ನೀಡುತ್ತೇವೆ.
-ಪಿ.ಪ್ರದೀಪ್‌, ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ

‘ನಿವೃತ್ತಿ ವಯಸ್ಸು ಹೆಚ್ಚಿಸಿ’
ಅತಿಥಿ ಪ್ರಾಧ್ಯಾಪಕರ ಗೋಳು ಮುಂದುವರಿದಿರುವಾಗಲೇ, ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿನ ಪ್ರಾಧ್ಯಾಪಕರು ತಮ್ಮ ನಿವೃತ್ತಿ ವಯಸ್ಸನ್ನು ಈಗಿನ 60ರಿಂದ 62ಕ್ಕೆ ಹೆಚ್ಚಿಸಿ ಎಂದು ಸರ್ಕಾರದ ಮೇಲೆ ಒತ್ತಡ ಹೇರತೊಡಗಿದ್ದಾರೆ. ಕಾಲೇಜು ಶಿಕ್ಷಕರ ಸಂಘ ವಾರದ ಹಿಂದೆ ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದೆ.

‘ಹಲವು ರಾಜ್ಯಗಳಲ್ಲಿ ವಯೋಮಿತಿ ಹೆಚ್ಚಿಸಲಾಗಿದೆ, ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯಕ್ಕೆ ಸದ್ಯ ಇದರಿಂದ ಅನುಕೂಲವಿದೆ’ ಎ‌ಂಬ ಕಾರಣ ನೀಡಿ ಈ ಮನವಿ ಮಾಡಿದ್ದಾರೆ.

ಉಪನ್ಯಾಸಕರಿಗೆ ಕೆಲಸ ತೋರಿಸಿಕೊಟ್ಟ ಕಾಲೇಜು ಶಿಕ್ಷಣ ಇಲಾಖೆ
ಲಾಕ್‌ಡೌನ್‌ ಅವಧಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಿಗೆ ಬಂದು ಮಾಡುವುದಾದರೂ ಏನು ಎಂಬ ಉಪನ್ಯಾಸಕರ ಪ್ರಶ್ನೆಗೆ, ಉತ್ತರ ಕೊಟ್ಟಿರುವ ಕಾಲೇಜು ಶಿಕ್ಷಣ ಇಲಾಖೆ 15 ಕೆಲಸಗಳನ್ನು ಉಲ್ಲೇಖಿಸಿ ಸುತ್ತೋಲೆ ಹೊರಡಿಸಿದೆ.

ಆನ್‌ಲೈನ್ ಪಾಠವನ್ನು ಪೂರ್ಣಗೊಳಿಸಿ ಪುನರಾವರ್ತನೆ ತರಗತಿಗಳನ್ನು ನಡೆಸಬೇಕು. ಪ್ರಾಧ್ಯಾಪಕರೇ ಸ್ವತಃ ಪ್ರಾಯೋಗಿಕ ತರಗತಿ ನಡೆಸಿ, ವಿಡಿಯೊ ಚಿತ್ರೀಕರಣ ನಡೆಸಿ ಯೂ ಟ್ಯೂಬ್ ಚಾನೆಲ್ ‘ಜ್ಞಾನನಿಧಿ’ಗೆ ಕಳುಹಿಸಬೇಕು. ವಾಟ್ಸ್‌ಆ್ಯಪ್‌, ಟೆಲಿಗ್ರಾಂ ಗುಂಪು ರಚಿಸಿ ಮಾರ್ಗದರ್ಶನ ನೀಡಬೇಕು. ಜತೆಗೆ ಪರೀಕ್ಷಾ ಕಾರ್ಯಗಳು, ನ್ಯಾಕ್‌ ಸಂಬಂಧಿತ ಕೆಲಸಗಳಂತಹ ಹಲವಾರು ಕೆಲಸಗಳ ಪಟ್ಟಿಯನ್ನು ಸುತ್ತೋಲೆಯಲ್ಲಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT