ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ, ಇಬ್ಬರ ಬಂಧನ

ನಾಲ್ವರು ನಾಪತ್ತೆ
Last Updated 11 ಜೂನ್ 2019, 19:14 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ವೀರನಪುರ ಗ್ರಾಮದ ವ್ಯಾಪ್ತಿಯಲ್ಲಿ ದಲಿತ ವ್ಯಕ್ತಿಯ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಇಬ್ಬರನ್ನು ಬಂಧಿಸಲಾಗಿದ್ದು, ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದ ಆರ್ಚಕ ಶಿವಪ್ಪ ಹಾಗೂ ಪುಟ್ಟಸ್ವಾಮಿ ಬಂಧಿತರು. ಉಳಿದ ಆರೋಪಿಗಳಾದ ಬಸವರಾಜು, ಮಾಣಿಕ್ಯ, ಸತೀಶ್‌, ಮೂರ್ತಿ ತಲೆಮರೆಸಿಕೊಂಡಿದ್ದಾರೆ.

ಹಲ್ಲೆಗೊಳಗಾದ 38 ವರ್ಷದ ಎಸ್‌.ಪ್ರತಾಪ್‌, ಗುಂಡ್ಲುಪೇಟೆ ತಾಲ್ಲೂಕಿನಶ್ಯಾನಾಡ್ರಹಳ್ಳಿಯವರು. ಮೈಸೂರಿನಲ್ಲಿ ವಾಸವಿದ್ದಾರೆ. ಸದ್ಯ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತಾಪ್‌ ಅವರ ಚಿಕ್ಕಪ್ಪನ ಮಗ ಕಾಂತರಾಜು ನೀಡಿರುವ ದೂರು ಆಧರಿಸಿ, ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅನುಮತಿ ಇಲ್ಲದೇ ಗುಂಪುಗೂಡುವುದು (ಐಪಿಸಿ ಸೆಕ್ಷನ್‌ 143), ದೊಂಬಿ (ಐಪಿಸಿ 147), ದರೋಡೆ (ಐಪಿಸಿ 395), ಹಲ್ಲೆ (ಐಪಿಸಿ 323) ಹಾಗೂ ಅಕ್ರಮ ಬಂಧನ (ಐಪಿಸಿ 342),ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504) ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಜೂನ್‌ 3ರಂದು ಘಟನೆ, 11ಕ್ಕೆ ದೂರು:ಪ್ರತಾಪ್‌ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣ ಜೂನ್‌ 3ರಂದು ನಡೆದಿತ್ತಾದರೂ, ಈ ಸಂಬಂಧದ ವಿಡಿಯೊ ತುಣುಕು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಮಾಧ್ಯಮಗಳು ಈ ಬಗ್ಗೆ ಗಮನ ಸೆಳೆದ ನಂತರ ಕಾಂತರಾಜು ಅವರು ಮಂಗಳವಾರ ಗುಂಡ್ಲುಪೇಟೆ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?: ‘ದೇವಸ್ಥಾನ ಅಪವಿತ್ರಗೊಳಿಸಿದ ಎಂಬ ಕಾರಣಕ್ಕೆ ಪ್ರತಾಪ್‌ನ ಜಾತಿ ನಿಂದನೆ ಮಾಡಿ, ಬೆತ್ತಲೆ ಗೊಳಿಸಿ, ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿದೆ‘ ಎಂದು ಕಾಂತರಾಜು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಪ್ರತಾಪ್‌, ಜೂನ್‌ 2ರಂದು ರಾತ್ರಿ 12ರ ಸುಮಾರಿಗೆ ಮೈಸೂರಿನಿಂದ ಸ್ಕೂಟರ್‌ನಲ್ಲಿ ಶ್ಯಾನಾಡ್ರಹಳ್ಳಿಗೆ ಬರುತ್ತಿದ್ದ. ರಾಘವಾಪುರದ ಹತ್ತಿರ ಆತನನ್ನು ತಡೆದ ದುಷ್ಕರ್ಮಿಗಳು, ಅವನ ಬಳಿಯಲ್ಲಿದ್ದ ಹಣ, ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಮೊಬೈಲ್‌ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ. ರಾತ್ರಿ ಕಾಲ್ನಡಿಗೆಯಲ್ಲಿ ಮಾಡ್ರಹಳ್ಳಿ ಹತ್ತಿರವಿರುವ ಕಬ್ಬೆಕಟ್ಟೆ ಪಕ್ಕದ ಶನೇಶ್ವರ ದೇವಸ್ಥಾನದ ಆವರಣಕ್ಕೆ ಬಂದು ವಿಶ್ರಾಂತಿ ಮಲಗಿದ್ದಾಗ, ಬೆಳಿಗ್ಗೆ 6 ಗಂಟೆಗೆ ಬಂದ ಅರ್ಚಕ ಶಿವಪ್ಪ ಅವರುಪ್ರತಾಪ್‌ನನ್ನು ವಿಚಾರಿಸಿದ್ದಾರೆ. ಜಾತಿ ಗೊತ್ತಾಗುತ್ತಲೇ, ಮನೆಗೆ ಹೋಗಿ ಅಣ್ಣನ ಮಗ ಬಸವರಾಜು ಎಂಬುವವರನ್ನು ಕರೆದು, ಮಾಡ್ರಹಳ್ಳಿಗೆ ಹೋಗಿ ಮಾಣಿಕ್ಯ, ಸತೀಶ, ಮೂರ್ತಿ ಎಂಬುವವರನ್ನು ಕರೆದುಕೊಂಡು ಬರಲು ಸೂಚಿಸುತ್ತಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.

‘ಎಲ್ಲರೂ ದೇವಸ್ಥಾನಕ್ಕೆ ಬಂದ ನಂತರ ಶಿವಪ್ಪ ಅವರು, ‘ಇವನು ಹೊಲೆಯ ಜಾತಿಯವನು. ದೇವಸ್ಥಾನದ ಒಳಗೆ ಕುಳಿತು ಅಪವಿತ್ರಗೊಳಿಸಿದ್ದಾನೆ. ಇವನನ್ನು ಬೆತ್ತಲೆಗೊಳಿಸಿ ತೆಂಗಿನ ಮರಕ್ಕೆ ಕಟ್ಟಿಹಾಕಿ ಹೊಡೆಯಿ‌ರಿ’ ಎಂದು ಹೇಳಿದ್ದರು. ಉಳಿದವರು ಪ್ರತಾಪ್‌ಗೆ ಹೊಡೆದು, ಒದ್ದಿದ್ದಾರೆ. ಮಾಣಿಕ್ಯ ಎಂಬುವವರು ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ಬಸವರಾಜು ದೊಣ್ಣೆಯಿಂದ ಹೊಡೆದು, ಪ್ರತಾಪ್‌ನ ಎರಡು ಕೈಗಳನ್ನು ಹಿಂದಕ್ಕೆ ಸೇರಿಸಿ ಹಗ್ಗದಿಂದ ಕಟ್ಟಿದ್ದರು. ಬೆತ್ತಲೆ ಮೆರವಣಿಗೆ ಮಾಡುತ್ತಿರುವ ದೃಶ್ಯವನ್ನು ಸತೀಶ ಮತ್ತು ಮೂರ್ತಿ ಎಂಬುವವರು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪುಟ್ಟಸ್ವಾಮಿ ಎಂಬುವವರಿಗೆ ಹೇಳಿಸಿ ಪ್ರತಾಪ್‌ಗೆ ದೊಣ್ಣೆಯಿಂದ ಹೊಡೆಯಲಾಗಿದೆ’ ಎಂದು ಆರೋಪಿಸಿದ್ದಾರೆ.

ಮಾನಸಿಕ ಅಸ್ವಸ್ಥತೆಯ ಪ್ರಮಾಣಪತ್ರ

ಈ ಬೆಳವಣಿಗೆಗೂ ಮುನ್ನ, ಪ‍್ರಕರಣದ ಸಂಬಂಧ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ,‘ಪ್ರತಾಪ್‌ ಅವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಅವರ ತಂದೆ ಠಾಣೆಗೆ ಬಂದು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.

‘ದೇವಸ್ಥಾನಕ್ಕೆ ಬಂದಾಗಲೇ ಬಟ್ಟೆ ಇರಲಿಲ್ಲ’

ಏತನ್ಮಧ್ಯೆ, ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದಲ್ಲಿ ವಿಗ್ರಹಗಳನ್ನು ಜೂನ್‌ 3ರಂದು ಪ್ರತಾಪ್‌ ಧ್ವಂಸ ಮಾಡಿದ್ದಾಗಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸ್ವಾಮಿಗೌಡ ಅವರು ಗುಂಡ್ಲುಪೇಟೆ ಪಟ್ಟಣ ಪೊಲೀಸ್‌ ಠಾಣೆಗೆ ಜೂನ್‌ 7ರಂದು ದೂರು ನೀಡಿದ್ದಾರೆ.

‘ದೇವಸ್ಥಾನದಲ್ಲಿರುವಾಗಲೇ ಪ್ರತಾಪ್‌ ಮೈಮೇಲೆ ಬಟ್ಟೆಗಳಿರಲಿಲ್ಲ. ಬಟ್ಟೆ ನೀಡಲು ಹೋದರೆ ಗ್ರಾಮಸ್ಥರಿಗೆ ಹೊಡೆಯಲು ಬಂದಿದ್ದು ಮಾತ್ರವಲ್ಲದೇ ಕೆಳಗೆ ತಳ್ಳಿದ್ದಾರೆ. ಎಲ್ಲರ ಮೇಲೂ ರೇಗಾಡಿದಾಗ ಕೈಯನ್ನು ಹಗ್ಗದಲ್ಲಿ ಕಟ್ಟಿ ಒಂದು ಕಡೆ ಕೂರಿಸಿ ಪೊಲೀಸರಿಗೆ ಮಾಹಿತಿ ತಿಳಿಸಲಾಯಿತು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT