ಶನಿವಾರ, ನವೆಂಬರ್ 23, 2019
17 °C

ಗುಂಡ್ಲುಪೇಟೆ: ಹುಲಿ ದಾಳಿಗೆ ರೈತ ಬಲಿ

Published:
Updated:

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಚೌಡಹಳ್ಳಿ ಗ್ರಾಮದ ಕರಿಕಲ್ ಮುಂಟಿ ಹತ್ತಿರ ರೈತ ಶಿವಮಾದಯ್ಯ (55) ಅವರು ಹುಲಿ ದಾಳಿಗೆ ಬಲಿಯಾಗಿದ್ದಾರೆ.

ಶಿವಮಾದಯ್ಯ, ಸಂಬಂಧಿಕರ ಮನೆಗೆ ಎತ್ತುಗಳನ್ನು ಕೆಲಸಕ್ಕೆ ನೀಡಿದ್ದರು. ಕೆಲಸ ಮುಗಿದ ಬಳಿಕ ಶನಿವಾರ ಸಂಜೆ ಮಂಗಲ ಗ್ರಾಮದಿಂದ ಕೆಬ್ಬೆಕಟ್ಟೆ ದೇವಸ್ಥಾನದ ಮಾರ್ಗದಲ್ಲಿ ಚೌಡಹಳ್ಳಿಗೆ ಹೋಗುತ್ತಿದ್ದಾಗ ಹುಲಿ ದಾಳಿ ನಡೆಸಿದೆ. ಆಗ ಎತ್ತುಗಳು ಬೆದರಿ ಓಡಿದವು.

ಮನೆಗೆ ಬಾರದ ಶಿವಮಾದಯ್ಯ ಅವರನ್ನು ಕುಟುಂಬದವರು ಭಾನುವಾರ ಬೆಳಿಗ್ಗೆ ಹುಡುಕಾಡಿದರು. ಘಟನೆ ನಡೆದ ಸ್ಥಳದಿಂದ ಸುಮಾರು ದೂರದ ಪೊದೆಯಲ್ಲಿ ಅವರ ದೇಹ ಪತ್ತೆಯಾಗಿದೆ. ದಾಳಿ ಮಾಡಿದ ಹುಲಿ ಅವರನ್ನು ಎಳೆದುಕೊಂಡು ಹೋಗಿ, ಹೊಟ್ಟೆ ಮತ್ತಿತರ ಭಾಗಗಳಲ್ಲಿ ತೀವ್ರವಾಗಿ ಪರಿಚಿ ಸಾಯಿಸಿ ಕಾಲಿನ ಅರ್ಧ ಭಾಗ ತಿಂದು ಹಾಕಿದೆ.

ವಿಷಯವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದರೂ, ತಡವಾಗಿ ಸ್ಥಳಕ್ಕೆ ಬಂದ ಕಾರಣ ಗ್ರಾಮಸ್ಥರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದರು. ₹ 5 ಲಕ್ಷ ಪರಿಹಾರ ಹಾಗೂ ಶಿವಮಾದಯ್ಯ ಪುತ್ರರೊಬ್ಬರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

ಪ್ರತಿಕ್ರಿಯಿಸಿ (+)