ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲ್ಲಿದ್ದಲು ಗಣಿ ಹಂಚಿಕೆ ವಾಪಸ್ ಪಡೆದ ಕೇಂದ್ರ’

Last Updated 19 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಯರಮರಸ್‌ ಹಾಗೂ ಬಳ್ಳಾರಿಯ ಉಷ್ಣ ವಿದ್ಯುತ್ ಸ್ಥಾವರ–3ನೆ ಘಟಕಗಳಿಗೆ ಹಂಚಿಕೆ ಮಾಡಿದ್ದ ಕಲ್ಲಿದ್ದಲು ಗಣಿಯನ್ನು ಕೇಂದ್ರ ಸರ್ಕಾರ ಕಾರಣ ನೀಡದೇ ವಾಪಸ್ ಪಡೆದಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

‘ವಾಪಸ್ ಪಡೆಯುವ ಮುನ್ನ ಕಾರಣವನ್ನು ನೀಡಿಲ್ಲ. ಕೇಂದ್ರ ಇಂಧನ ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಗಣಿಯನ್ನು ಮರು ಹಂಚಿಕೆ ಮಾಡುವಂತೆ ಮನವಿ ಮಾಡಿದ್ದೇನೆ’ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಮೇ ತಿಂಗಳವರೆಗೆ ಹಂಚಿಕೆಯಾಗಿದ್ದ ಗಣಿಯಿಂದ ಬರಲಿದ್ದ ಕಲ್ಲಿದ್ದಲನ್ನು ವಿದ್ಯುತ್ ಉತ್ಪಾದನೆಗೆ ನೆಚ್ಚಿಕೊಳ್ಳಲಾಗಿತ್ತು. ಈಗ ದಿಢೀರನೇ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಬೇಸಿಗೆಯಲ್ಲಿ ವಿದ್ಯುತ್‌ ಉತ್ಪಾದನೆಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಖಾಸಗಿ ವಲಯದಿಂದ 10 ಲಕ್ಷ ಟನ್ ಕಲ್ಲಿದ್ದಲು ಖರೀದಿಸಲು ಈಗಾ
ಗಲೇ ಟೆಂಡರ್ ಕರೆಯಲಾಗಿದೆ. ಅದು ಪೂರ್ಣಗೊಳ್ಳುವ ಹಂತದಲ್ಲಿದೆ. ಕೇಂದ್ರ ಹಂಚಿಕೆ ರದ್ದುಪಡಿಸಿದರೂ ಈ ಕಲ್ಲಿದ್ದಲು ಪೂರೈಕೆಯಾಗುವುದರಿಂದ ನಿಗದಿತ ಅವಧಿ ಹಾಗೂ ಪ್ರಮಾಣದಲ್ಲಿ ವಿದ್ಯುತ್ ಪೂರೈಸಲು ಸಮಸ್ಯೆಯಾಗದು ಎಂದರು.

‘ಸುಳ್ಳು ಹೇಳಿದ ಜಾವಡೇಕರ್’

‘ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್‌ ಮಾಡಲಾಗುತ್ತಿದೆ ಎಂಬುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಸುಳ್ಳು ಹೇಳಿದ್ದಾರೆ’ ಎಂದು ಸಚಿವ ಶಿವಕುಮಾರ್ ಟೀಕಿಸಿದರು.

‘ಕೇಂದ್ರ ವಿದ್ಯುತ್ ಪೂರೈಸಲು ಸಿದ್ಧವಿದ್ದರೂ ರಾಜ್ಯ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ’ ಎಂದು ಜಾವಡೇಕರ್ ಆಪಾದಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ರಾಜ್ಯದಲ್ಲಿ ಬೇಡಿಕೆಯಷ್ಟು ವಿದ್ಯುತ್ ಲಭ್ಯ ಇದೆ. ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕೊರತೆಯಾಗಬಹುದು ಎಂಬ ಅಂದಾಜಿನಲ್ಲಿ  ಪ್ರತಿ ಯೂನಿಟ್‌ಗೆ ₹4.10 ದರದಲ್ಲಿ  900 ಮೆಗಾವಾಟ್‌ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.

‘ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ. ಎಸ್‌ಎಸ್ಎಲ್‌ಸಿ ಸೇರಿದಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ ಎಂಬ ಅರಿವು ನಮಗೂ ಇದೆ. ಪರೀಕ್ಷಾ ಸಮಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಎಲ್ಲ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT