ಗುರುವಾರ , ಜೂನ್ 24, 2021
27 °C
ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮಾರಾಮಾರಿ l 14 ದಿನ ನ್ಯಾಯಾಂಗ ಬಂಧನ

ನಟ ವಿಜಿಯ ದಾದಾಗಿರಿ ‘ದುನಿಯಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ದೇಹದಾರ್ಢ್ಯ ಸ್ಪರ್ಧೆ ವೇಳೆ ಜಿಮ್ ತರಬೇತುದಾರ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ನಟ ದುನಿಯಾ ವಿಜಯ್ ಸೇರಿದಂತೆ ನಾಲ್ವರನ್ನು ಬಂಧಿಸಿದ ಹೈಗ್ರೌಂಡ್ಸ್ ಪೊಲೀಸರು, ನ್ಯಾಯಾಧೀಶರ ಆದೇಶದಂತೆ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಹಲ್ಲೆಯಿಂದ ಮಾರುತಿ ಅವರ ದವಡೆಗೆ ಪೆಟ್ಟು ಬಿದ್ದು ಮುಖ ಊದಿಕೊಂಡಿದೆ. ತಲೆ ಹಾಗೂ ಕಣ್ಣಿನ ಹತ್ತಿರವೂ ಗಾಯಗಳಾಗಿವೆ. ಸದ್ಯ ಅವರು ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಟಿ ಹರಿದಿರುವುದರಿಂದ ಮೂರು ಹೊಲಿಗೆ ಹಾಕಲಾಗಿದೆ.

‘ಘಟನೆ ಸಂಬಂಧ ಮಾರುತಿ ಅವರ ಚಿಕ್ಕಪ್ಪ ಕೃಷ್ಣಮೂರ್ತಿ ಅಲಿಯಾಸ್ ಪಾನಿಪೂರಿ ಕಿಟ್ಟಿ ದೂರು ಕೊಟ್ಟರು. ಅಪಹರಣ (ಐಪಿಸಿ 365), ಹಲ್ಲೆ (323), ಜೀವ ಬೆದರಿಕೆ (506) ಹಾಗೂ ಅಕ್ರಮ ಬಂಧನ (342) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡು ವಿಜಯ್, ಅವರ ಜಿಮ್ ತರಬೇತುದಾರ ಪ್ರಸಾದ್, ಸ್ನೇಹಿತ ಮಣಿ ಹಾಗೂ ಕಾರು ಚಾಲಕ ಪ್ರಸಾದ್ ಅವರನ್ನು ಬಂಧಿಸಿದೆವು’ ಎಂದು ಪೊಲೀಸರು ಹೇಳಿದ್ದಾರೆ.

ಆಗಿದ್ದೇನು?: ‘ಕರ್ನಾಟಕ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್’ (ಕೆಎಬಿಬಿಎ)ನಿಂದ ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ‘ಮಿಸ್ಟರ್ ಬೆಂಗಳೂರು’ ಸ್ಪರ್ಧೆ ಆಯೋಜಿಸಲಾಗಿತ್ತು. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆದ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

ತಮ್ಮ ಜಿಮ್ ಕೇಂದ್ರದಲ್ಲೇ ತರಬೇತಿ ಪಡೆಯುತ್ತಿದ್ದ ನಾಲ್ವರು ಯುವಕರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರಿಂದ ಮಾರುತಿ ಸಹ ಅಲ್ಲಿಗೆ ಬಂದಿದ್ದರು. ಅತಿಥಿಯಾಗಿದ್ದ ವಿಜಯ್, ವಿಜೇತರಿಗೆ ಬಹುಮಾನ ವಿತರಿಸಿದ ಬಳಿಕ ಮಾರುತಿ ಅವರನ್ನು ನೋಡಿದರು. ‘ಎಲ್ಲೋ ನಿನ್ನ ಚಿಕ್ಕಪ್ಪ ಕಿಟ್ಟಿ. ಅವನ್ಯಾಕೆ ಬಂದಿಲ್ಲ’ ಎಂದು ಏಕವಚನದಲ್ಲಿ ಮಾತನಾಡಿಸಿದ್ದರು. ಅದಕ್ಕೆ ಮಾರುತಿ, ‘ಅವರ ವಿಷಯ ನಿಮಗ್ಯಾಕೆ’ ಎಂದು ಅದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದರು. ಇದರಿಂದ ಕೆರಳಿದ ವಿಜಯ್ ಹಾಗೂ ಸಹಚರರು, ‘ಕೇಳಿದ
ಷ್ಟಕ್ಕೆ ಉತ್ತರ ಕೊಡುವುದನ್ನು ಬಿಟ್ಟು, ಎದುರು ಮಾತನಾಡುತ್ತೀಯಾ’ ಎಂದು ಥಳಿಸಿದರು ಎನ್ನಲಾಗಿದೆ.

ಮಾರುತಿ ರಕ್ಷಣೆಗೆ ಬಂದ ಅವರ ಸ್ನೇಹಿತರಾದ ಕಾರ್ತಿಕ್, ತೇಜಸ್ ಮೇಲೂ ಹಲ್ಲೆ ನಡೆಸಿದ ವಿಜಯ್ ಗುಂಪು, ನಂತರ ಮಾರುತಿ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಅಲ್ಲಿಂದ ಹೊರಟು ಹೋಗಿತ್ತು. ಈ ವಿಷಯ ತಿಳಿದು ಹೈಗ್ರೌಂಡ್ಸ್‌ ಠಾಣೆಗೆ ದೌಡಾಯಿಸಿದ ಕಿಟ್ಟಿ, ವಿಜಯ್ ಹಾಗೂ ಸಹಚರರ ವಿರುದ್ಧ ದೂರು ಕೊಟ್ಟರು.

‘ವಿಜಯ್‌ ಅವರಿಗೆ ಕರೆ ಮಾಡಿದ ಎಸಿಪಿ ರವಿಶಂಕರ್, ‘ಮಾರುತಿಯನ್ನು ಕರೆದುಕಂಡು ಅರ್ಧ ಗಂಟೆಯೊಳಗೆ ಠಾಣೆಗೆ ಬರದಿದ್ದರೆ, ಎಫ್‌ಐಆರ್ ದಾಖಲಿಸುತ್ತೇನೆ’ ಎಂದು ಹೇಳಿದರು. ಇದರಿಂದ ಹೆದರಿದ ಅವರು, ರಾತ್ರಿ 12.30ರ ಸುಮಾರಿಗೆ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಮಾರುತಿ ಜತೆ ಠಾಣೆ ಬಳಿ ಬಂದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಪತ್ನಿಯರೂ ಠಾಣೆ ಮೆಟ್ಟಿಲೇರಿದರು!
ನಟ ವಿಜಯ್ ಬಂಧನದ ಬೆನ್ನಲ್ಲೇ, ಅವರ ಮೊದಲ ಪತ್ನಿ ನಾಗರತ್ನ ಹಾಗೂ ಎರಡನೇ ಪತ್ನಿ ಕೀರ್ತಿ ಸಹ ಮಗನ ವಿಚಾರದಲ್ಲಿ ಜಗಳವಾಡಿಕೊಂಡು ಭಾನುವಾರ ಸಂಜೆ ಠಾಣೆ ಮೆಟ್ಟಿಲೇರಿದರು.

‘ಮಗ ಸಾಮ್ರಾಟ್‌ನನ್ನು ರಾತ್ರಿ ವೇಳೆ ವಿಜಯ್ ಜತೆ ಹೊರಗೆ ಕಳುಹಿಸಿದ್ದನ್ನು ಪ್ರಶ್ನಿಸಲು ಮನೆಗೆ ಹೋಗಿದ್ದೆ. ಈ ವೇಳೆ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೀರ್ತಿ, ಬೌನ್ಸರ್‌ಗಳನ್ನು ಬಿಟ್ಟು ಹಲ್ಲೆ ಮಾಡಿಸಿದರು. ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ’ ಎಂದು ಒತ್ತಾಯಿಸಿ ನಾಗರತ್ನ ಅವರು ಗಿರಿನಗರ ಠಾಣೆಗೆ ದೂರು ಕೊಟ್ಟರು. ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು