ಮೇಕೆದಾಟು: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ದೇವೇಗೌಡ

7
ಯೋಜನೆಗೆ ಅನುಮತಿಯ ಭರವಸೆ ನೀಡಿದ ಕೇಂದ್ರ

ಮೇಕೆದಾಟು: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ ದೇವೇಗೌಡ

Published:
Updated:

ನವದೆಹಲಿ: ಪ್ರಸ್ತಾವಿತ ಮೇಕೆದಾಟು ಯೋಜನೆ ಜಾರಿಗಾಗಿ ಕರ್ನಾಟಕ ಸರ್ಕಾರಕ್ಕೆ ಅಗತ್ಯ ಅನುಮತಿ ನೀಡಲಾಗುವುದು ಎಂದು ಕೇಂದ್ರದ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದಾರೆ.

ಬುಧವಾರ ತಮ್ಮನ್ನು ಭೇಟಿ ಮಾಡಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರಿಂದ ಈ ಕುರಿತ ಮನವಿ ಸ್ವೀಕರಿಸಿದ ಬಳಿಕ, ಯೋಜನೆ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಅನುಮತಿ ನೀಡುವುದಾಗಿ ಅವರು ತಿಳಿಸಿದ್ದಾರೆ.

ಕಾವೇರಿ ನದಿ ನೀರಿನ ಸದ್ಬಳಕೆ ಹಾಗೂ ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲಿರುವ ಈ ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ಕಾವೇರಿ ನದಿ ನೀರು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಈ ಯೋಜನೆಯಿಂದ ಉಲ್ಲಂಘನೆಯಾಗದು ಎಂದು ದೇವೇಗೌಡ ಅವರು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ಮೂಲಗಳು ತಿಳಿಸಿವೆ.

ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ಕಾವೇರಿಯ ಹೆಚ್ಚುವರಿ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆ ರೂಪಿಸಿರುವ ಕರ್ನಾಟಕ, ಜಲವಿದ್ಯುತ್‌ ಉತ್ಪಾದನೆ ಹಾಗೂ ಬೆಂಗಳೂರು, ರಾಮನಗರ ಮತ್ತು ಕನಕಪುರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ರೂಪುರೇಷೆ ಸಿದ್ಧಪಡಿಸಿದೆ.

ಆದರೆ, ಈ ಯೋಜನೆ ಜಾರಿಯಿಂದ ತನಗೆ ಹಂಚಿಕೆಯಾದ ನೀರನ್ನು ಹರಿಸದೆ ತಾನೇ ಬಳಸಿಕೊಳ್ಳುವ ಹುನ್ನಾರವನ್ನು ಕರ್ನಾಟಕ ಹೊಂದಿದೆ ಎಂದು ತಮಿಳುನಾಡು ಆರೋಪಿಸಿದೆ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !