ಮಂಗಳವಾರ, ನವೆಂಬರ್ 12, 2019
28 °C

ಮಸೀದಿ ಧ್ವಂಸಕ್ಕೆ ಪರಿಹಾರ ಘೋಷಿಸಬೇಕಿತ್ತು: ಎಚ್‌.ಡಿ. ದೇವೇಗೌಡ

Published:
Updated:
Prajavani

ಮಂಗಳೂರು: ‘1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ್ದು ತಪ್ಪು ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಇದಕ್ಕಾಗಿ ಅಲ್ಪಸಂಖ್ಯಾತರಿಗೆ ಆರ್ಥಿಕ ಪರಿಹಾರವನ್ನೂ ಘೋಷಿಸಬೇಕಿತ್ತು’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.

ಸುಪ್ರೀಂ ಕೋರ್ಟ್‌ ತೀರ್ಪಿನ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಬಾಬರಿ ಮಸೀದಿ ಧ್ವಂಸ ಮಾಡಿರುವುದು ತಪ್ಪು ಎಂದು ನ್ಯಾಯಾಲಯ ಹೇಳಿದೆ. ಹಾಗಿದ್ದ ಮೇಲೆ ಅಲ್ಪಸಂಖ್ಯಾತರಿಗೆ ಬೇರೆ ಮಸೀದಿ ನಿರ್ಮಾಣಕ್ಕೆ ಆರ್ಥಿಕ ಪರಿಹಾರವನ್ನೂ ಘೋಷಿಸಬೇಕಿತ್ತು. ಕೇಂದ್ರ ಸರ್ಕಾರವೇ ಪರಿಹಾರದ ಮೊತ್ತ ಪಾವತಿಸುವಂತೆ ನಿರ್ದೇಶನ ನೀಡಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

‘ರಾಮ ಜನ್ಮಭೂಮಿ- ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಹಿಂದೂ ಧರ್ಮೀಯರ ಬಹುದಿನಗಳ ಕನಸು ಈ ತೀರ್ಪಿನಿಂದ ನನಸಾಗಲಿದೆ’ ಎಂದು ಹೇಳಿದರು.

‘ದೇವಾಲಯ ನಿರ್ಮಿಸುವ ಹೊಣೆ ಹೊರಲಿರುವ ಟ್ರಸ್ಟ್‌ನಲ್ಲಿ ಯಾರು ಇರುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಟ್ರಸ್ಟ್ ಆರ್‌ಎಸ್‌ಎಸ್ ಪ್ರತಿನಿಧಿಗಳ ಹಿಡಿತದಲ್ಲೇ ಇರುತ್ತದೋ, ಬೇರೆಯವರು ಇರುತ್ತಾರೋ ನೋಡಬೇಕು.‌ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಎರಡೂ ಕಡೆ ಬಿಜೆಪಿ ಸರ್ಕಾರಗಳೇ ಇವೆ. ಟ್ರಸ್ಟ್‌ನಲ್ಲಿ ಯಾವೆಲ್ಲಾ ಸಮುದಾಯದ ಜನರಿಗೆ ಪ್ರಾತಿನಿಧ್ಯ ನೀಡುತ್ತಾರೆ ಎಂಬುದನ್ನು ನೋಡಬೇಕು’ ಎಂದರು.

ಪ್ರತಿಕ್ರಿಯಿಸಿ (+)