ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಗ್ಯ ಕರ್ನಾಟಕ’ ಪುನಶ್ಚೇತನಕ್ಕೆ ಮುಂದಾದ ಸಿ.ಎಂ ಕುಮಾರಸ್ವಾಮಿ

ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿದ ಮುಖ್ಯಮಂತ್ರಿ
Last Updated 17 ನವೆಂಬರ್ 2018, 20:00 IST
ಅಕ್ಷರ ಗಾತ್ರ

ದಾವಣಗೆರೆ: ‘ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಎಚ್‌1ಎನ್‌1 ರೋಗಕ್ಕೂ ಚಿಕಿತ್ಸೆ ಪಡೆಯಲು ಅವಕಾಶ ನೀಡುವಂತೆ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಶನಿವಾರ ಆರಂಭಗೊಂಡ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯ ಮಟ್ಟದ 29ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಆರೋಗ್ಯ ಕರ್ನಾಟಕ ಯೋಜನೆಯ ಲೋಪದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಆಪತ್ತಿಗಿಲ್ಲ ಆರೋಗ್ಯ ಭಾಗ್ಯ’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು. ಎಚ್‌1ಎನ್‌1ಗೆ ಆರೋಗ್ಯ ಯೋಜನೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದಿರುವ ಬಗ್ಗೆ ಗಮನ ಸೆಳೆದಿತ್ತು. ತಕ್ಷಣವೇ ಅಧಿಕಾರಿಗಳ ಸಭೆ ನಡೆಸಿ, ಯೋಜನೆಯಲ್ಲಿನ ಲೋಪವನ್ನು ಸರಿಪಡಿಸುವಂತೆ ಸೂಚಿಸಿದ್ದೇನೆ’ ಎಂದರು.

ಬಜೆಟ್‌ನಲ್ಲಿ ಆರೋಗ್ಯಕ್ಕೆ ಒತ್ತು: ಆರೋಗ್ಯ ಇಲಾಖೆಯಲ್ಲಿ ಮಂಜೂರಾದ 67,000 ಹುದ್ದೆಗಳ ಪೈಕಿ 24,000 ಹುದ್ದೆಗಳು ಖಾಲಿ ಇವೆ. ಆಸ್ಪತ್ರೆಗಳಿಗೆ ಪೂರೈಕೆ ಮಾಡಿರುವ ಸೌಲಭ್ಯಗಳು ಹೇಳಿಕೊಳ್ಳುವಂತೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿಬ್ಬಂದಿಯಿಂದ ಹೆಚ್ಚು ನಿರೀಕ್ಷೆ ಮಾಡುವುದೂ ತಪ್ಪಾಗುತ್ತದೆ. ಹೀಗಾಗಿ, ಮುಂದಿನ ಬಜೆಟ್‌ನಲ್ಲಿ ಆರೋಗ್ಯ ಇಲಾಖೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

3–4 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ವೈದ್ಯರನ್ನು ಕಾಯಂ ಮಾಡಲು, ಬಡ್ತಿ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಹಾಗೂ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆಯ ನೌಕರರಿಗೂ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಮನೆಯಲ್ಲಿ ಸತ್ತರೂ ಪ್ರತಿಭಟನೆ

‘ರಿಪ್ಪನ್‌ಪೇಟೆಯಲ್ಲಿ ಅರಣ್ಯ ಗುತ್ತಿಗೆ ಭೂಮಿಯಲ್ಲಿ ಸಾಗುವಳಿದಾರರನ್ನು ತೆರವು ಮಾಡಿಸಿದಕ್ಕೆ ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ರೈತರೊಬ್ಬರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಯಿತು. ಆದರೆ, ಆತ ಸಾವನ್ನಪ್ಪಿದ್ದು ಮನೆಯಲ್ಲಿ. ಆ ರೈತ ಪ್ರತಿಭಟನೆಯಲ್ಲಿ ಭಾಗವಹಿಸಿಯೇ ಇರಲಿಲ್ಲ. ಆದರೆ, ಕೆಲ ಶಾಸಕರು ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ’ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಸಾಲದ ಹೊರೆಯಿಂದಾಗಿ ತರೀಕೆರೆಯಲ್ಲಿ ರೈತ ಕುಟುಂಬದ ತಾಯಿ–ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಾಹಿನಿಗಳಲ್ಲಿ ಇತ್ತೀಚೆಗೆ ಪ್ರಸಾರವಾಯಿತು. ಆದರೆ, ಸಾಲ ಮಾಡಿದ್ದು ರೈತ ಮಹಿಳೆಯ ಮಾವ. ಅವರು ಸಾಲ ತೆಗೆದುಕೊಂಡಿದ್ದು ಮನೆ ಕಟ್ಟುವುದಕ್ಕೆ. ಇಂಥ ಸಾಲವನ್ನೆಲ್ಲಾ ಮನ್ನಾ ಮಾಡಲು ಸರ್ಕಾರ ಹಣವನ್ನು ಎಲ್ಲಿಂದ ತರಬೇಕು? ಎಂದು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸತ್ತರೆ ಯಾರು ಜವಾಬ್ದಾರಿ?

‘₹ 45 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದೇನೆ. ತಕ್ಷಣ ಇಷ್ಟೂ ಹಣ ಹೊಂದಿಸಲು ಹೇಗೆ ಸಾಧ್ಯ? ಸರ್ಕಾರಕ್ಕೂ ಹಂತ–ಹಂತವಾಗಿ ತೆರಿಗೆಯಿಂದ ಹಣ ಸಂಗ್ರಹವಾಗುತ್ತದೆ. ಆಗ್ಗಿಂದಾಗೇ ಸಾಲ ಮನ್ನಾ ಮಾಡಲಾಗುವುದು’ ಎಂದು ಕುಮಾರಸ್ವಾಮಿ ಹೇಳಿದರು.

ಸಾಲ ಮನ್ನಾ ಆಗದು ಎಂದು ಮಾಧ್ಯಮಗಳು ವರದಿ ಮಾಡುತ್ತವೆ. ಇದರಿಂದ ದುರ್ಬಲ ಮನಸ್ಸಿನ ರೈತರು ಆತ್ಮಹತ್ಯೆ ಮಾಡಿಕೊಂಡರೆ ಜವಾಬ್ದಾರಿ ಯಾರು ಹೊರಬೇಕು ಎಂದು ಪ್ರಶ್ನಿಸಿದರು.

ಎಚ್‌1ಎನ್‌1: ರಾಜ್ಯದಲ್ಲಿ ನಿಯಂತ್ರಣ

ಎಚ್‌1ಎನ್‌1 ಕರ್ನಾಟಕ ಸರ್ಕಾರ ನಿಯಂತ್ರಿಸುತ್ತಿದೆ. ಗುಜರಾತ್‌ನಲ್ಲಿ 1,646 ಮಂದಿಗೆ ಸೋಂಕು ತಗುಲಿದ್ದು, 51 ಜನ ಸತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 2,149 ಸೋಂಕಿತರಲ್ಲಿ 2,059 ಮಂದಿ ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ 1,988 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 200 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 1,050 ಮಂದಿಗೆ ಸೋಂಕು ತಗುಲಿದ್ದು, 19 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT